ಜನರ ಸಮಸ್ಯೆಗಳಿಗೆ ಕಚೇರಿಗಳಿಗೆ ಸುತ್ತಾಟ ತಪ್ಪಿಸಲು ರಾಜ್ಯ ಸರ್ಕಾರ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಆರಂಭಿಸಿದೆ ಯಶಸ್ವಿಯಾಗಿಯೂ ನಡೆಯುತ್ತಿದೆ ಎಂದು ಪಶು ಸಂಗೋಪನೆ, ರೇಷ್ಮೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜನರ ಸಮಸ್ಯೆಗಳಿಗೆ ಕಚೇರಿಗಳಿಗೆ ಸುತ್ತಾಟ ತಪ್ಪಿಸಲು ರಾಜ್ಯ ಸರ್ಕಾರ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಆರಂಭಿಸಿದೆ ಯಶಸ್ವಿಯಾಗಿಯೂ ನಡೆಯುತ್ತಿದೆ ಎಂದು ಪಶು ಸಂಗೋಪನೆ, ರೇಷ್ಮೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಪಟ್ಟಣದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರ ಸಮಸ್ಯೆ ಬಗೆಹರಿಸಲು ತಿಂಗಳ ಪ್ರತಿ ಮೊದಲನೇ ಹಾಗೂ ಮೂರನೇ ಶನಿವಾರ ಜಿಲ್ಲಾ ಮಟ್ಟದ ಪ್ರಜಾ ಸೇವೆ ನಡೆಸುತ್ತಿದ್ದೇನೆ.ಜಿಲ್ಲೆಯ ಶಾಸಕರು ಅವರ ಕ್ಷೇತ್ರದಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಪ್ರತಿ ಶನಿವಾರ ನಡೆಸುತ್ತಿದ್ದಾರೆ ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಪ್ರಜಾಸೇವೆ ಆಂದೋಲನ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆಸಲಾಗಿದೆ.ಸಾರ್ವಜನಿಕರು ನೀಡುವ ಅರ್ಜಿಗೆ ಸ್ಥಳದಲ್ಲೇ ಕ್ರಿಯರ್‌ ಮಾಡಲಾಗುತ್ತದೆ. ಕೆಲವು ಅರ್ಜಿಗಳಿಗೆ ಸ್ವೀಕೃತಿ ನೀಡಿ ಸಮರ್ಪಕ ಉತ್ತರ ನೀಡಲಾಗುತ್ತಿದೆ ಎಂದರು.

ಮೇವಿಗೆ ₹೨೫ ಕೋಟಿ ಬಿಡುಗಡೆ: ಸಚಿವ ಪುಟ್ಟರಂಗಶೆಟ್ಟಿ

ಜಿಲ್ಲೆಯ ಐದು ತಾಲೂಕುಗಳಲ್ಲಿ ಬರ ಘೋಷಣೆಯಾಗಿದ್ದು,ಜಾನುವಾರುಗಳ ಮೇವಿಗೆ ೨೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಗತ್ಯ ಬಿದ್ದರೆ ಮತ್ತೆ ೨೦ ಕೋಟಿ ರು. ಅನುದಾನ ನೀಡುವುದಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ೨೫ ಸಾವಿರ ರೈತರಿಗೆ ಮೇವು ಬೀಜದ ಕಿಟ್ ವಿತರಣೆಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ಜಿಲ್ಲೆಯ ಐದು ತಾಲೂಕಿನಲ್ಲಿ ಬರ ಘೋಷಣೆಯಾಗಿದೆ.‌ ಬರದ ಛಾಯೆಯಿಂದ ಜನರಿಗ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಇದೆ ಎಂದರು.

ಜನರಿಗೆ ಕುಡಿಯುವ ನೀರು, ಜಾನುವಾರಿಗೆ ಮೇವಿಗೆ ಆದ್ಯತೆ ನೀಡಬೇಕಿದ್ದು,ಮೇವಿನ ಬೀಜ ಪಡೆದ ರೈತರು ಮೇವು ಬೆಳೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶ್ರೀರೂಪ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಉಪ ವಿಭಾಗಾಧಿಕಾರಿ ದಿನೇಶ್‌ ಕುಮಾರ್‌ ಮೀನಾ, ತಹಸೀಲ್ದಾರ್‌‌ ಎಂ.ಎಸ್.ತನ್ಮಯ್‌, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ಆಂದೋಲನದಲ್ಲಿ ಕೆರೆಗಳ ನೀರಿನದ್ದೇ ಸದ್ದು!

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ ಪಶು ಸಂಗೋಪನೆ,ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉಪಸ್ಥಿತಿಯಲ್ಲಿ ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಕೆರೆಗಳ ನೀರಿನ ವಿಚಾರ ಸದ್ದು ಮಾಡಿತು!

ಪಟ್ಟಣದ ಗುರುಭವನದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿಗೆ ಪಟ್ಟಣ ಹಾಗೂ ತಾಲೂಕಿನ ನೂರಾರು ಮಂದಿ ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಸರತಿ ಸಾಲಿನಲ್ಲಿ ನಿಂತು ಸಮಸ್ಯೆ ತೋಡಿಕೊಂಡರು.

ಬಸ್ ಸಮಸ್ಯೆ, ಬಸ್‌ ನಿಲುಗಡೆ, ಖಾತೆ ಅದಲು ಬದಲು, ಕುಡಿಯುವ ನೀರು, ಜಾನುವಾರಿಗೆ ಮೇವು, ಪೌತಿ ಖಾತೆ, ಚರಂಡಿ ಸಮಸ್ಯೆ, ಹೂಳು ಎತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅರ್ಜಿಗಳು ಬಂದವು.

ಸಾರ್ವಜನಿಕರ ಅರ್ಜಿಗಳ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸಂಬಂಧ ಪಟ್ಟ ಅಧಿಕಾರಿಗಳ ಕರೆದು ಈ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು ಅಲ್ಲದೆ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲ ಎಂದಾದರೆ ಸ್ವೀಕೃತಿ ಕೊಡಿ ಎಂದರು.

ಕೆರೆ ನೀರಿನ ಸದ್ದು:

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮುಂದೆ ಕುಳಿತು ರೈತಸಂಘದ ಮುಖಂಡ ಕುಂದಕೆರೆಸಂಪತ್ತು ಹಾಗೂ ಅರಿಶಿನ ಬೆಳೆಗಾರ ನಾಗಾರ್ಜುನ್‌ ಮಾತನಾಡಿ ೪ ನೇ ಹಂತದ ಕೆರೆಗಳಿಗೆ ಕಳೆದ ಮೂರು ಪ್ರತಿ ವರ್ಷ ನೀರು ಬಿಟ್ಟಿಲ್ಲ. ಚಾಮರಾಜನಗರ ತಾಲೂಕಿನ ಕೆರೆಗಳಿಗೆ ಬಿಡಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.

ವಾಗ್ವಾದ:

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ರೈತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪೈಪ್‌ಲೈನ್‌ ಆಗುವ ತನಕ ನೀರು ಬಿಡಲು ಆಗುವುದಿಲ್ಲ. ಪೈಪ್‌ ಒಡೆದು ನೀರು ಬಿಟ್ಟು ಕೊಟ್ಕೋತಾರೆ ಏನ್‌ ಮಾಡೋದು. ಅಲ್ಲಿಯವರು ರೈತರೇ, ನೀವು ರೈತರೇ ಎಂದರು.

೩ನೇ ಹಂತದ ಕೆರೆಗಳಲ್ಲಿ ನೀರು ಹರಿಯುತ್ತಿದೆ.ಇನ್ನೂ ಎರಡು ಕೆರೆ ತುಂಬಬೇಕು.ನಂತರ ಕಾಳನಹುಂಡಿ ಹಾಗೂ ಹಳೇ ಪುರ ಕೆರೆಗೂ ನೀರು ಬಿಡಬೇಕು ಅಲ್ಲಿಯ ತನಕ ನೀರು ಬಿಡಲು ಆಗುವುದಿಲ್ಲ ಎಂದು ಹೇಳಿದಾಗ ಆಕ್ರೋಶಕೊಂಡ ಸಂಪತ್ತು ಹಾಗು ನಾಗಾರ್ಜುನ್‌ ನೀರು ಬಿಡ್ತಿರೋ ಬಿಡಲ್ವೋ ಹೇಳಿ ಎಂದು ಆಗ್ರಹಿಸಿದಾಗ ನೀರು ಬಿಡಲ್ಲ ಎಂದೇ ಬಿಟ್ಟರು ಸಚಿವರು.

ನೀವು ಉಸ್ತುವಾರಿ ಸಚಿವ್ರಾ!:

ಈ ಸಮಯದಲ್ಲಿ ರೈತ ಮುಖಂಡರು ಆಕ್ರೋಶಗೊಂಡ ನೀವು ಜಿಲ್ಲೆಗೆ ಉಸ್ತುವಾರಿ ಸಚಿವ್ರಾ! ಅಥವಾ ಚಾಮರಾಜನಗರ ತಾಲೂಕಿಗಾ? ಎಂದು ಏರಿದ ಧ್ವನಿಯಲ್ಲಿ ಮಾತನಾಡಿ ಹೊರ ನಡೆದರು.

ಈ ಸಮಯದಲ್ಲಿ ಸಚಿವರು,ಶಾಸಕರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದು,ಈಗ ನೀವು ಅರ್ಜಿ ಕೊಟ್ಟಿದ್ದೀರಾ ನಿಮ್ಮ ಅರ್ಜಿಗೆ ಉತ್ತರ ಕೊಡುತ್ತೇವೆ ಮುಂದಿನ ಅರ್ಜಿದಾರರಿಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದ ಬಳಿಕ ಕೆರೆ ನೀರಿನ ವಿಚಾರ ಅಂತ್ಯವಾಯಿತು.