ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ಮನುವಾದಿಗಳು ಕುಳಿತಿರುವುದರಿಂದ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಕ್ಷಣೆ ಜವಾಬ್ದಾರಿ ವ್ಯಾಪಕಗೊಳ್ಳುವುದು ಅಗತ್ಯವೆಂದು ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಭಿಪ್ರಾಯಪಟ್ಟರು.ಕರ್ನಾಟಕದ ದಲಿತ ಚಳವಳಿಗೆ ಐವತ್ತು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಶನಿವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದಲಿತ ಸಂಘರ್ಷ ಸಮಿತಿ ಹುಟ್ಟುಹಾಕುವ ಮುನ್ನ ಪ್ರೊ.ಬಿ.ಕೃಷ್ಣಪ್ಪ ಸಮಾಜವಾದದಲ್ಲಿದ್ದರು. ಅಂಬೇಡ್ಕರ್‍ರವರ ವಾದದಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ ಎನ್ನು ವುದನ್ನು ಅರಿತು 1974ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದರು. ಅಂದಿನಿಂದ ಜೀವಿತದ ಕೊನೆಯುಸಿರಿರುವತನಕ ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯತಾರ ಪರವಾಗಿ ಹೋರಾಟ ಮಾಡಿಕೊಂಡು ಬಂದರು. ಪ್ರೊ.ಬಿ.ಕೃಷ್ಣಪ್ಪನವರ ಆಚಾರ, ವಿಚಾರ, ತತ್ವ ಸಿದ್ಧಾಂತಗಳ ಮೇಲೆ ದಲಿತರು ನಡೆಯಬೇಕಿದೆ ಎಂದರು.
ಬಗರ್‌ಹುಕುಂ ಪದವನ್ನು ಪರಿಚಯಿಸಿದ್ದೇ ಪ್ರೊ.ಬಿ.ಕೃಷ್ಣಪ್ಪ ಎನ್ನುವುದನ್ನು ದಲಿತರು ಮರೆಯಬಾರದು. ವಿದ್ಯಾವಂತರಾಗಿದ್ದ ಅವರು ಹೃದಯವಂತರಾಗಿದ್ದರು. ಅಧಿಕಾರದ ಆಸೆಗೆ ಚಳವಳಿಯನ್ನು ಬಲಿಕೊಡಲಿಲ್ಲ. ಹೆಂಡ ಬೇಡ ಹೋಬಳಿಗೊಂದು ವಸತಿ ಶಾಲೆ ತೆರೆಯಿರಿ ಎಂದು ಸರ್ಕಾರದ ಕಣ್ಣು ತೆರೆಸಿದ್ದರು. ನಮ್ಮ ಮಕ್ಕಳು ಈಗ ಓದುತ್ತಿದ್ದಾ ರೆಂದರೆ ಅದು ಡಿಎಸ್ಎಸ್ ಕೊಟ್ಟ ಬಳುವಳಿ. ಗಂಟೆ ಭಾರಿಸುವವರ ಮಕ್ಕಳು ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಿದ್ದಾರೆ. ಸಂವಿಧಾನ ರಕ್ಷಣೆ ಮಾಡಬೇಕಾಗಿರುವವರ ಮಕ್ಕಳು ಗಂಟೆ ಬಾರಿಸುತ್ತಿದ್ದಾರೆ ಎಂದರು. ಜೂ.9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನದಂದು ಅನೇಕ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಾಗುವುದು. ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕದ ದಲಿತ ಚಳುವಳಿಗೆ ಐವತ್ತು ವರ್ಷಗಳ ಸಂಭ್ರಮ ಆಚರಿಸುತ್ತಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಭಾಗವಹಿಸುವಂತೆ ಮನವಿ ಮಾಡಿದರು.ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ,ನಿವೃತ್ತ ಪ್ರಾಂಶುಪಾಲರಾದ ಭದ್ರಾವತಿಯ ಶಿವಬಸಪ್ಪ ,ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ವೈ.ರಾಜಣ್ಣ, ಕೆ.ಮಲ್ಲೇಶ್, ಹುಲ್ಲೂರು ಕುಮಾರ್, ಶ್ರೀನಿವಾಸ್‍ಮೂರ್ತಿ, ವಿಜಯ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.ಮಹನೀಯರ ಹೆಜ್ಜೆ ಗುರುತಿನಲ್ಲಿ ಸಾಗಿ
ಪ್ರೊ.ಬಿ.ಕೃಷ್ಣಪ್ಪನವರಲ್ಲಿ ತಾಕತ್ತು, ಗಟ್ಟಿಗುಂಡಿಗೆಯಿತ್ತು. ವೈಯಕ್ತಿಕ ಬದುಕನ್ನು ಬದಿಗೊತ್ತಿ ಹೋರಾಟವನ್ನೇ ತಮ್ಮ ಉಸಿರಾಗಿಸಿಕೊಂಡು ಬಂಡವಾಳಶಾಹಿಗಳು, ಭೂ ಮಾಲೀಕರುಗಳಲ್ಲಿ ನಡುಕ ಹುಟ್ಟಿಸಿದರು. ದಲಿತರಿಗೆ ನ್ಯಾಯ ಕೊಡಿಸಬೇಕೆಂದು ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡರು. ಕೋಲಾರದ ಹುಣಸೆಕೋಟೆಯ ಅನಸೂಯಮ್ಮನ ಮೇಲೆ ಅತ್ಯಾಚಾರವಾದಾಗ ಹುಣಸೆಕೋಟೆಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿದರು. ಚಂದ್ರಗುತ್ತಿಯಲ್ಲಿನ ದಲಿತ ಹೆಣ್ಣು ಮಕ್ಕಳ ಬೆತ್ತಲೆ ಸೇವೆಯನ್ನು ತಡೆದು ಬಟ್ಟೆ ತೊಡಿಸಿ ಮಾನ ಕಾಪಾಡಿದ ಕೀರ್ತಿ ಪ್ರೊ.ಬಿ.ಕೃಷ್ಣಪ್ಪನವರಿಗೆ ಸಲ್ಲಬೇಕು. ಒಂದುವರೆ ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿ ಪಿಟಿಸಿಎಲ್ ಐತಿಹಾಸಿಕ ಕಾಯಿದೆ ಜಾರಿಗೆ ಕಾರಣಕರ್ತರಾದವರು. ಅಂತಹ ಮಹನೀಯರ ಹೆಜ್ಜೆ ಗುರುತಿನಲ್ಲಿ ದಲಿತರು ಸಾಗಬೇಕಿದೆ ಎಂದು ಎಂ.ಗುರುಮೂರ್ತಿ ಹೇಳಿದರು.