ಸಾರಾಂಶ
ಕೊಪ್ಪಳ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಬ್ರೇಕ್ ಹಾಕಬೇಕು ಮತ್ತು ಸಾರ್ವಜನಿಕರ ದುಡ್ಡು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಹೇಳಿದ್ದಾರೆ.
ಗುರುವಾರ ಕೊಪ್ಪಳ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಅ.29 ರಿಂದ 31 ವರೆಗೂ ಕೊಪ್ಪಳ ಜಿಲ್ಲೆಗೆ ಭೇಟಿ ನೀಡುತ್ತಿರುವ ಮಾಹಿತಿ ಸ್ಥಳೀಯವಾಗಿ ಆಯಾ ತಾಲೂಕಿನ ತಹಸೀಲ್ದಾರರು ಮತ್ತು ಗ್ರಾಪಂ ಹಂತದಲ್ಲಿ ಹೆಚ್ಚಿನ ಪ್ರಚಾರ ಮಾಡಿ ಜನರಲ್ಲಿಯೂ ಜಾಗೃತಿ ಮೂಡಿಸಿ ಎಂದು ಸೂಚಿಸಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಕೊಪ್ಪಳ ಜಿಲ್ಲೆಯ 105 ಕೇಸ್ ಪೆಂಡಿಂಗ್ ಇವೆ. ಕಂದಾಯ ಇಲಾಖೆ, ತಹಸೀಲ್ದಾರರು, ಸಹಾಯಕ ಆಯುಕ್ತರು ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಇತ್ಯರ್ಥ ಆಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಮಾತ್ರೆ ಸಿಗದಿದ್ದರೆ ಹೊರಗಡೆ ಬರೆದು ಕೊಡುತ್ತಾರೆ, ಹಾಗೆ ಆಗಬಾರದು. ಆಸ್ಪತ್ರೆಯಲ್ಲಿ ಔಷಧಿ ಕೊಡಬೇಕು. ಕೆಲ ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಜಿಲ್ಲೆಯಲ್ಲಿ ಎಷ್ಟು ನಕಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಪಟ್ಟಿ ಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರ ವಿತರಿಸುವುದರ ಜತೆಗೆ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆಯಲ್ಲಿ ಶಾಲೆಯ ಎಷ್ಟು ಕಟ್ಟಡ ಮಳೆಯಿಂದ ಬಿದ್ದು ಹೋಗಿವೆ. ನಗರಸಭೆ ಎಷ್ಟು ಖಾಸಗಿ ಭೂಮಿ ಅತಿಕ್ರಮಣ ಆಗಿದೆ ಎನ್ನುವುದರ ಮಾಹಿತಿ ನೀಡಬೇಕು. ಆಹಾರ ಸುರಕ್ಷತೆಯ ಅಧಿಕಾರಿಗಳು ಹೋಟೆಲ್ ಮತ್ತು ರಸ್ತೆಯ ಪಕ್ಕದಲ್ಲಿ ಆಹಾರ ತಯಾರಿಸುವವರು ಜನರು ತಿನ್ನುವ ಆಹಾರದಲ್ಲಿ ಕಲರ್ ಹಾಕುತ್ತಾರೆ, ಅದೆಲ್ಲವನ್ನು ಹಾಕಬಾರದು ಇದನ್ನು ಎಲ್ಲ ಕಡೆ ಹೋಗಿ ಪರಿಶೀಲನೆ ಮಾಡಬೇಕೆಂದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹೇಳಿದರು.
ಕೆಲವೊಂದು ಗ್ರಾಪಂಗಳಲ್ಲಿ ಸರಿಯಾದ ದಾಖಲೆ ನಿರ್ವಹಿಸುತ್ತಿಲ್ಲ. ಒಂದು ಬೋರವೆಲ್ ವರ್ಷದಲ್ಲಿ ಎಷ್ಟು ಸಲ ಕೆಡಬಹುದು ಆದರೆ, ತಿಂಗಳಲ್ಲಿ ಎರಡು ಸಲ ಕೆಟ್ಟಿದೆ ಎಂದು ಅನಾವಶ್ಯಕವಾಗಿ ಬಿಲ್ಲು ಮಾಡಿ ದುಡ್ಡು ಹೊಡೆಯುವ ಮೂಲಕ ಪಿಡಿಒ ಮತ್ತು ಗ್ರಾಪಂ ಅಧ್ಯಕ್ಷರು ಸೇರಿ ಜನರು ಕಟ್ಟಿದ ತೆರಿಗೆಯಲ್ಲಿ ಹಗಲು ದರೋಡೆ ಮಾಡುತ್ತಾರೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರ ಪ್ರತಿನಿಧಿಗಳು. ಈ ಕುರಿತು ಮಾಹಿತಿ ಪಡೆಯುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅರಣ್ಯ ಇಲಾಖೆಯ ಸರ್ಕಾರಿ ಭೂಮಿ ಜಿಲ್ಲೆಯಲ್ಲಿ ಎಷ್ಟು ಒತ್ತುವರಿಯಾಗಿದೆ. ಜಿಲ್ಲೆಯಲ್ಲಿ ಎಷ್ಟು ಫ್ಯಾಕ್ಟರಿ, ಕ್ವಾರಿ, ಗಣಿಗಳಿವೆ, ಇದರಲ್ಲಿ ಲೀಗಲ್, ಇಲ್ಲಿಗಲ್ ಎಷ್ಟಿವೆ. ಜಿಲ್ಲೆಯಲ್ಲಿ ಎಷ್ಟು ವಾಹನಗಳಿವೆ ಎನ್ನುವುದರ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು. ಕೃಷಿ ಇಲಾಖೆಯಲ್ಲಿ ಜನರು ಅರ್ಜಿ ಹಾಕಿದವರಿಗೆ ಲೋನ್ ಕೊಡಲ್ಲ. ಅರ್ಜಿ ಹಾಕದವರಿಗೆ ಲೋನ್ ಕೊಡುತ್ತಿರಾ. ಬೆಳೆ ಪರಿಹಾರ ಹಾಗೆ ಮಾಡುತ್ತಿರಾ, ಬೆಳೆ ಹಾಳಾದವರಿಗೆ ಪರಿಹಾರ ಬಂದಿರುವುದಿಲ್ಲ. ಆದರೆ ಪಕ್ಕದ ಹೊಲದವರಿಗೆ ಪರಿಹಾರ ಬಂದಿರುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ವಿಡಿಯೋ ಸಂವಾದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ದಾಖಲಾದ 105 ಕೇಸ್ ಪೆಂಡಿಂಗ್ ಉಳಿಯದಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರೆ ಎಲ್ಲ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ ಹಾಗೂ ತಾವು ಅ.29 ರಿಂದ 31 ರವರೆಗೆ ಜಿಲ್ಲೆಗೆ ಆಗಮಿಸುವ ಮಾಹಿತಿ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಲಾಗುವುದು ಎಂದು ಹೇಳಿದರು.ಈ ವಿಡಿಯೋ ಸಂವಾದದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.