ಸರ್ವರ್ ಸಮಸ್ಯೆ ಬಗೆಹರಿಸಲು ಸಾರ್ವಜನಿಕರ ಒತ್ತಾಯ

| Published : Oct 23 2023, 12:15 AM IST

ಸಾರಾಂಶ

ಸರ್ವರ್ ಸಮಸ್ಯೆ ಬಗೆಹರಿಸಲು ಸಾರ್ವಜನಿಕರ ಒತ್ತಾಯ

ರೇಷನ್ ಕಾರ್ಡ್ ತಿದ್ದುಪಡಿಗೆ ಮೂರ‍್ನಾಲ್ಕು ಬಾರಿ ಅವಕಾಶ ನೀಡಿದರೂ ಫಲವಿಲ್ಲ

ಹಮೀದ್ ಕೊಪ್ಪ

ಕನ್ನಡಪ್ರಭ ವಾರ್ತೆ, ಕೊಪ್ಪ

ರೇಷನ್ ಕಾರ್ಡ್ ತಿದ್ದುಪಡಿಗೆ ಮೂರ‍್ನಾಲ್ಕು ಬಾರಿ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ರೇಷನ್ ಕಾರ್ಡ್ ತಿದ್ದುಪಡಿ ಕೆಲಸ ಆಗುತ್ತಿಲ್ಲ ಎಂದು ಗ್ರಾಮಸ್ಥರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ 13.658 ಬಿಪಿಎಲ್ ಕಾರ್ಡುಗಳು 2484 ಅಂತ್ಯೋದಯ ಕಾರ್ಡುಗಳು, 5, 869 ಎಪಿಎಲ್ ಕಾರ್ಡುಗಳು ಸೇರಿದಂತೆ ಒಟ್ಟು 22,011 ರೇಷನ್ ಕಾರ್ಡುಗಳಿದ್ದು ಕೆಲವು ಕಾಡ್‌ಗಳಲ್ಲಿ ತಿದ್ದುಪಡಿಯಾಗಬೇಕಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಗ್ರಾಮ ಒನ್ ಕೇಂದ್ರದಲ್ಲಿ ಆಗಬೇಕಿದೆ. ಸರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಈವರೆಗೂ 4 ಬಾರಿ ತಿದ್ದುಪಡಿ ಆದೇಶ ಬಂದಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ತಾಲೂಕಿನಾದ್ಯಂತ ಸುಮಾರು 200ರಷ್ಟು ಕಾರ್ಡುಗಳ ತಿದ್ದುಪಡಿ ಮುಗಿದಿದೆ. ತಿದ್ದುಪಡಿ ಅವಕಾಶ ದೊರೆತಾಗಲೆಲ್ಲಾ ಗ್ರಾಮ ಒನ್ ಕೇಂದ್ರಗಳ ಎದುರಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ತಿದ್ದುಪಡಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಕಾರ್ಡುದಾರರು ಸರ್ವರ್ ಇಲ್ಲದೆ ನಿರಾಶರಾಗಿ ಹಿಂದಿ ರುಗುತ್ತಿದ್ದಾರೆ.ಕೂಲಿ ಮತ್ತು ತೋಟದ ಕೂಲಿ ಕಾರ್ಮಿಕರನ್ನೆ ಹೆಚ್ಚು ಹೊಂದಿರುವ ತಾಲೂಕಿನ ಪ್ರತಿಯೊಂದು ಗ್ರಾಮೀಣ ಭಾಗಗಳಲ್ಲೂ ನೆಟ್‌ವರ್ಕ್ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಇಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಸಾಧ್ಯ ವಾಗುತ್ತಿಲ್ಲ. ಹೀಗಾಗಿ ಗ್ರಾಮ ಒನ್ ಕೇಂದ್ರಗಳು ಪಟ್ಟಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿವೆ. ಇದರಿಂದ ರೇಷನ್ ತಿದ್ದುಪಡಿ ಮುಂತಾದ ಗ್ರಾಮ ಒನ್ ಕೇಂದ್ರಗಳಲ್ಲಾಗುವ ಕೆಲಸಗಳಿಗೆ ಬಸ್ಸುಗಳ ಸೌಕರ್ಯವೂ ಇಲ್ಲದೆ ಕುಗ್ರಾಮಗಳಿಂದ ಜನತೆ ಹತ್ತಾರು ಕಿ.ಮೀ. ದೂರದ ಗ್ರಾಮ ಒನ್ ಕೇಂದ್ರಗಳಿಗೆ ಬರುವುದು ಅನಿವಾರ್ಯವಾಗಿದೆ. ಬಂದರೂ ಸರ್ವರ್ ಸಮಸ್ಯೆ ಕಾರಣದಿಂದ ಸಮಯ, ಶ್ರಮ, ಹಣ ಎಲ್ಲವೂ ವ್ಯರ್ಥವಾಗಿ ಬರಿಗೈಯಿಂದ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ. ಸರ್ವರ್ ಸಮಸ್ಯೆ ಬಗೆಹರಿಸಲು ಸರ್ಕಾರ ಮತ್ತು ಇಲಾಖೆಗಳು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

---ಕೋಟ್ಸ್‌--

ಹಿಂದಿನಿಂದಲೂ ಸರ್ವರ್ ಸಮಸ್ಯೆ ಅತಿಯಾಗಿ ಕಾಡುತ್ತಿದ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು, ರೇಷನ್ ತಿದ್ದುಪಡಿ, ಸೇರಿದಂತೆ ಗ್ರಾಮ ಒನ್ ಕೇಂದ್ರಗಳಲ್ಲಿ ಆಗುವಂತಹ ಅನೇಕ ಕೆಲಸಗಳಿಗೆ ಹಿನ್ನೆಡೆಯುಂಟಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗದಂತೆ ಸಂಬಂಧಿಸಿದವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರತೀ ತಿಂಗಳ 15ನೇ ತಾರೀಖಿನ ನಂತರ ಸೊಸೈಟಿಗಳಲ್ಲಿ ಪಡಿತರ ವಿತರಣೆ ಆರಂಭವಾಗುತ್ತದೆ. ಇದೇ ಸಮಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿದಾಗ ಪಡಿತರ ವಿತರಣೆ ಹಾಗೂ ತಿದ್ದುಪಡಿಗೆ ಏಕಕಾಲದಲ್ಲಿ ಸರ್ವರ್ ಸ್ಪಂದಿಸದೆ ಸರ್ವರ್ ಸಮಸ್ಯೆ ಉಂಟಾಗುತ್ತಿರಬಹುದು. ತಿಂಗಳ ಆರಂಭದಿಂದಲೇ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದಲ್ಲಿ ಹೆಚ್ಚು ಕಾರ್ಡುಗಳ ತಿದ್ದುಪಡಿ ಸಾಧ್ಯವಾಗಬಹುದು.

-ಸತೀಶ್ ನಾಯ್ಕ್, ಜನಪರ ಚಿಂತಕರು, ಅಬ್ಬಿಗದ್ದೆ