ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಗ್ರಾಮೀಣ ಭಾಗದ ಬಡತನ ಕುಟುಂಬಕ್ಕೆ ಸೇರಿದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ಕ್ಷೇತ್ರದ ಹಲವು ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಈ ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ, ಸಂಸ್ಕಾರಯುವ ಶಿಕ್ಷಣ ನೀಡುವ ಉದ್ದೇಶ ಇದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಹೊಳಲ್ಕೆರೆ ಸಮೀಪದ ಅಂತಾಪುರ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಪ್ರತಿ ಗ್ರಾಮೀಣ ಭಾಗದ ಮಗುವಿಗೆ ಉತ್ತಮ ಶಿಕ್ಷಣ ಸಿಗಬೇಕು. ಅವರು ಮೌಲ್ಯಯುತವಾಗಿ ಬೆಳೆಯಬೇಕು. ಸಮಾಜದಲ್ಲಿ ಅವರು ತಲೆ ಎತ್ತಿಕೊಂಡು ಬಾಳಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.ರೈತರು ಪಡುವ ಶ್ರಮ ನನಗೆ ಅರ್ಥವಾಗಿದೆ. ಆರು ವರ್ಷಗಳ ಕಾಲ ಹೊಟ್ಟೆ ಬಟ್ಟೆ ಕಟ್ಟಿ ಅಡಿಕೆ ತೋಟ ಬೆಳೆಸುತ್ತಾರೆ. ಅದು ನೀರು, ವಿದ್ಯುತ್ ಅಭಾವದಿಂದ ನಾಶವಾಗುವ ಹಂತಕ್ಕೆ ಬಂದರೆ ಅವರ ಬದುಕೇ ನಾಶವಾಗಿ ಹೋಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಮುಖ್ಯವಾಗಿ ಬೇಕಾದ ನೀರು ಮತ್ತು ವಿದ್ಯುತ್ ನೀಡುವ ಯೋಜನೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಪರಿಣಾಮವಾಗಿ ಚಿಕ್ಕಜಾಜೂರು ಸಮೀಪ ಕೋಟೆಹಾಳ್ ಗ್ರಾಮದಲ್ಲಿ ದೊಡ್ಡದಾದ ವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದರು.
ಕ್ಷೇತ್ರದ ಎಲ್ಲಾ ಕಡೆಗಳಲ್ಲಿಯೂ ಸುಸಜ್ಜಿತ ರಸ್ತೆಗಳು ಆಗಿವೆ. ಅಬ್ಬಿಗೆರೆಗೆ ತಲುಪುವ ರಸ್ತೆಗೂ ಅನುದಾನ ಕೊಟ್ಟು ಅದನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಮಾಡುತ್ತೇನೆ. ಸಿರಿಗೆರೆ ಸರ್ಕಲ್‌ನಿಂದ ಸಾಸಲು ನಿಲ್ದಾಣದವರಗೆ ಅತ್ಯುತ್ತಮ ರಸ್ತೆ ಆಗುತ್ತಿದೆ. ಜನರು ಹೋಗಿ ಒಮ್ಮೆ ಆ ರಸ್ತೆ ನೋಡಿಕೊಂಡು ಬನ್ನಿ. ೧೦೦ ಕೋಟಿ ರೂ.ಗಳ ಅನುದಾನವನ್ನು ಆ ರಸ್ತೆಗೆ ನೀಡಿದ್ದೇನೆ ಎಂದರು.
ತಾಲೂಕಿನ ಹಲವು ಕೆರೆಗಳಿಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ನೀರು ಒದಗಿಸಲಾಗುವುದು. ವಾಣಿ ವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರನ್ನು ತಂದು ಪ್ರತಿ ಮನೆಗೆ ನೀಡಲಾಗುವುದು. ಅದಕ್ಕಾಗಿ ಯೋಜನೆಯ ಕೆಲಸ ಸಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಅಂತಾಪುರದಲ್ಲಿ ನ್ಯಾಯಬೆಲೆ ಅಂಗಡಿಯ ಅಗತ್ಯ ಇರುವುದು ನನ್ನ ಗಮನದಲ್ಲಿದೆ. ಜಿಲ್ಲಾಧಿಕಾರಿಗಳು ಒಂದೆರಡು ತಿಂಗಳಿನಲ್ಲಿಯೇ ಜಿಲ್ಲೆಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಲು ಪ್ರಕಟಣೆ ಹೊರಡಿಸಲಿದ್ದಾರೆ. ಆಗ ಅಂತಾಪುರ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿಲಾಗುವುದು ಎಂದು ಭರವಸೆ ನೀಡಿದರು.ಹೊಳಲ್ಕೆರೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಶ್ರೀ ಸಿದ್ದೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ತಿಪ್ಪಣ್ಣ, ಮಾಚಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ರಂಗಪ್ಪ,ಶ್ರೀ ಡಿ. ಸಿ. ಮೋಹನ್, ಶ್ರೀ ಬಸವರಾಜ್ ನಾಯ್ಕ, ಶ್ರೀ ಲೋಕೇಶ್ ,ಶ್ರೀ ತಿಪ್ಪೇಶ್ ನಾಯ್ಕ,ಶ್ರೀ ರಾಜಣ್ಣ,ಶ್ರೀ ಪರಮೇಶಣ್ಣ,ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು,
ಹಾಲು ಕೊಡದ ಎಮ್ಮೆಗಳನ್ನೂ ಜೊತೆಗೆ ಕರೆದೊಯ್ಯುವೆರಾಜಕಾರಣಿಯಾದವನು ಚುನಾವಣೆ ವೇಳೆ ಹೀಗೆ ಬಂದ, ಮರುಳು ಮಾಡಿ ಜನರನ್ನು ನಂಬಿಸಿದ, ಓಟು ಹಾಕಿಸಿಕೊಂಡು ಗೆದ್ದ ಮೇಲೆ ಜನರ ಕಡೆ ತಿರುಗಿ ನೋಡಲಿಲ್ಲ. ಅಂತಹ ಮನೋಭಾವ ಇದ್ದರೆ ಮತದಾರರು ಒಪ್ಪುವುದಿಲ್ಲ. ಆದ್ಧರಿಂದ ಕ್ಷೇತ್ರದ ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ನನಗೆ ಕ್ಷೇತ್ರದಲ್ಲಿ ೪೯೩ ಎಮ್ಮೆಗಳಿವೆ, ನಾಲ್ಕಾರು ಎಮ್ಮೆಗಳು ಹಾಲು ಕೊಡದೆ ಒದ್ದುಕೊಳ್ಳುತ್ತವೆ. ಅಂತಹವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿರುವೆ ಎಂದು ಸೂಚ್ಯವಾಗಿ ತಿವಿದರು.