ಸಾರಾಂಶ
ದಾಂಡೇಲಿ: ಯುವಕರಲ್ಲಿ ಪಕ್ಷಿಗಳ ಕುರಿತು ಜಾಗೃತಿ ಮತ್ತು ಅವುಗಳ ಉಳಿವಿಗಾಗಿ ಅರಿವು ಮೂಡಿಸುವುದು ಅರಣ್ಯ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ) ಸ್ಮಿತಾ ಬಿಜ್ಜೂರು ಹೇಳಿದರು.
ಅವರು ನಗರದ ಹಾರ್ನ್‌ಬಿಲ್ ಭವನದಲ್ಲಿ ಶನಿವಾರ ನಡೆದ ಹಾರ್ನ್‌ಬಿಲ್ ಹಕ್ಕಿ ಹಬ್ಬ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಸುಮಾರು ೫೯ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪ್ರಾಣಿ, ಪಕ್ಷಿಗಳ ರಕ್ಷಣೆಗಾಗಿ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂದರು.
ಕೆನರಾ ವೃತ್ತ ಶಿರಸಿ ವಿಭಾಗದ ಸಂರಣ್ಯಾಧಿಕಾರಿ ಕೆ.ವಿ. ವಸಂತ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಂಡೇಲಿಯಲ್ಲಿ ಸುಮಾರು ೫೦ ಸಾವಿರ ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಹಾರ್ನ್‌ಬಿಲ್ ಹಕ್ಕಿಗಳ ವಾಸಸ್ಥಳವಾಗಿದೆ. ಪಕ್ಷಿ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವದ ಅತಿ ಮುಖ್ಯ ಎಂದರು.ಕಾರವಾರ ವಿಭಾಗದ ರವಿಶಂಕರ ಸಿ,. ಕಾಳಿ ಹುಲಿ ಸಂರಕ್ಷಿತ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಶಿಂಧೆ ದೆವಬಾ, ಕಾರವಾರದ ಸಾಮಾಜಿಕ ಅರಣ್ಯ ವಿಭಾಗದ ಮಂಜುನಾಥ ಜಿ. ನಾವಿ, ಬೆಂಗಳೂರಿನ ಪರಿಸರ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ., ಕೆನರಾ ವೃತ್ತದ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಸಿ.ಕೆ., ಯಲ್ಲಾಪುರ ಅರಣ್ಯ ವಿಭಾಗದ ಹರ್ಷಾಭಾನು, ಹೊನ್ನಾವರ ವಿಭಾಗದ ಯೋಗೀಶ್ ಸಿ.ಕೆ. ಮುಂತಾದವರು ಇದ್ದರು.
ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ಷಿಕ ವರದಿ ವಾಚಿಸಿದರು. ದಾಂಡೇಲಿ ವಲಯ ಅರಣ್ಯಾಧಿಕಾರಿ ಸಂತೋಷ ಚವ್ಹಾಣ ಸ್ವಾಗತಿಸಿದರು. ಧಾರವಾಡದ ಆಕಾಶವಾಣಿ ನಿರೂಪಕಿ ಮೇಘಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.ಮೆರವಣಿಗೆ:ಮುಂಜಾನೆ ೮.೩೦ಕ್ಕೆ ನಗರಸಭೆಯಿಂದ ಪ್ರಾರಂಭವಾದ ಮೆರವಣಿಗೆಗೆ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ತಹಸೀಲ್ದಾರ್ ಮಹಾಂತೇಶ ಎನ್. ಮಠದ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಡಮಾಮಿ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ಹಾಗೂ ವಿವಿಧ ಕಲಾ ತಂಡಗಳು ಹಾರ್ನ್‌ಬಿಲ್ ಹಕ್ಕಿ ಜಾಗೃತಿ ಜಾಥಾ ಮೆರವಣಿಗೆಯಲ್ಲಿ ಇದ್ದವು. ಶಾಲಾ-ಕಾಲೇಜುಗಳ ಶಿಕ್ಷಕ ವೃಂದ, ಇತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ, ನಗರಸಭೆಯ ಸದಸ್ಯರು, ನಗರದ ಗಣ್ಯರನೇಕರು ಹಾರ್ನಬಿಲ್ ಹಕ್ಕಿ ಜಾಗೃತಿ ಜಾಥಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಾದು ನಗರದ ಬಸವೇಶ್ವರ ಪುತ್ಥಳಿಯ ಹತ್ತಿರ ಸಮಾವೇಶಗೊಂಡು ಬಸವೇಶ್ವರರ ಪುತ್ಥಳಿಗೆ ತಹಸೀಲ್ದಾರ್ ಮಹಾಂತೇಶ ಎನ್. ಮಠದ, ಪೌರಾಯುಕ್ತ ರಾಜಾರಾಮ ಪವಾರ ಮಾಲಾರ್ಪಣೆ ಮಾಡಿದರು. ಆನಂತರ ಮೆರವಣಿಗೆಯು ವೇದಿಕೆಗೆ ಸಾಗಿತು.