ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಸುಮಾರು 400 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕಟೀಲು- ಕೊಂಡೇಲ ಎಂಬಲ್ಲಿ ದೈವಶಕ್ತಿಗಳನ್ನು ನಂಬುವ ದೈವಭಕ್ತರ ಅತೀ ಕುತೂಹಲಕ್ಕೆ ಗ್ರಾಸವಾದ ಅಪೂರ್ವ ಸಂದರ್ಭವೊಂದು ಸಾಕ್ಷಾತ್ಕಾರಗೊಳ್ಳಲಿದೆ. ಕಾರಣಿಕದ ಶ್ರೀ ಕೊಂಡೇಲ್ತಾಯ ದೈವದ ನೇಮೋತ್ಸವ ಫೆ.19ರಿಂದ ಆರಂಭಗೊಳ್ಳಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.ಶ್ರೀ ಕೊಂಡೇಲ್ತಾಯ ದೈವದ ಅಸ್ತಿತ್ವದ ಹಿನ್ನಲೆಯ ಪುರಾವೆ ಮನುಷ್ಯರೂಪದ ಶಿಲಾಮೂರ್ತಿಯೊಂದು ದೈವಸ್ಥಾನದ ಬಗೆಗಿನ ದೈವಜ್ಞರಿಂದ ನಡೆಸಲಾದ ಪ್ರಶ್ನಾಚಿಂತನೆಯ ಬಳಿಕ ಜೀರ್ಣೋದ್ಧಾರದ ವೇಳೆ ಪತ್ತೆಯಾಗಿದ್ದು ಸಮೀಪದ ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದ ವೇಳೆ ಈಗಲೂ ಕಟ್ಟುಕಟ್ಟಳೆಯ ( ಸಾಂಕೇತಿಕ ) ಕೊಂಡೇಲ್ತಾಯ ದೈವದ ನೇಮ ಜರಗುತ್ತಿದೆ.
90 ದಿನಗಳಲ್ಲಿ ಜೀರ್ಣೋದ್ಧಾರ ಸಾಕಾರ: ಹಿಂದಿನಿಂದಲೂ ಸ್ಥಳೀಯ ಹಿರಿಯರಾದ ವಾಮಯ್ಯ ಶೆಟ್ಟಿ ಎಂಬವರು ದೇವಸ್ಥಾನಕ್ಕೆ ಸಂಬಂಧಿಸಿ ಧಾರ್ಮಿಕ ಪ್ರಕ್ರಿಯೆಗಳ ನೇತೃತ್ವ ವಹಿಸಿದ್ದರು. ನಂತರದಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ದೊಡ್ಡಯ್ಯ ಶೆಟ್ಟಿ ಅವರು ಚೌತಿಹಬ್ಬ, ಸಂಕ್ರಮಣ ಮುಂತಾದ ಪರ್ವಗಳನ್ನು ನಡೆಸಿಕೊಂಡು ಬಂದಿದ್ದಾರೆ. ಪ್ರಸ್ತುತ ಕಳೆದ ಏಳು ವರ್ಷಗಳಿಂದ ಲೋಕಯ್ಯ ಸಾಲ್ಯಾನ್ ಕೊಂಡೇಲ ಅವರು ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ 2023 ನವಂಬರ್ 19 ರಂದು ಜೀರ್ಣೋದ್ಧಾರ ಸಂಕಲ್ಪದೊಂದಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ದು ಸರಿಯಾಗಿ 90 ದಿನಗಳಲ್ಲಿ ಶ್ರೀ ಕೊಂಡೆಲ್ತಾಯ, ಶ್ರೀ ರಕ್ತೇಶ್ವರಿ, ಶ್ರೀ ಪಂಜುರ್ಲಿ ದೈವಗಳ ದೇವಸ್ಥಾನಗಳು ನವನಿರ್ಮಾಣಗೊಂಡು ಫೆ.19 ರಿಂದ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಪ್ರತಿಷ್ಠೆ, ಕಲಶಾಭಿಷೇಕ ನಡೆದು ಫೆ.21ರಂದು ದೈವಗಳ ನೇಮೋತ್ಸವ ಸಂಪನ್ನಗೊಳ್ಳಲಿದೆ.ದೈವಗಳ ಭಂಡಾರ ಪರಿಕರ ಹೊಸತು: ಕೊಂಡೇಲ್ತಾಯ ಸಹಿತ ದೈವಗಳ ಮುಗ ಮೂರ್ತಿ ಭಂಡಾರ ಸಾಹಿತ್ಯ ಪರಿಕರ ಎಲ್ಲವನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತಿದ್ದು ಎಲ್ಲರ ಸಹಕಾರದೊಂದಿಗೆ ಜೀರ್ಣೋದ್ದಾರ ಕಾರ್ಯ ಪೂರ್ಣಗೊಳ್ಳುತ್ತಿದೆ ಎಂದು ಕೊಂಡೇಲ ಶ್ರೀ ಕೊಂಡೇಲ್ತಾಯ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಲೋಕಯ್ಯ ಸಾಲ್ಯಾನ್ ತಿಳಿಸಿದ್ದಾರೆ. ನಾಳೆಯಿಂದ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಫೆ.೨೧ರಂದು ಬುಧವಾರ ಬೆಳಿಗ್ಗೆ ಗಂಟೆ ೧೧.೩೭ಕ್ಕೆ ಸಿತ್ಲ ಮನೆತನದ ಶ್ರೀ ರಾಮಚಂದ್ರ ರಾವ್ ಇವರ ಪೌರೋಹಿತ್ಯದಲ್ಲಿ ಶ್ರೀ ಕೊಂಡೇಲ್ತಾಯ, ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದೆ ಎಂದು ಕೊಂಡೆಲ್ತಾಯ ದೈವಸ್ಥಾನದ ಅಧ್ಯಕ್ಷ ಲೋಕಯ್ಯ ಸಾಲಿಯಾನ್ ಕೊಂಡೆಲ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಫೆ.೧೯ರಂದು ಸೋಮವಾರ ಬೆಳಗ್ಗೆ ೯.೦೦ಕ್ಕೆ ಆಲಯ ಪರಿಗ್ರಹ, ೧೦ ಗಂಟೆಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಜೆ ೫.೩೦ಕ್ಕೆ ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜೆ, ದಿಕ್ಪಾಲ ಬಲಿ ಮತ್ತಿತರರ ಕಾರ್ಯಕ್ರಮಗಳು ನಡೆಯಲಿವೆ. ಫೆ.೨೦, ೨೧ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.೨೧ರಂದು ಬುಧವಾರ ರಾತ್ರಿ ಶ್ರೀ ಕೊಂಡೇಲ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಕಟೀಲ್ ಮಾತನಾಡಿ, ಫೆ ೧೯ರಂದು ಸಂಜೆ ೭.೦೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ವಹಿಸವರು. ಕಟೀಲು ದೇವಳದ ಪ್ರಧಾನ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಆಶೀರ್ವಾಚನ ನೀಡಲಿದ್ದಾರೆ. ಕೊಡೆತ್ತೂರು ಭವನಾಭಿರಾಮ ಉಡುಪ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು. ಫೆ.೨೧ರಂದು ಸಂಜೆ ೭ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೊಟ್ಯಾನ್ ಅಧ್ಯಕ್ಷತೆ ವಹಿಸುವರು. ಹರಿನಾರಾಯಣ ದಾಸ ಆಸ್ರಣ್ಣ ಧಾರ್ಮಿಕ ಉಪನ್ಯಾಸ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಭಯಚಂದ್ರ ಜೈನ್, ಕಟೀಲು ದೇವಳದ ಮುಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಗಣೇಶ್ ಶೆಟ್ಟಿ ಮಿತ್ತಬೈಲ್ತ್ತುಲ್, ದೊಡ್ದಯ್ಯ ಶೆಟ್ಟಿ ಪಾದೆಮನೆ, ವಿಕೇಶ್ ಕೋಟ್ಯಾನ್ ಜಲ್ಲಿಗುಡ್ಡೆ, ನವೀನ್ ಶೆಟ್ಟಿ ಪಾದೆಮನೆ, ಅಶೋಕ್ ಸುವರ್ಣ ಕಟೀಲು ಮತ್ತಿತರರು ಇದ್ದರು.