ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವನಿಗೆ ರೋಗವಿಲ್ಲ

| Published : Feb 18 2024, 01:32 AM IST

ಸಾರಾಂಶ

ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವನಿಗೆ ರೋಗವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮನಗೌಡ ಪಾಟೀಲ್ ಹೇಳಿದರು.

ವಿಜಯಪುರ: ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವನಿಗೆ ರೋಗವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮನಗೌಡ ಪಾಟೀಲ್ ಹೇಳಿದರು. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದ ಜಿಲ್ಲಾ ಆಯುಷ್ ಆಸ್ಪತ್ರೆ ಘಟಕದಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದಿಂದ ಮಾಜಿ ಸೈನಿಕರಿಗಾಗಿ ಆಯೋಜಿಸಲಾಗಿದ್ದ ಉಚಿತ ಯೋಗ ಶಿಬಿರ ಉದ್ಘಾಸಿ ಮಾತನಾಡಿದರು. ಯೋಧರು ದೇಶ ಕಾಯುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಆದ್ರೆ ದೇಶಕ್ಕೆ ಯೋಧರು ಎಷ್ಟು ಮುಖ್ಯವೋ ಅವರಿಗೆ ಆರೋಗ್ಯವೂ ಅಷ್ಟೇ ಮುಖ್ಯವಾಗಿರುವುದರಿಂದ ಮಾಜಿ ಸೈನಿಕರು ನಿತ್ಯ ಯೋಗ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಯೋಗ ಉಚಿತ ಆರೋಗ್ಯ ಖಚಿತ ಎಂಬುದನ್ನು ಅರಿತು ಯೋಗಾಭ್ಯಾಸ ಶುರು ಮಾಡಬೇಕು ಎಂದರು.

ಶನಿವಾರದಿಂದ ಆರಂಭವಾದ ಉಚಿತ ಯೋಗ ಶಿಬಿರ ಒಂದು ವಾರ ನಡೆಯಲಿದ್ದು,ಬೆಳಗ್ಗೆ 6.30ರಿಂದ 7.30ರ ವರೆಗೆ ನಡೆಯಲಿದೆ. ಈ ಶಿಬಿರದಲ್ಲಿ 30ಕ್ಕು ಅಧಿಕ ಮಾಜಿ ಯೋಧರು ಭಾಗವಹಿಸುತ್ತಿದ್ದಾರೆ. ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ಉಪ ನಿರ್ದೇಶಕಿ ವಿನುತಾ ಮಾನ್ಯ, ವೈದ್ಯರಾದ ಡಾ.ಮಹೇಶ ನಾವದಗಿ, ಡಾ.ಸಿದ್ಧಲಿಂಗಯ್ಯ ಹಿರೇಮಠ, ಕಾಶಿಲಿಂಗ ಶೇಂಗಾವಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಘಟಕ ಮತ್ತು ಪಂಚಕರ್ಮ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.