ವಿದ್ಯಾಭವನದ ಎದುರು ಸ್ಕೈ ವಾಕ್‌ ನಿರ್ಮಾಣ ವಿಳಂಬಕ್ಕೆ ಜನಾಕ್ರೋಶ

| Published : May 23 2024, 01:48 AM IST / Updated: May 23 2024, 08:31 AM IST

ವಿದ್ಯಾಭವನದ ಎದುರು ಸ್ಕೈ ವಾಕ್‌ ನಿರ್ಮಾಣ ವಿಳಂಬಕ್ಕೆ ಜನಾಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ರೇಸ್‌ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಎದುರು ಕಳೆದ ಎರಡು ವರ್ಷದಿಂದ ನಿರ್ಮಾಣಗೊಳ್ಳುತ್ತಿರುವ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್‌) ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

 ಬೆಂಗಳೂರು :  ಅತ್ಯಂತ ವಾಹನ ದಟ್ಟಣೆಯಿರುವ ಚಾಲುಕ್ಯ ವೃತ್ತದ ಬಳಿಯ ರೇಸ್‌ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಎದುರು ಕಳೆದ ಎರಡು ವರ್ಷದಿಂದ ನಿರ್ಮಾಣಗೊಳ್ಳುತ್ತಿರುವ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್‌) ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ರಸ್ತೆಯ ಎರಡು ಬದಿಯ ಪಾದಚಾರಿ ಮಾರ್ಗದಲ್ಲಿ ಸ್ಕೈವಾಕ್‌ ಕಾಮಗಾರಿ ಚಾಲ್ತಿಯಲ್ಲಿ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಎಡಬಿಡದೇ ಓಡಾಡುವ ವಾಹನಗಳ ಮಧ್ಯೆ ರಸ್ತೆಯಲ್ಲಿ ಭಯದಿಂದ ನಡೆದಾಡಬೇಕಾದ ಸ್ಥಿತಿ ಇದೆ.

ಬಿಬಿಎಂಪಿಯು ನಗರದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇರುವ 15 ಸ್ಥಳಗಳನ್ನು ಗುರುತಿಸಿ ಪಾದಚಾರಿಗಳ ಓಡಾಟದ ಅನುಕೂಲಕ್ಕೆ ಸ್ಕೈವಾಕ್‌ ನಿರ್ಮಾಣ ಮಾಡಲು ಮುಂದಾಗಿತ್ತು, ಅವುಗಳಲ್ಲಿ ಈ ಸ್ಕೈವಾಕ್‌ ಸಹ ಒಂದಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆ ರೂಪಿಸಿ, ಖಾಸಗಿ ಸಂಸ್ಥೆಗೆ ನಿರ್ಮಾಣದ ಜವಾಬ್ದಾರಿ ವಹಿಸಿದ್ದು, ಖಾಸಗಿ ಸಂಸ್ಥೆಯೇ ನಿರ್ಮಾಣ ಸಂಪೂರ್ಣ ವೆಚ್ಚ ಭರಿಸಲಿದೆ.

ಜಾಗದ ಸಮಸ್ಯೆ:

ಭಾರತೀಯ ವಿದ್ಯಾಭವನದ ಬಳಿ ಜಾಗದ ಸಮಸ್ಯೆ ಎದುರಾಗಿದೆ. ಯೋಜನೆ ರೂಪಿಸುವಾಗ ಅಧಿಕಾರಿಗಳು ಸ್ಥಳದ ಸಮರ್ಪಕ ಅಳತೆ ಹಾಗೂ ಪರಿಶೀಲನೆ ಮಾಡಿಲ್ಲ. ಹೀಗಾಗಿ, ಭಾರತೀಯ ವಿದ್ಯಾಭವನ ಆವರಣದ ಒಳಗೆ ಮೆಟ್ಟಿಲುಗಳು (ಸ್ಟೇರ್‌ಕೇಸ್‌) ನಿರ್ಮಿಸುವ ಅನಿವಾರ್ಯತೆ ಇದೆ. ಆದರೆ, ಇದಕ್ಕೆ ಸಂಸ್ಥೆಯ ತೀವ್ರ ಆಕ್ಷೇಪ ಇರುವುದರಿಂದ ಕಾಮಗಾರಿ ನಿಂತಿದೆ.

ಇದೀಗ ಸಂಸ್ಥೆಯ ಆಡಳಿತ ಮಂಡಳಿಗೆ ಜಾಗ ನೀಡುವಂತೆ ಮನವಿ ಮಾಡಿದ್ದು, ಅಂತಿಮ ತೀರ್ಮಾನ ಆಗಿಲ್ಲ. ಹಾಗಾಗಿ, ಕಾಮಗಾರಿ ಹಿನ್ನೆಡೆ ಉಂಟಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ರಸ್ತೆ ಹಾಳು

ಕಳೆದ ಮೂರು ವರ್ಷದ ಹಿಂದೆ ಕೋಟ್ಯತರ ರುಪಾಯಿ ವೆಚ್ಚ ಮಾಡಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ರೇಸ್‌ ಕೋರ್ಸ್‌ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಉದ್ಘಾಟನೆಯಾಗಿ ಕೆಲವೇ ದಿನದಲ್ಲಿ ಸ್ಕೈವಾಕ್‌ ನಿರ್ಮಾಣ ಕಾರ್ಯ ಆರಂಭಿಸಿದ್ದರಿಂದ ರಸ್ತೆಯ ಎರಡು ಬದಿಯ ಪಾದಚಾರಿ ಮಾರ್ಗ ಹಾಗೂ ಸ್ಕೈಕಲ್‌ ಪಾತ್‌ ಕಿತ್ತು ಹಾಳು ಮಾಡಲಾಗಿದೆ.

2022ರ ಸೆಪ್ಟಂಬರ್‌ನಲ್ಲಿ ಸ್ಕೈವಾಕ್‌ ನಿರ್ಮಾಣ ಆರಂಭಿಸಿ, ಪೂರ್ಣಕ್ಕೆ 10 ತಿಂಗಳು ಅವಕಾಶ ನೀಡಲಾಗಿತ್ತು. ಆದರೆ, ಜಾಗದ ಸಮಸ್ಯೆ ಎದುರಾಗಿದ್ದರಿಂದ ಕಾರ್ಯ ವಿಳಂಬವಾಗಿದೆ. ಮುಂದಿನ ವಾರದಿಂದ ಮತ್ತೆ ಕಾಮಗಾರಿ ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು.

ಬಾಲಕೃಷ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಟಿಇಸಿ ವಿಭಾಗ, ಬಿಬಿಎಂಪಿ.

ತ್ವರಿತ ಪೂರ್ಣಕ್ಕೆ ಸಾರ್ವಜನಿಕರ ಆಗ್ರಹ

ರೇಸ್‌ ಕೋರ್ಸ್‌ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಹನ ದಟ್ಟನೆಯಿಂದ ಸಾರ್ವಜನಿಕರು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸುಲಭವಾಗಿ ದಾಟಲು ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಶೀಘ್ರವೇ ಸ್ಕೈವಾಕ್‌ ಪೂರ್ಣಗೊಳಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.