ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರದ ಜನಸ್ಪಂದನ ಉಪಯುಕ್ತ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.

| Published : Jun 27 2024, 01:06 AM IST

ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರದ ಜನಸ್ಪಂದನ ಉಪಯುಕ್ತ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಜನಸ್ಪಂದನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯ ಮಾಡುತ್ತಿದ್ದು, ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತುಕೊಂಡು ತಾಪಂ ಕಚೇರಿ ಆಗಮಿಸಿದ್ದು ಕಂಡು ಬಂತು.

ಈ ವೇಳೆ ಜಿಲ್ಲಾಧಿಕಾರಿಗಳು ಮನವಿಗೆ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯ ಮಾಡಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಪುರಸಭೆಯ ಮುಖ್ಯಾಧಿಕಾರಿ ಎಚ್. ಮಹೇಶ ಅವರನ್ನು ತರಾಟೆ ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ತಿಂಗಳಿಗೊಮ್ಮೆ ನೀರು ಬಿಡುತ್ತಿದ್ದರು, ಅದು ಸರಿ. ಈಗಲೂ ಸೋಮೇಶ್ವರ ನಗರಕ್ಕೆ ನೀರು ಬಿಡಿ ಎಂದು ನಾನು ನಿಮಗೆ ಫೋನ್ ಮಾಡಿ ಹೇಳಿದ್ದೇನೆ. ಆದಾರೂ ಬೇಜವ್ದಾರಿ ತೋರುತ್ತಿದ್ದೀರಿ. ಒಬ್ಬ ಮುಖ್ಯಾಧಿಕಾರಿ ಬೆಳಗ್ಗೆ ಎದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಶಿರಹಟ್ಟಿ ಮುಂಡರಗಿ ಮುಖ್ಯಾಧಿಕಾರಿಗಳನ್ನು ನೋಡಿ ಕಲಿತುಕೊಳ್ಳಿ ಎಂದು ತರಾಟೆ ತೆಗೆದುಕೊಂಡರು. ನಂತರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಮುಖ್ಯಾಧಿಕಾರಿ ಎಚ್. ಮಹೇಶ ಅವರಿಗೆ ಮೊದಲು ಜನರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿನ ಹೊಲಕ್ಕೆ ಹೋಗುವ ರಸ್ತೆಗಳ ಸಮಸ್ಯೆಗಳು ಹೆಚ್ಚಾಗಿವೆ, ಆದ್ದರಿಂದ ತಹಸೀಲ್ದಾರ್‌, ಕಂದಾಯ ನೀರಿಕ್ಷಕರು, ಪಿಡಿಒ ಹಾಗೂ ತಾಪಂ ಅಧಿಕಾರಿಗಳು ಸೇರಿಕೊಂಡು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕು, ನಕ್ಷೆಯಲ್ಲಿ ರಸ್ತೆಗಳಿದ್ದರೆ ಆ ಸಮಸ್ಯೆಗಳಿಗೆ 2-3 ದಿನಗಳಲ್ಲಿ ಪರಿಹಾರ ಒದಗಿಸಿಕೊಡುವ ಕಾರ್ಯ ಮಾಡುತ್ತೇವೆ. ಆದರೆ, ರಸ್ತೆ ಇಲ್ಲದೆ ಇರುವ ಹಾಗೂ ಹಲವು ವರ್ಷಗಳಿಂದ ರೈತರು ಸಂಚಾರ ಮಾಡುತ್ತಿರುವ ರಸ್ತೆಗಳಿಗೆ ಮಾನವೀಯತೆಯ ನೆಲೆಗಟ್ಟಿನ ಪರಿಹಾರ ಹುಡುಕುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಹೊಲದಲ್ಲಿನ ಬೆಳೆಯನ್ನು ಕಾಡು ಹಂದಿಗಳು, ಜಿಂಕೆ, ಮಂಗಗಳು ತಿಂದು ಹಾಳು ಮಾಡುತ್ತಿದ್ದು ಸೂಕ್ತ ಪರಿಹಾರ ಮಾಡಿಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುಲಗಂಜಿಕೊಪ್ಪ ಹಾಗೂ ಗೋವನಾಳ ಗ್ರಾಮಸ್ಥರು ಹಾಗೂ ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಟಾಕಪ್ಪ ಸಾತಪೂತೆ ಅವರೊಂದಿಗೆ ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಯಾವ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಪ್ರಶ್ನಿಸಿದಾಗ ಕಾಡು ಪ್ರಾಣಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದರೆ ಅದಕ್ಕೆ ಸರ್ಕಾರದ ಆದೇಶ ಬೇಕಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೊಂಡಿಕೊಪ್ಪ ಗ್ರಾಮದಲ್ಲಿನ ಆಶ್ರಯ ನಿವಾಸಿಗಳ ಕಾಲೋನಿಯಲ್ಲಿ ರಸ್ತೆ, ಚರಂಡಿ ಇಲ್ಲ. ಹೀಗಾಗಿ, ಕಳೆದ 70 ವರ್ಷಗಳಿಂದ ಇಲ್ಲಿನ ನಿವಾಸಿಗಳು ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಮಂಜುನಾಥ ರಾಠೋಡ ಮನವಿ ಮಾಡಿದರು.

ಗೊಜನೂರ ಗ್ರಾಮದಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ರಸ್ತೆಗಳು ಹಾಳಾಗಿ ಹೋಗಿದ್ದು, ದುರಸ್ತಿ ಮಾಡಿಸುವಂತೆ ಗ್ರಾಪಂ ಮಾಜಿ ಸದಸ್ಯ ಶಿವರಾಜಗೌಡ ಪಾಟೀಲ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ದೂದಪೀರಾ ದರ್ಗಾದ ಅಕ್ಕ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾರ್ಯ ಮಾಡುವಲ್ಲಿ ತೊಂದರೆಯಾಗುತ್ತಿದ್ದು ಸೂಕ್ತ ಪರಿಹಾರ ನಿಡುವಂತೆ ದರ್ಗಾ ಕಮಿಟಿ ಸದಸ್ಯರು ಮನವಿ ಮಾಡಿದರು.

ಶಿಗ್ಲಿ ಗ್ರಾಮದಲ್ಲಿ ನಮ್ಮ ತೋಟ ನಮ್ಮ ಹೊಲ ಯೋಜನೆ ಅಡಿಯಲ್ಲಿ ಮಂಜೂರಾದ ಜಾಗೆಯನ್ನು ನಮ್ಮ ಹೆಸರಿಗೆ ವರ್ಗಾಯಿಸಬೇಕು ಎಂದು ಗ್ರಾಮದ ಮಹಿಳೆಯರು ಮನವಿ ಮಾಡಿದರು.

ಈ ವೇಳೆ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಕೊಡ ಮಾಡಿದ 20 ಲ್ಯಾಪ್ ಟ್ಯಾಪ್‌ಗಳನ್ನು ವಿತರಣೆ ಮಾಡಲಾಯಿತು.

ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 81 ಅರ್ಜಿಗಳು ಸ್ವೀಕೃತವಾಗಿದ್ದವು ಎಂದು ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಹೇಳಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ, ಸಿಇಒ ಭರತ ಎಸ್. ತಹಸೀಲ್ದಾರ್ ವಾಸುದೇವಸ್ವಾಮಿ, ಇಒ ಕೃಷ್ಣಪ್ಪ ಧರ್ಮರ, ಮುಖ್ಯಾಧಿಕಾರಿ ಮಹೇಶ ಹಡಪದ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.