ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸರ್ಕಾರಿ ಸೇವೆಯಲ್ಲಿನ ಪ್ರಾಮಾಣಿಕತೆಯನ್ನು ಸಾರ್ವಜನಿಕ ವಲಯ ಗುರುತಿಸಿ, ಗೌರವಿಸುತ್ತದೆ. ಹಾಗಾಗಿ ಇರುವಷ್ಟು ಕಾಲ ಸೇವಾ ಮನೋಭಾವ ರೂಢಿಸಿಕೊಂಡಾಗ ಮನುಷ್ಯ ಜನ್ಮಕ್ಕೆ ಸಾರ್ಥಕತೆ ಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಹೇಳಿದರು.ತಾಲೂಕಿನ ಹಳೇಸೊರಬ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕಿ ಉಷಾ ಅವರಿಗೆ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿರುವ ನೌಕರರು ಒತ್ತಡದಲ್ಲಿದ್ದು, ನಿವೃತ್ತಿ ಆಗುವುದು ಒಂದು ಅದೃಷ್ಟ. ಸೇವಾವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಲ್ಲಿದ್ದವರು ಎಂದಿಗೂ ಜನಮಾನಸದಲ್ಲಿ ನೆಲೆ ನಿಂತಿರುತ್ತಾರೆ ಎಂದ ಅವರು, ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸುವುದು ಗ್ರಾಮದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದರು.ಶಿಕ್ಷಕ ವೃತ್ತಿಯಲ್ಲಿ ಹಲವು ಸವಾಲುಗಳಿವೆ. ದೂರದ ಗ್ರಾಮದಲ್ಲಿ ಸೇವೆ ಸಲ್ಲಿಸುವಾಗ ಸಂಚಾರದ ವ್ಯವಸ್ಥೆ ಇಲ್ಲದೇ ಮಕ್ಕಳ ಪ್ರಗತಿಗಾಗಿ, ಭವಿಷ್ಯಕ್ಕಾಗಿ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಾರೆ. ಶೈಕ್ಷಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಕ್ಷಕ ಸಮುದಾಯವನ್ನು ಸಮಾಜ ಗೌರವಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಳೇಸೊರಬ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಎನ್ನುವುದು ಅನಿವಾರ್ಯ. ಶಿಕ್ಷಕರನ್ನು ಸಮಾಜದಲ್ಲಿ ಅತ್ಯಂತ ಗೌರವದಿಂದ ನೋಡುವ ಪವಿತ್ರ ವೃತ್ತಿಯಾಗಿದೆ. ಅಧಿಕಾರದಲ್ಲಾಗಲಿ ಅಥವಾ ಯಾವುದೇ ಕ್ಷೇತ್ರದಲ್ಲಾಗಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಎದೆಯಲ್ಲಿ ಅಕ್ಷರ ಬಿತ್ತಿದ ಶಿಕ್ಷಕರಿಗೆ ತಲೆಬಾಗಿ ನಮಿಸಲೇಬೇಕು. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗಬೇಕು. ಸರ್ಕಾರಿ ಶಾಲೆಗಳ ಅಳಿವು, ಉಳಿವು ನಮ್ಮ ಕೈಯಲ್ಲಿದೆ ಎಂದರು.ಗ್ರಾ.ಪಂ. ಮಾಜಿ ಸದಸ್ಯ ಪ್ರಭಾಕರ ಮಾತನಾಡಿ, ಇಂದು ಆಂಗ್ಲ ಮಾದ್ಯಮ ಎನ್ನುವುದು ಫ್ಯಾಷನ್ ಆಗಿದೆ. ಹಾಗಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹ ಬಿಡಬೇಕು. ವ್ಯವಹಾರಿಕ ಭಾಷೆಯನ್ನಾಗಿ ಮಾತ್ರ ಸ್ವೀಕರಿಸಿ, ಕನ್ನಡವನ್ನು ಹೃದಯ ಭಾಷೆಯನ್ನಾಗಿಸಿಕೊಳ್ಳಬೇಕು ಎಂದು ಅವರು, ಕನ್ನಡ ಶಾಲೆಯಲ್ಲಿ ಕಲಿತ ಹಲವಾರು ವ್ಯಕ್ತಿಗಳು ಇಂದು ಉನ್ನತ ಸಾಧನೆ ಮಾಡಿದ್ದಾರೆ. ನಿವೃತ್ತಿ ಹೊಂದಿರುವ ಶಿಕ್ಷಕಿ ಉಷಾ ಮಕ್ಕಳ ಕಲಿಕೆಗೆ ಪ್ರೇರಣೆ ನೀಡಿ. ಮಕ್ಕಳ ಶೈಕ್ಷಣಿಕ ಪ್ರಗತಿ ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜೆ. ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಬಿ.ಆರ್.ಪಿ. ಮಂಜಪ್ಪ, ಶಿಕ್ಷಕ ಸದಾನಂದ, ಗ್ರಾಮಾಭಿವೃದ್ಧಿ ಸಲಹಾ ಸಮಿತಿ ಉಪಾಧ್ಯಕ್ಷ ವಾಸಪ್ಪ, ಮಾಜಿ ಅಧ್ಯಕ್ಷ ಜಿ. ಕೆರಿಯಪ್ಪ, ಗ್ರಾ.ಪಂ. ಮಾಜಿ ಸದಸ್ಯ ಗುರುನಾಥಗೌಡ, ಜೆ. ರಮೇಶ್, ಶಶಿಕಲಾ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಹೆಚ್. ಭರತ್, ಗಣಪತಿ, ರವಿ, ಛತ್ರಪತಿ, ದಿವಾಕರ, ಏಳುಕೋಟಿ, ಸತೀಶ, ಉಮೇಶ್, ತೇಜಪ್ಪ, ರೇಷ್ಮಾ, ರೇಖಾ ನಾರಾಯಣಪ್ಪ ಮೊದಲಾದವರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))