ಸಾರಾಂಶ
ದೇವನಹಳ್ಳಿ: ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ಯುವಕರು ಹೆಚ್ಚಾಗಿ ಮಾದಕ ವಸ್ತುಗಳ ಗುಲಾಮರಾಗುತ್ತಿದ್ದಾರೆ, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತು ಮುಕ್ತ ಜಿಲ್ಲೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಶಾ ಮುಕ್ತ ಕರ್ನಾಟಕ ಅಭಿಯಾನದಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಮಾದಕ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮ ಧ್ಯೇಯ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ಇಬ್ಬರು ಮಾಸ್ಟರ್ ತರಬೇತಿಗಳು ಇರುತ್ತಾರೆ, ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾದಕ ವಸ್ತು ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದು ಕೂಡ ಒಂದು ಚಟವಾಗಿದ್ದು, ಮೊಬೈಲ್
ಇಲ್ಲದೆ ಜೀವಿಸುವುದು ಕಷ್ಟಕರವಾಗಿದೆ. ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಹಾಗೂ ಹವ್ಯಾಸಗಳು ಸಹ ಮಾರಕ ಎಂದು ಹೇಳಿದರು.ನಶಾ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮನೋಚೈತನ್ಯ ಶಿಬಿರವನ್ನು ಹಮ್ಮಿಕೊಳ್ಳುಲಾಗುವುದು. ಜೊತೆಗೆ ಸಾರ್ವಜನಿಕರು ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಜೊತೆಯಾಗಬೇಕು. ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.
ಅಬಕಾರಿ ಇಲಾಖೆಯ ಡಿವೈಎಸ್ಪಿ ಧರಣಿ ಕುಮಾರ್ ಮಾತನಾಡಿ, ಮಾದಕ ವಸ್ತುಗಳು ವ್ಯಕ್ತಿಯ ದೇಹ ಮತ್ತು ಮೆದುಳನ್ನು ನಿರ್ವಹಿಸುವುದರಿಂದ ಆತ ಯಾರಿಗೆ ಏನು ಬೇಕಾದರು ಮಾಡಬಹುದು. ಯುವ ಸಮೂಹದವರು ಮೋಜಿಗಾಗಿ ಬಳಸಲು ಶುರು ಮಾಡುತ್ತಾರೆ, ಅದು ಕೊನೆಗೆ ಅವರ ಜೀವನದ ಅಂತ್ಯಕ್ಕೆ ಕೊಂಡೊಯ್ಯುತ್ತದೆ. ಮಾದಕ ವಸ್ತುಗಳಿಗಾಗಿ ಕಳ್ಳತನ, ಸುಲಿಗೆ ಮತ್ತು ಅಪರಾಧಗಳನ್ನು ಮಾಡುತ್ತಾರೆ. ಮಾದಕ ವಸ್ತುಗಳ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ 33 ಲಕ್ಷ ಜನರು ಸಾಯುತ್ತಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಪ್ರಕಾರ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬೆಳೆಯುವುದು, ಮಾರಾಟ ಮಾಡುವುದು, ಖರೀದಿ ಮಾಡುವುದು, ಸಾಗಣೆ ಮಾಡುವುದು, ಸೇವನೆ ಮಾಡುವುದು ಮತ್ತು ಸಂಗ್ರಹಣೆ ಮಾಡುವುದು ನಿಷೇಧ ಎಂದು ಹೇಳುತ್ತದೆ. ಈ ರೀತಿ ಕಂಡುಬಂದರೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಈ ರೀತಿಯ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಜಾಗೃತಿ ಮೂಡಿಸುವ ಸಲುವಾಗಿ ನಮ್ಮೊಂದಿಗೆ ಸಹಕರಿಸಬೇಕು ಎಂದರು.ಮಾನಸಿಕ ರೋಗ ತಜ್ಞ ಡಾ.ಗಿರೀಶ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ನರಮಂಡಲ, ನರಕೋಶ, ಹೃದಯ, ಮೂತ್ರ ಪಿಂಡ, ಶ್ವಾಸಕೋಶ, ಕ್ಯಾನ್ಸರ್ ಗೆ ಸಂಬಂದಿಸಿದ ಕಾಯಿಲೆಗಳು ಉಲ್ಬಣವಾಗುತ್ತದೆ. ಹಾಗೇ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ, ಕೈ ಕಾಲು ನಡುಗುವುದು, ಮೂರ್ಛೆ ಹೋಗುವುದು, ಅತಿರೇಕದ ಚಟುವಟಿಕೆ, ತೂಕದಲ್ಲಿ ಏರಿಳಿತ, ನಿದ್ದೆಯಲ್ಲಿ ಏರುಪೇರು ಹಾಗೂ ಪ್ರಜ್ಞೆಯಿಲ್ಲದ ರೀತಿ ವರ್ತಿಸುವುದು ಹೀಗೆ ಹಲವಾರು ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ.
ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ಕೆ.ಕೆ.ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕರು ವಿಠ್ಠಲ್ ಕಾವ್ಳೆ, ಅಬಕಾರಿ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎನ್.ಆರ್.ಎಲ್.ಎಂ ನ ಸ್ವಯಂ ಸೇವಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.11ಕೆಡಿಬಿಪಿ7- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಶ ಮುಕ್ತ ಕರ್ನಾಟಕ ಅಭಿಯಾನದಡಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))