ಸಾರಾಂಶ
ಹುಬ್ಬಳ್ಳಿ: ಇಲ್ಲಿನ ಭುವನೇಶ್ವರಿ ನಗರ, ಹೆಗ್ಗೇರಿಯ ಜನತಾ ಮನೆ ಸೇರಿದಂತೆ ಅವಳಿ ನಗರದ ಹಲವು ಮನೆಗಳಿಗೆ ಎಲ್‌ಆ್ಯಂಡ್‌ಟಿ ಕಂಪನಿಯವರು ಸಾವಿರಾರು ರುಪಾಯಿ ಬಿಲ್ ನೀಡಿರುವುದನ್ನು ಖಂಡಿಸಿ ಗುರುವಾರ ಸಮತಾ ಸೇನಾ ಹಾಗೂ ಭುವನೇಶ್ವರಿ ಸೇವಾ ಸಂಘದಿಂದ ಪಾಲಿಕೆ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಮತಾ ಸೇನಾದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಭುವನೇಶ್ವರಿನಗರ ಹಾಗೂ ಅವಳಿನಗರದ ಅನೇಕ ಬಡಾವಣೆಗಳು 1980-81 ನೇ ಸಾಲಿನಲ್ಲಿ ನಿರ್ಮಾಣಗೊಂಡ ಮನೆಗಳ ನಿವಾಸಿಗಳು ಪಜಾ, ಪಪಂದವರಿದ್ದು, ತೀವ್ರ ಮನವಿ, ಹೋರಾಟಗಳ ನಂತರ 2005-06 ರಲ್ಲಿ ನೀರಸಾಗರ ಕೆರೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ 2007ರ ವರೆಗೆ ಮನೆ ಮನೆಗೆ ಸಂಪರ್ಕ ಕಲ್ಪಿಸಲಾಯಿತು.ಹೀಗೆ ಸಂಪರ್ಕ ಕಲ್ಪಿಸಿದ ಕೆಲವೇ ದಿನಗಳಲ್ಲಿ ₹ 10 ಸಾವಿರ, ₹12 ಸಾವಿರದ ಬಿಲ್ ನೀಡಲಾಯಿತು. ಹೀಗೆ ಮುಂದುವರೆದ ಬಿಲ್‌ಗಳು ₹ 30 ಸಾವಿರ ಮುಟ್ಟಿದಾಗ ನಾವು ಕುಡಿದ ನೀರಿಗೆ ಮಾತ್ರ ಬಿಲ್ ಕಟ್ಟುವ ಹೋರಾಟ ಆರಂಭಿಸಲಾಯಿತು. ಈ ಹೋರಾಟ ತೀವ್ರಗೊಂಡು ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಜಲ ಮಂಡಳಿಯು ಬಡ್ಡಿ ಮನ್ನಾ ಮಾಡುವ ಯೋಜನೆಯ ಕೋರಿಕೆ ಪತ್ರ ನೀಡಿ ಸದರಿ ಬಿಲ್‌ಗಳನ್ನು ತಿದ್ದುಪಡಿ ಮಾಡಿ ₹ 6,000, ₹7,500- ಹೀಗೆ ಬಿಲ್‌ಗಳನ್ನು ನೀಡಿ ಒಂದೇ ಬಾರಿಗೆ ಭರಣಾ ಮಾಡಿಸಿಕೊಂಡಿತು ಮತ್ತು ಮಾಸಿಕ ಮೀಟರ್ ಇದ್ದವರಿಗೆ ಬಳಕೆಯ ಪ್ರಮಾಣದಂತೆ ಮತ್ತು ಇತರರಿಗೆ ಕನಿಷ್ಠ ₹ 20 ಬಿಲ್ ನೀಡಲಾಗುತ್ತಿತ್ತು.
ಆದರೆ, ಕೆಲ ತಿಂಗಳುಗಳ ನಂತರ ಅದನ್ನು ಹಠಾತ್ ನಿಲ್ಲಿಸಿದ ಜಲ ಮಂಡಳಿ ಮರಳಿ ಬಿಲ್ ವಿತರಿಸಲಿಲ್ಲ. ಈಗ ಮತ್ತೆ ಕೆಲದಿನಗಳಿಂದ ಎಲ್‌ಆ್ಯಂಡ್‌ಟಿ ಬಿಲ್ ನೀಡುತ್ತಿದ್ದು, ಮನೆ-ಮನೆಗೆ ತಲಾ ₹70 ಸಾವಿರದಿಂದ ₹1 ಲಕ್ಷ ಮೀರಿದ ಬಿಲ್‌ಗಳನ್ನು ನೀಡುತ್ತಿದ್ದಾರೆ. ನಿತ್ಯ ದುಡಿದು ಜೀವನ ನಡೆಸುತ್ತಿರುವ ಬಡ ಕುಟುಂಬದವರೆ ಹೆಚ್ಚಾಗಿ ವಾಸಿಸುತ್ತಿರುವ ಬಡಾವಣೆಗಳಿಗೆ ಈ ರೀತಿ ಲಕ್ಷಾಂತರ ಬಿಲ್ ನೀಡಿದರೆ ಅವರ ಜೀವನ ನಡೆಸುವುದಾದರೂ ಹೇಗೆ. ಈ ಕುರಿತು ಪಾಲಿಕೆ ಆಯುಕ್ತರು ಆಗಿರುವ ತಪ್ಪನ್ನು ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.ಈ ವೇಳೆ ಹನಮಂತ ಮೂಲಿಮನಿ, ಎಂ.ವೈ. ಬಾಗಲಕೋಟ, ಗಣೇಶ ಮಿಶ್ರಿಕೋಟಿ, ಹನಮಂತ ಕೋಳೂರ, ಬಿ.ಎಂ. ದೊಡ್ಡಮನಿ, ಮಲ್ಲಪ್ಪ ಮ್ಯಾಗೇರಿ, ರತ್ನವ್ವ ಬೆಂಡಿಗೇರಿ, ಉಮೇಶ ಹಲಗಿ, ಮಂಜುಳಾ ಹಂಜಗಿ, ಸಂತೋಷ ಕದಂ, ವೈ.ಎಚ್. ಬಾಗಲಕೋಟಿ ಸೇರಿದಂತೆ ಹಲವರಿದ್ದರು.