ಸಾರಾಂಶ
ರಾಮನಗರ: ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಫೆ.19 ರಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ತಿಳಿಸಿದರು.
ನಗರದ ವಕೀಲರ ಸಂಘದ ಆವರಣದಲ್ಲಿ 6ನೇ ದಿನಕ್ಕೆ ಕಾಲಿಟ್ಟ ವಕೀಲರ ಧರಣಿಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೆ ನಾವು ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಸಿದೆವು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನೇತಾಜಿ ಮಾರ್ಗದಲ್ಲಿ ಪ್ರಾಣದ ಹಂಗನ್ನು ಲೆಕ್ಕಿಸದೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಲಾಠಿಯಲ್ಲಿ ಹೊಡೆದರೂ, ಬಂದೂಕಿನಿಂದ ಗುಂಡು ಹಾರಿಸಿದರು ಹೆದರುವುದಿಲ್ಲ ಎಂದರು.ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿವೆರೆಗೆ ವಕೀಲರು ಮೆರವಣಿಗೆ ನಡೆಸುವರು. ನಂತರ ಅಲ್ಲಿಂದಲೇ ನಮ್ಮ ಉಗ್ರ ಹೋರಾಟ ಮುಂದುವರೆಯಲಿದ್ದು, ನ್ಯಾಯವಾದಿಗಳಿಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತೇವೆ ಎಂದರು.
ನಮ್ಮ ನಡೆ ರಾಮನಗರ ಕಡೆ:ರಾಮನಗರದಲ್ಲಿ ವಕೀಲರ ಮೇಲಿನ ಸುಳ್ಳು ಪ್ರಕರಣ ದಾಖಲು ಘಟನೆ ವಿರುದ್ಧ ರಾಜ್ಯದ 193 ಬಾರ್ ಕೌನ್ಸಿಲ್‌ಗಳ ವಕೀಲರು ಬೆಂಬಲ ಸೂಚಿಸಿದ್ದು, ನಮ್ಮ ನಡೆ ರಾಮನಗರ ಕಡೆ ಘೋಷ ವಾಕ್ಯದೊಂದಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಸೋಮವಾರ ಆಯಾಯ ಜಿಲ್ಲೆಗಳಲ್ಲಿ ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವರು. ಮಂಗಳವಾರದಿಂದ ಪ್ರತಿಭಟನೆಯಲ್ಲಿ ಪ್ರತಿ ದಿನವೂ ರಾಜ್ಯದ ಬೇರೆ ಬೇರೆ ಬಾರ್ ಕೌನ್ಸಿಲ್‌ಗಳ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಘಟನೆಗೆ ಸಂಬಂಧಿಸಿದ್ದಂತೆ ಜಿಲ್ಲಾ ನ್ಯಾಯಾಧೀಶರಿಂದ ಸಭೆ ನಡೆಸುವ ಸಂಬಂಧ ಜಿಲ್ಲಾ ವಕೀಲರ ಸಂಘಕ್ಕೆ ಪತ್ರ ಬಂದಿತ್ತು. ಆ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರಕಲಿಲ್ಲ. ಜತೆಗೆ, ಯಾವುದೇ ಪ್ರಶ್ನೆ ಕೇಳಿದರೂ ಎಸ್ಪಿ ಕಾರ್ತಿಕ್ ರೆಡ್ಡಿ ಮೇಲಧಿಕಾರಿಗಳ ಗಮನಕ್ಕೆ ತರಬೇಕೆಂದಷ್ಟೆ ಉತ್ತರಿಸುತ್ತಿದ್ದರು. ಇದು ಸಂಧಾನ ಕಾರ್ಯವೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಅದು ಮೇಲಧಿಕಾರಿಗಳಿಗೆ ತಿಳಿಸಲು ಆಯೋಜಿಸಿದ್ದ ಸಭೆಯಾಗಿತ್ತು ಎಂದು ಆರೋಪಿಸಿದರು.ಒಂದು ಮೂಲದ ಪ್ರಕಾರ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿಯೇ ಸಮಸ್ಯೆ ಬಗೆಹರಿಯಲೆಂದು ಅಧಿಕಾರಿಗಳೆಲ್ಲರು ಮೌನ ವಹಿಸಿದ್ದಾರೆಂದು ತಿಳಿದು ಬಂದಿದೆ. ಇಷ್ಟು ದಿನಗಳಾದರು ಯಾವುದೇ ಉತ್ತರ ಬಂದಿಲ್ಲ. ಸ್ಥಳೀಯ ಶಾಸಕರನ್ನು ವಕೀಲರ ಭೇಟಿ ಮಾಡಿದರು. ನನ್ನ ವಿಚಾರವಾಗಿ ತಪ್ಪು ಕಲ್ಪನೆ ಬೇಡ. ಇದರಲ್ಲಿ ನನ್ನ ಪಾತ್ರ ಇಲ್ಲವೆಂದು ಶಾಸಕರೇ ಹೇಳಿದ್ದಾರೆ. ಇನ್ನು ವಕೀಲರಲ್ಲಿ ಜಾತಿ ಧರ್ಮದ ಬೇಧಭಾವ ಇಲ್ಲ. ಹೊರಗಿನ ವ್ಯಕ್ತಿಗಳು ಜಾತಿ ಧರ್ಮವನ್ನು ಮಧ್ಯೆ ಎಳೆ ತರುತ್ತಿದ್ದಾರೆ. ಇದಕ್ಕೆಲ್ಲ ನಾವು ಅಂಜುವುದಿಲ್ಲ. ವಕೀಲರ ಹೋರಾಟದಲ್ಲಿ ಯಾವುದೇ ಸಮಸ್ಯೆಯಾದರೂ, ಅದಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೇ ನೇರ ಹೊಣೆಗಾರರು ಎಂದು ವಿಶಾಲ್ ರಘು ಎಚ್ಚರಿಸಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ತಿಮ್ಮೇಗೌಡ, ವಕೀಲರಾದ ಶಿವಣ್ಣಗೌಡ, ಮಂಜುನಾಥ್, ಮಂಜೇಶ್ ಗೌಡ ಇತರರಿದ್ದರು.ಕೋಟ್ ...
ವಕೀಲರ ಪ್ರತಿಭಟನೆ ನನ್ನ ಗಮನಕ್ಕೆ ಬಂದಿಲ್ಲ. ಆ ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ. ನನಗೆ ಆ ವಿಷಯವೂ ತಿಳಿದಿಲ್ಲ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ. ಈಗಷ್ಟೇ ಸ್ವಲ್ಪ ಮಾಹಿತಿ ಬಂದಿದೆ. ವಕೀಲರು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.-ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
17ಕೆಆರ್ ಎಂಎನ್ 9.ಜೆಪಿಜಿರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.