ಕನ್ನಡಪ್ರಭ ಗಮನ ಸೆಳೆದ ಕೂಡ್ಲಿಗಿ ತಾಲೂಕಿನ ಊರಿಗೆ ಊರುಗಳೇ ಗುಳೇ ಸರಣಿ ವರದಿ
ಭೀಮಣ್ಣ ಗಜಾಪುರ ಕೂಡ್ಲಿಗಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮಹತ್ವಾಕಾಂಕ್ಷಿ ಘೋಷಣೆ "ಪ್ರಜಾಸೇವೆ " ನೂತನ ಇಲಾಖೆಯ ಉದ್ಘಾಟನೆ ಸೆ.5 ರಂದು ಕೂಡ್ಲಗಿಯಲ್ಲಿ ನೆರವೇರಲಿದೆ.ಇದಕ್ಕೆ ಪ್ರಮುಖ ಕಾರಣ "ಕನ್ನಡಪ್ರಭ " ಇಲ್ಲಿನ ಬರಗಾಲ, ಗುಳೆ ಸೇರಿದಂತೆ ಪ್ರಮುಖ ಸಂಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದು ಮತ್ತು ಈ ವರದಿಗಳಿಗೆ ಸ್ಪಂದಿಸಿ ಕೂಡ್ಲಿಗಿ ಕಾಂಗ್ರೆಸ್ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅವರು ಕೈಕೊಂಡ ಜನಪರ ಕಾರ್ಯಕ್ರಮಗಳು ಫಲದಾಯಕ ಆಗಿರುವುದು!
ಬರಗಾಲ, ಗುಳೆಯಂಥ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸಿ ಜನರಲ್ಲಿ ಆಶಾದಾಯಕ ಭರವಸೆ ಹುಟ್ಟಿಸಿದ್ದರಿಂದ ಈ ಕಾರ್ಯ "ಕೂಡ್ಲಗಿ ಮಾಡೆಲ್ " ಎಂದು ಸರ್ಕಾರ ಮಟ್ಟದಲ್ಲಿ ಪ್ರಚಲಿತವಾಗಿದೆ. ಒಂದರ್ಥದಲ್ಲಿ ಪ್ರಜಾಸೇವೆ ಇಲಾಖೆ ಆರಂಭಕ್ಕೆ ಇದುವೇ ಪ್ರಮುಖ ಕಾರಣವಾಗಿದೆ. ಹಾಗಾಗಿ ಪ್ರಜಾಸೇವೆ ಉದ್ಘಾಟನೆಗೆ ಈ ಕೂಡ್ಲಗಿ ತಾಲೂಕನ್ನು ಸರ್ಕಾರ ಆಯ್ಕೆ ಮಾಡಿದೆ.ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಹಲವು ಶಾಸಕರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.
ಕಾರ್ಮಿಕನಾದ ಶಾಸಕ: ಗುಳೇ ತಪ್ಪಿಸಲು ಕಾರ್ಮಿಕರ ಜತೆ ಕೂಲಿ ಕೆಲಸದವರಂತೆ ಮಾಡಿ ಜಿರಾಮ್ ಜಿ ಯೋಜನೆ ಸಕ್ಸಸ್ ಮಾಡಿದ್ದು, ಆ ಕಾರ್ಯ ಕನ್ನಡಪ್ರಭ ಮುಖಪುಟದಲ್ಲಿ ಸರಣಿ ವರದಿ ಪ್ರಕಟಿಸಿ ಸರ್ಕಾರ, ಮುಖ್ಯಮಂತ್ರಿ, ಸಚಿವರ ಗಮನ ಸೆಳೆದಿದೆ ಎಂದು ಕೂಡ್ಲಿಗಿ ಕ್ಷೇತ್ರದ ಶಾಸಕರೇ ಕನ್ನಡಪ್ರಭ ಸರಣಿ ವರದಿಗಳ ಕಡೆ ಬೊಟ್ಟು ತೋರಿಸುತ್ತಾರೆ.ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕೂಡ್ಲಿಗಿ ತಾಲೂಕಿನಲ್ಲಿ ಈ ಬಾರಿ ಭೀಕರ ಬರ ಬಂದಾಗ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವುದರ ಮೂಲಕ ಇಲ್ಲಿಯ ರೈತರಿಗೆ ವರವಾಗುವ ಕಾರ್ಯ ಮಾಡಿದ ಬೆನ್ನಲ್ಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರಾದ್ಯಂತ ನಿರಂತರ ಆರೋಗ್ಯ, ಶಿಕ್ಷಣ, ರಸ್ತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿ ಕೋಟಿ ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಬರಕ್ಕೆ ಸೆಡ್ಡು ಹೊಡೆದು ಜಿರಾಮ್ ಜಿ ಉದ್ಯೋಗ ಖಾತ್ರಿ ಕೂಡ್ಲಿಗಿ ತಾಲೂಕಿನಲ್ಲಿ ತಾವೇ ಗುದ್ದಲಿ ಸಲಾಕೆ ಹಿಡಿದುಕೊಂಡು ಮಣ್ಣು ಅಗದೆ ಪುಟ್ಟಿಯಲ್ಲಿ ಹೊತ್ತು ಕೂಲಿಕಾರ್ಮಿಕರನ್ನು ಉರಿದುಂಬಿಸಿದ್ದರು.
ಜು.5ರಂದು ಬಾರದ ಮಳೆ, ಕೂಡ್ಲಿಗಿ ತಾಲೂಕಿನ ಹಳ್ಳಿ ಹಳ್ಳಿಗಳು ಗುಳೇ ಎನ್ನುವ ಶೀರ್ಷಿಕೆಯಡಿ ರಾಜ್ಯದ ಬರದ ಭೀಕರತೆ ಪ್ರಕಟಿಸಿದ್ದು, ಅಲ್ಲದೇ ಗುಳೇ ತಡೆಗೆ ಕಾರ್ಮಿಕರ ಜತೆಗೆ ಕೂಡ್ಲಿಗಿ ಶಾಸಕ ಕೂಲಿ ರೀತಿ ಕೆಲಸ ಎನ್ನುವ ಶೀರ್ಷಿಕೆಯಡಿ ಕನ್ನಡಪ್ರಭ ಮುಖಪುಟದಲ್ಲಿ ಆ.17 ರಂದು ವಿಶೇಷ ವರದಿ ಪ್ರಕಟ ಮಾಡಿತ್ತು. ಕೂಡ್ಲಿಗಿ ಶಾಸಕರು ಗುಳೇ ತಪ್ಪಿಸಲು ಕೂಲಿಕಾರ್ಮಿಕರ ರೀತಿ 2 ಗಂಟೆಗೂ ಹೆಚ್ಚು ಕಾಲ ಶ್ರಮದಾನ ಮಾಡುವ ಮೂಲಕ ಇಡೀ ರಾಜ್ಯದಲ್ಲಿಯೇ ಮಾದರಿ ಶಾಸಕರಾಗಿ ಬಿಂಬಿತರಾಗಿದ್ದನ್ನು ಸ್ಮರಿಸಬಹುದು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಗ್ರಾಮೀಣಾಭಿವೖದ್ಧಿ ಹಾಗೂ ಪಂಚಾಯ್ತ್ ರಾಜ್ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಲವು ಸಚಿವರು ಕನ್ನಡಪ್ರಭ ಮುಖಪುಟ ವರದಿಗಳು ಬಂದಾಗ ನೀನು ಒಳ್ಳೆಯ ಕೆಲ್ಸಾ ಮಾಡ್ತೀಯಾ, ಕೂಡ್ಲಿಗಿ ತಾಲೂಕಿನಲ್ಲಿ ಬಡತನ, ಗುಳೇ ಹೋಗುವ ರೈತರಿದ್ದಾರೆ. ಅವರನ್ನು ಮನವೊಲಿಸಿ ಜಿ ರಾಮ್ ಜಿ ಉದ್ಯೋಗಖಾತ್ರಿ ಸಕ್ಸಸ್ ಮಾಡ್ತಿದ್ದೀಯಾ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು ಎಂದು ಕೂಡ್ಲಿಗಿ ಶಾಸಕರೇ ಕನ್ನಡಪ್ರಭದ ಜತೆ ಸಂತಸ ಹಂಚಿಕೊಂಡಿದ್ದರು.
ನಾನು ಶಾಸಕನಾಗಿ ಮಾಡುತ್ತಿರುವ ಜನಪರ ಕೆಲಸಗಳ ಬಗ್ಗೆ ಕನ್ನಡಪ್ರಭ ಮುಖಪುಟದಲ್ಲಿ ಪ್ರಕಟವಾದ ಸರಣಿ ವರದಿ, ನಿರಂತರ ಬರದಿಂದ ಗುಳೇ ಹೋಗುತ್ತಿರುವುದರಿಂದ ಕೂಡ್ಲಿಗಿ ಕ್ಷೇತ್ರವನ್ನು ಮುಖ್ಯಮಂತ್ರಿಗಳು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಕನ್ನಡಪ್ರಭದಲ್ಲಿ ಪ್ರಕಟವಾದ ಸರಣಿ ವರದಿ ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ. ಈ ಹಿಂದೆ ಕೂಡ್ಲಿಗಿ ತಾಲೂಕಿನ ವಲಸೆ ಗ್ರಾಮದ ಕುಟುಂಬ ಊರಲ್ಲಿ ಮನೆ ಇಲ್ಲದಿದ್ದರಿಂದ ತಮ್ಮ ಜಮೀನಿನಲ್ಲಿ 5 ಹೆಣ್ಣಮಕ್ಕಳ ಜತೆ ಜೋಪಡಿಯಲ್ಲಿ ವಾಸ ಮಾಡುತ್ತಿದ್ದಾರೆ ಎನ್ನುವ ಕನ್ನಡಪ್ರಭ ವಿಶೇಷ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಓದಿ ನನಗೆ ಪೋನ್ ಮಾಡಿ ಹೇಳಿದ್ದರು. ಈ ಕೂಡಲೇ ಅವರಿಗೆ ಮನೆಯನ್ನು ಆನ್ ಲೈನ್ ಲಾಕ್ ಓಪನ್ ಮಾಡಿ ಹಕ್ಕುಪತ್ರ ನೀಡುವಂತೆ ಆದೇಶ ಮಾಡಿದ್ದರು. ಇಂತಹ ಕೂಡ್ಲಿಗಿ ತಾಲೂಕಿನಲ್ಲಿ ಇಷ್ಟೊಂದು ಬಡತನ ಇದೆ. ಸಾಮೂಹಿಕ ಗುಳೇ ಹೋಗುತ್ತಿದ್ದಾರೆ ಎಂದು ಮೊದಲು ಕನ್ನಡಪ್ರಭ ಸರಣಿ ವರದಿಗಳು ಮಾಡಿದ್ದು ಸಹ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿವೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದ್ದಾರೆ.