ಸಾರಾಂಶ
ಗದಗ: ತಂಬಾಕು ಬಳಕೆಯಿಂದ ಪರಿಸರ ಹಾಗೂ ನಮ್ಮ ಸುತ್ತ ಮುತ್ತಲಿನ ಪ್ರದೇಶ ಕಲುಷಿತ ಹಾಗೂ ಅನಾರೋಗ್ಯ ವಾತಾವರಣ ಉಂಟಾಗುತ್ತಿರುವುದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕ್ರಮವಹಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಂಯುಕ್ತಾಶ್ರಯದಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಕೋಟ್ಪಾ ಕಾಯ್ದೆ-೨೦೦೩, ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿನ ಸೌಲಭ್ಯಗಳ ಕುರಿತು ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್. ನೀಲಗುಂದ ಮಾತನಾಡಿ, ತಂಬಾಕು ನಿಯಂತ್ರಣ ಕುರಿತು ನಮ್ಮ ಇಲಾಖೆಯ ವತಿಯಿಂದ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಿಲ್ಲೆಯ ಪರಿಣಾಮಕಾರಿ ಅನುಷ್ಟಾನಕ್ಕೆ ಕ್ರಮಕೈಗೊಳ್ಳಲಾಗಿದೆ. ಕೋಟ್ಪಾ ಕಾಯ್ದೆ ಅನುಷ್ಠಾನಕ್ಕೆ ಮುಖ್ಯವಾಗಿ ಪೊಲೀಸ್ ಇಲಾಖೆಯ ಪ್ರಮುಖ ಪಾತ್ರವಹಿಸುತ್ತದೆ ಅದೇ ರೀತಿ ಸಹಕಾರ ಕೂಡ ನೀಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗಳು, ಅಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಶೀಘ್ರ ಚಿಕಿತ್ಸೆ ಪಡೆಯಲು ತಿಳಿಸಿದರು. ಜಿಲ್ಲಾ ವ್ಯಸನಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿವಿರವಾದ ಮಾಹಿತಿ ನೀಡಿದರು.ಉಪ ಪೊಲೀಸ್ ಅಧೀಕ್ಷಕ ಜೆ.ಎಚ್. ಇನಾಮದಾರ ಮಾತನಾಡಿ, ತಂಬಾಕು ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಕೋಟ್ಪಾ ಕಾಯ್ದೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ನಮ್ಮ ಇಲಾಖೆಯ ಸಹಕಾರ ಸದಾ ಇರುವುದಾಗಿ ತಿಳಿಸಿದರು.
ಜಿಮ್ಸ್ ಸಹ ಪ್ರಾಧ್ಯಾಪಕ ಡಾ. ಅರವಿಂದ ಕರಿನಾಗಣ್ಣವರ್ ಮಾತನಾಡಿ, ತಂಬಾಕಿನಲ್ಲಿರುವ ನಿಕೋಟಿನ್ ಅಂಶ ದೇಹದಲ್ಲಿ ಸೇರಿ ನರಮಂಡಲದ ಕಾರ್ಯದ ಮೇಲೆ ಪರೀಣಾಮ ಬೀರಿ ರಕ್ತ ಹಾಗೂ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ದೇಹದ ಪ್ರತಿಯೊಂದು ಅಂಗದ ಮೇಲೆ ಪರಿಣಾಮ ಬೀರುತ್ತದೆ. ತಂಬಾಕು ತ್ಯಜಿಸಲು ನಮ್ಮ ಜೀವನ ಶೈಲಿಯಲ್ಲಿ ಕೈಗೊಳಬೇಕಾದ ಬದಲಾವಣೆಗಳ ಕುರಿತು ಪರಿಣಾಮಕಾರಿ ರೀತಿಯಲ್ಲಿ ತಿಳಿಸಿದರು.ಈ ವೇಳೆ ಎನ್.ಟಿ.ಸಿ.ಪಿ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರಪುರ ಮಾತನಾಡಿದರು.
ವೃತ್ತ ಪೊಲೀಸ್ ನಿರೀಕ್ಷಕ ಬಿ.ಎ. ಜಾಧವ, ಶಿವಕುಮಾರ ಬಗಾಡೆ, ಪೈಯಾಜ ಎಂ. ಹಾಗೂ ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿಗಳು, ಪವಿತ್ರ, ಸಿದ್ದು ಎಸ್., ಯಮುನಾ ಇದ್ದರು. ಎಸ್.ಎಸ್. ಪೀರಾ ನಿರೂಪಿಸಿದರು. ವಿಠ್ಠಲ್ ನಾಯ್ಕ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ರಬ್ಬನಗೌಡರ ವಂದಿಸಿದರು.