ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಈ ಯೋಜನೆಗಳಿಗಾಗಿ ಅಣೆಕಟ್ಟು, ಬೃಹತ್ ಸುರಂಗಗಳು ಹಾಗೂ ಕಿಲೋಮೀಟರ್‌ಗಟ್ಟಲೆ ಪೈಪ್‌ಲೈನ್‌ಗಳನ್ನು ನಿರ್ಮಿಸಲು ಸಾವಿರಾರು ಎಕರೆ ಅರಣ್ಯವನ್ನು ನಾಶ ಮಾಡಬೇಕಾಗುತ್ತದೆ ಎಂದರು.

ಕಾರವಾರ: ಪ್ರಸ್ತಾವಿತ ಬೇಡ್ತಿ- ವರದಾ ಹಾಗೂ ಅಘನಾಶಿನಿ- ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಿ ‘ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಜಾಥಾ ಗುರುವಾರ ಕಾರವಾರ ತಲುಪಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಈ ಯೋಜನೆಗಳಿಗಾಗಿ ಅಣೆಕಟ್ಟು, ಬೃಹತ್ ಸುರಂಗಗಳು ಹಾಗೂ ಕಿಲೋಮೀಟರ್‌ಗಟ್ಟಲೆ ಪೈಪ್‌ಲೈನ್‌ಗಳನ್ನು ನಿರ್ಮಿಸಲು ಸಾವಿರಾರು ಎಕರೆ ಅರಣ್ಯವನ್ನು ನಾಶ ಮಾಡಬೇಕಾಗುತ್ತದೆ. ಇದು ಕೇವಲ ನದಿ ತಿರುವಲ್ಲ, ಬದಲಾಗಿ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಬರೆಯುತ್ತಿರುವ ಮರಣಶಾಸನ. ಈ ಯೋಜನೆಗಳಿಂದ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗುವುದಲ್ಲದೆ, ಜಿಲ್ಲೆಯಲ್ಲಿ ಭೀಕರ ಭೂಕುಸಿತಗಳು ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಸಿದರು.ನದಿಯಲ್ಲಿ ಹರಿಯುವ ನೀರು ಹೆಚ್ಚುವರಿ ಎಂಬ ಸರ್ಕಾರದ ವಾದವನ್ನು ತೀವ್ರವಾಗಿ ಖಂಡಿಸಿದ ಅವರು, ಮಳೆಗಾಲದ ಕೆಲವೇ ತಿಂಗಳುಗಳಲ್ಲಿ ನೀರು ಹೆಚ್ಚಿರುತ್ತದೆ. ಉಳಿದ ಎಂಟು ತಿಂಗಳು ಇಲ್ಲಿನ ರೈತರಿಗೇ ನೀರಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀರನ್ನು ತಿರುಗಿಸಿದರೆ ಸಮುದ್ರದ ಉಪ್ಪು ನೀರು ನದಿಮುಖ ಪ್ರದೇಶಗಳಿಗೆ ನುಗ್ಗಿ ಕೃಷಿ, ಮೀನುಗಾರಿಕೆ ಹಾಗೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಬಡವರ ಬದುಕಿನ ಮೇಲೆ ಸವಾರಿ ಮಾಡುವ ಇಂತಹ ಯೋಜನೆಗಳು ನಮಗೆ ಬೇಡ ಎಂದು ಆಗ್ರಹಿಸಿದರು.ಕಳೆದ 25 ವರ್ಷಗಳಿಂದ ನಡೆಯುತ್ತಿರುವ ಈ ಹೋರಾಟ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಜೂನ್‌ನಲ್ಲಿ ಸಲ್ಲಿಸಲಾದ 20 ಸಾವಿರ ಸಹಿಗಳ ಮನವಿಯ ಬೆನ್ನಲ್ಲೇ, ಈಗ ಜಿಲ್ಲಾದ್ಯಂತ ಒಂದು ಲಕ್ಷ ಜನರ ಸಹಿ ಸಂಗ್ರಹಿಸುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಅನೇಕ ಗ್ರಾಮ ಪಂಚಾಯಿತಿಗಳು ಹಾಗೂ ಸಹಕಾರಿ ಸಂಸ್ಥೆಗಳು ಈ ಯೋಜನೆಯ ವಿರುದ್ಧ ನಿರ್ಣಯ ಕೈಗೊಂಡಿವೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ನದಿ ತಿರುವು ಯೋಜನೆ ಜಾರಿಗೊಳಿಸದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಮೂಲಕ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಸಚಿವ ಆನಂದ ಅಸ್ನೋಟಿಕರ್, ವಕೀಲ ನಾಗರಾಜ ನಾಯಕ ಯೋಜನೆ ವಿರೋಧಿಸಿ ಮಾತನಾಡಿದರು. ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು, ಶಿರಸಿ, ಯಲ್ಲಾಪುರ, ಕುಮಟಾ ಸೇರಿದಂತೆ ವಿವಿಧ ತಾಲೂಕುಗಳ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ನದಿ ಉಳಿವಿಗಾಗಿ ಆಗ್ರಹಿಸಿದರು.

ಧೈರ್ಯವಿದ್ದರೆ ಮೇ ತಿಂಗಳ ಬಿಸಿಲಿನಲ್ಲಿ ಸರ್ವೆ ಮಾಡಿ: ರೂಪಾಲಿ ನಾಯ್ಕ್ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾನು 2019ರಲ್ಲಿ ಶಾಸಕಿಯಾಗಿದ್ದಾಗ ಗಂಗಾವಳಿ ನದಿ ಸಂಪೂರ್ಣ ಬತ್ತಿ ಹೋಗಿತ್ತು. ಆಗ ಜನರಿಗೆ ನೀರು ಕೊಡಲು ಸಿಮೆಂಟ್ ಚೀಲಗಳನ್ನು ಹಾಕಿ ಹಳ್ಳಗಳಲ್ಲಿ ನೀರು ನಿಲ್ಲಿಸಬೇಕಾದ ಸ್ಥಿತಿ ಇತ್ತು. ನಮ್ಮಲ್ಲಿ ಹೆಚ್ಚುವರಿ ನೀರಿದೆ ಎಂದು ಹೇಳುವವರಿಗೆ ಒಂದು ಸವಾಲು ಹಾಕುತ್ತೇನೆ, ಧೈರ್ಯವಿದ್ದರೆ ನೀವು ಮೇ ತಿಂಗಳ ಸುಡುವ ಬಿಸಿಲಿನಲ್ಲಿ ಇಲ್ಲಿಗೆ ಬಂದು ಸರ್ವೆ ಮಾಡಿ. ಆಗ ಇಲ್ಲಿನ ನದಿಗಳಲ್ಲಿ ಎಷ್ಟು ನೀರಿದೆ ಎಂಬ ಸತ್ಯ ನಿಮಗೆ ತಿಳಿಯುತ್ತದೆ. ಅಂಕೋಲಾದ 16 ಗ್ರಾಮಗಳು ಮತ್ತು ನೌಕಾನೆಲೆಗೆ ಕುಡಿಯುವ ನೀರು ನೀಡುವ ನದಿಗಳನ್ನು ತಿರುಗಿಸಿ ಜನರನ್ನು ಕೊಲ್ಲಲು ಹೊರಟಿರುವುದು ಯಾವ ನ್ಯಾಯ ಎಂದು ಅವರು ಆಕ್ರೋಶ ಹೊರಹಾಕಿದರು.