ಜನಸಂಪರ್ಕ ಸಭೆ ಕಾಟಾಚಾರ ಆಗಬಾರದು: ಶಾಸಕ ತಮ್ಮಯ್ಯ

| Published : Feb 16 2025, 01:47 AM IST

ಸಾರಾಂಶ

ಗ್ರಾಮೀಣ ಭಾಗದ ಜನಸಂಪರ್ಕ ಸಭೆಗಳು ಗ್ರಾಮಸ್ಥರ ಮೂಲ ಸೌಕರ್ಯಕ್ಕೆ ಸ್ಪಂದಿಸುವ ಸಭೆಗಳಾಗಬೇಕು. ಕಾಟಾಚಾರದ ಸಭೆಗಳಾದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಆಯೋಜನೆ । ಹಳೇ ಸಮಸ್ಯೆಗಳ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮೀಣ ಭಾಗದ ಜನಸಂಪರ್ಕ ಸಭೆಗಳು ಗ್ರಾಮಸ್ಥರ ಮೂಲ ಸೌಕರ್ಯಕ್ಕೆ ಸ್ಪಂದಿಸುವ ಸಭೆಗಳಾಗಬೇಕು. ಕಾಟಾಚಾರದ ಸಭೆಗಳಾದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ತಾಲೂಕಿನ ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ಧ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ ಯೋಜನೆ, ವಿದ್ಯುತ್ ಸಮಸ್ಯೆ, ನೀರಾವರಿ ಸೌಲಭ್ಯಗಳ ಕೊರತೆ ಎದುರಾದಲ್ಲಿ ರೈತರು ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಮುಂದಿನ ಸಭೆಯೊಳಗೆ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಭೆ ನಡೆಸಿ ಪ್ರಯೋಜನವಿಲ್ಲ. ಹೀಗಾಗಿ ಹಳೇ ಅರ್ಜಿಗಳನ್ನು ಶೀಘ್ರವೇ ವಿಲೇವಾರಿಗೊಳಿಸಬೇಕು ಎಂದರು.

ದೇಶದ ಬೆನ್ನೆಲುಬು ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ವರ್ಷಕ್ಕೆ ಎರಡು ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಒಟ್ಟಾಗಿ ಕೈಜೋಡಿಸಿದರೆ, ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲು ಸುಲಭವಾಗಲಿದೆ ಎಂದರು.

ಜನಸಂಪರ್ಕ ಸಭೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾಟಾಚಾರದ ಸಭೆಗಳಾಗಬಾರದು. ಜನ ಸಾಮಾನ್ಯರ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಮುಂದಿನ ಸಭೆಯೊಳಗೆ ಹಿಂದಿನ ಅರ್ಜಿಗಳು ವಿಲೇಗೊಳಿಸಲು ಮುಂದಾಗಬೇಕು. ಹೊಸ ಅರ್ಜಿಗಳು ದಾಖಲಾಗುವಂತೆ ವ್ಯವಸ್ಥೆ ನಿರ್ಮಾಣಗೊಂಡರೆ ಶೇ.80 ರಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸಿದಂತೆ ಎಂದು ಹೇಳಿದರು.

ಬಿಳೇಕಲ್ಲಹಳ್ಳಿ ಮತ್ತು ಲಕ್ಕಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ 2.25 ಕೋಟಿ ರು. ವೆಚ್ಚ ದಲ್ಲಿ ಕಾಂಕ್ರೀಟ್ ರಸ್ತೆ, ಸಮುದಾಯ ಭವನ, ದೇವಾಲಯ, ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಮಳೆಗಾಲ ಆರಂಭವಾಗುವ ಮುನ್ನವೇ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದಿಂದ ನಿರ್ವಹಿಸಿ ಗ್ರಾಮಸ್ಥರಿಗೆ ಸಮರ್ಪಿಸಬೇಕು ಎಂದರು.

ಗ್ರಾಪಂ ವ್ಯಾಪ್ತಿಯ ಕಟ್ಟೆಹೊಳೆಗೆ ನೀರು ತುಂಬಿಸುವ ಕಾರ್ಯಕ್ಕೆ ಹಲವಾರು ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು ಮುಂಬರುವ ದಿನಗಳಲ್ಲಿ 1.5 ಕೋಟಿ ರು. ಅನುದಾನದಲ್ಲಿ ಹೊಳೆ ತುಂಬಿಸುವ ಕಾರ್ಯಕ್ಕೆ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಲಕ್ಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಶಶಿಕಲಾ ಮಾತನಾಡಿ, ಗ್ರಾಮೀಣ ನಿವಾಸಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಗ್ರಾಮಸ್ಥರು ರಸ್ತೆ, ವಿದ್ಯುತ್ ಸಂಪರ್ಕ ಇತರೆ ಸಮಸ್ಯೆಗಳಿಗೆ ಸಮಗ್ರ ಮಾಹಿತಿ ಒದಗಿಸುವ ಮೂಲಕ ಅಧಿಕಾರಿ ಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಸ್ಥಳೀಯ ಗ್ರಾಮಸ್ಥರು ಮಾತನಾಡಿ, ವಿದ್ಯುತ್ ಲೈನ್ ಹಾಗೂ ವೋಲ್ಟೇಜ್‌ ಸಮಸ್ಯೆಯಿದೆ. ಅನೇಕ ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಮೆಸ್ಕಾಂ ಸ್ಪಂದಿಸುತ್ತಿಲ್ಲ ಹಾಗೂ ಸ್ಥಳೀಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಶಾಸಕರಿಗೆ ತಿಳಿಸಿದಾಗ, ಸ್ಥಳದಲ್ಲಿದ್ದ ಕೆಇಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮುಂದಿನ ಮಾರ್ಚ್ ಅಂತ್ಯದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಬಿಳೇಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಭಾನುಪ್ರಕಾಶ್, ತಹಸೀಲ್ದಾರ್ ಡಾ.ಸುಮಂತ್, ತಾಪಂ ಕಾರ್ಯನಿರ್ವಹಕ ಅಧಿಕಾರಿ ವಿಜಯ್‌ಕುಮಾರ್, ಲಕ್ಕಮ್ಮನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣಗೌಡ, ಸದಸ್ಯರಾದ ಸಣ್ಣ ಕಾಟೇಗೌಡ, ಚಂದ್ರಶೇಖರ್‌, ರತ್ನಮ್ಮ, ಹರೀಶ್, ಯಶೋಧ, ಲತಾ, ಪಿಡಿಓ ಕೆ.ಬಿ.ಮಂಜೇಗೌಡ, ಕಾರ್ಯದರ್ಶಿ ಬಿ.ಟಿ.ರುದ್ರೇಶ್, ಬಿಳೇಕಲ್ಲಹಳ್ಳಿ ಗ್ರಾ.ಪಂ. ಸದಸ್ಯರಾದ ಜಗದೀಶ್, ನಾಗರತ್ನ, ಗೋಪಿಕೃಷ್ಣ, ಲೋಲಾಕ್ಷಿ ಹಾಜರಿದ್ದರು.