ಪ್ರಸ್ತುತ ಕಾಲಘಟ್ಟದಲ್ಲಿ ದಿನ ಕಳೆದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ನಿಯಮಗಳು ಬದಲಾವಣೆಯಾಗುತ್ತಿರುತ್ತವೆ. ಇಂತಹ ಕಾರ್ಯಾಗಾರದ ಮೂಲಕ ಮಾಹಿತಿ ಪಡೆದು ಹೊಸ ನಿಯಮಾವಳಿಗಳನ್ನು ಅರ್ಥೈಸಿಕೊಂಡು ಉತ್ತಮ ಸೇವೆ ಒದಗಿಸಬೇಕು ಎಂದರು. ಕಾಯಿದೆಗಳು ಆಗಾಗ್ಗೆ ಬದಲಾಗುತ್ತಿರುತ್ತವೆ, ಕಾಯಿದೆಗಳ ನಿಯಮಗಳನ್ನು ತಿಳಿದು ಕೆಲಸವನ್ನು ಮಾಡಬೇಕು, ಇಲ್ಲವಾದರೆ ತಪ್ಪುಗಳಾಗುವ ಸಂಭವಿರುತ್ತದೆ. ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು ಎಂದು ನವೀನ್‌ರಾಜ್ ಸಿಂಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಂದಾಯ ಇಲಾಖೆ ಜನಸಾಮಾನ್ಯರಿಗೆ ಹತ್ತಿರದ ಇಲಾಖೆಯಾಗಿದ್ದು, ಬದಲಾದ ನಿಯಮಗಳನ್ನು ತಿಳಿದುಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸುವುದು ಈ ಇಲಾಖೆಯ ಜವಾಬ್ದಾರಿ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ್‌ರಾಜ್ ಸಿಂಗ್ ತಿಳಿಸಿದರು.ಹಾಸನಾಂಬಾ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ಭೂಕಂದಾಯ ನಿಯಮ ೧೯೬೬ರ ತಿದ್ದುಪಡಿಗಳ ಕುರಿತು ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ದಿನ ಕಳೆದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ನಿಯಮಗಳು ಬದಲಾವಣೆಯಾಗುತ್ತಿರುತ್ತವೆ. ಇಂತಹ ಕಾರ್ಯಾಗಾರದ ಮೂಲಕ ಮಾಹಿತಿ ಪಡೆದು ಹೊಸ ನಿಯಮಾವಳಿಗಳನ್ನು ಅರ್ಥೈಸಿಕೊಂಡು ಉತ್ತಮ ಸೇವೆ ಒದಗಿಸಬೇಕು ಎಂದರು. ಕಾಯಿದೆಗಳು ಆಗಾಗ್ಗೆ ಬದಲಾಗುತ್ತಿರುತ್ತವೆ, ಕಾಯಿದೆಗಳ ನಿಯಮಗಳನ್ನು ತಿಳಿದು ಕೆಲಸವನ್ನು ಮಾಡಬೇಕು, ಇಲ್ಲವಾದರೆ ತಪ್ಪುಗಳಾಗುವ ಸಂಭವಿರುತ್ತದೆ. ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ ಪಡೆದುಕೊಂಡು, ಗೊಂದಲವಿದ್ದರೆ ಕೂಡಲೇ ಕೇಳಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯಲಾಗುತ್ತದೆ ಹಾಗೂ ಸರ್ಕಾರದಲ್ಲಿ ಕಂದಾಯ ಇಲಾಖೆ ಭೂಮಿಯ ಮಾಲೀಕನಾಗಿ ಕಾರ್ಯ ನಿರ್ವಹಿಸುತ್ತದೆ. ಸರ್ಕಾರಕ್ಕೆ ಆದಾಯದ ವಿಚಾರ ಬಂದಾಗ, ಭೂ ಕಂದಾಯ ಮಾತ್ರ ಮುಖ್ಯವಲ್ಲ, ಜಿಎಸ್‌ಟಿ, ಸಾರಿಗೆ ಮತ್ತು ಇನ್ನಿತರ ಇಲಾಖೆಗಳಿಂದ ಬರುವ ಆದಾಯ ಸಹ ಸರ್ಕಾರಕ್ಕೆ ಮುಖ್ಯವೇ ಆಗಿದೆ ಎಂದರು. ಯಾವುದೇ ಒಂದು ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಯ ಅವಶ್ಯಕತೆ ಇದ್ದಾಗ ಭೂ ಸ್ವಾಧೀನಪಡಿಸಿಕೊಳ್ಳುವ ವೇಳೆಯಲ್ಲಿ ಕಂದಾಯ ಇಲಾಖೆಯ ಅಗತ್ಯತೆ ಹೆಚ್ಚಿರುತ್ತದೆ. ಸ್ವಾಧೀನದ ನಿಯಮಗಳು ಈ ಸಂದರ್ಭದಲ್ಲಿ ಉಪಯೋಗವಾಗುತ್ತವೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಮಾತನಾಡಿ, ಭೂ ಕಂದಾಯ ನಿಯಮಗಳಿಗೆ ಈಗಾಗಲೇ ಹಲವಾರು ತಿದ್ದುಪಡಿಗಳನ್ನು ತರಲಾಗಿದೆ. ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಬದಲಾವಣೆ ಮಾಡಿಕೊಳ್ಳಲು ತಯಾರಾಗಬೇಕು. ತಿದ್ದುಪಡಿ ವಿಧೇಯಕಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದರು.ಜಿಲ್ಲೆಯ ಹಿರಿಯ ತಹಸೀಲ್ದಾರರು ಒಂದೊಂದು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಬದಲಾವಣೆಯಿಂದಾಗುವ ಪರಿಣಾಮಗಳು ಹಾಗೂ ಅವುಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಭೂ ಪರಿವರ್ತನೆಯ ಬಗ್ಗೆ ಅನೇಕ ಬದಲಾವಣೆಗಳಾಗಿದ್ದು, ಹೊಸ ನಿಯಮಗಳು ಹಾಗೂ ನ್ಯಾಯಾಲಯ ನೀಡುವ ತೀರ್ಪುಗಳನ್ನು ಅರ್ಥಮಾಡಿಕೊಂಡು ಕಾರ್ಯ ನಿರ್ವಹಿಸಬೇಕು, ಸರ್ಕಾರ ಜಾರಿಗೆ ತರುವ ನಿಯಾಮವಳಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಾಗಾರ ಎಂಬುವುದು ಏಕಮುಖವಾಗಿರುವುದಿಲ್ಲ. ಸಂವಾದಾತ್ಮಕವಾಗಿದ್ದು. ನಿಮ್ಮ ಕೆಲಸವನ್ನು ಮಾಡಲು ಇದು ಒಂದು ರೀತಿಯ ಮಾರ್ಗಸೂಚಿಯಾಗಿದೆ. ಈ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು ಎಲ್ಲಾ ತಾಲೂಕುಗಳ ತಹಸೀಲ್ದಾರ್‌ಗಳು ಹಾಗೂ ಸಿಬ್ಬಂದಿ ಹೆಚ್ಚಿನ ಗಮನಹರಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್‌. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಈ ಸಂದರ್ಭದಲ್ಲಿ ಹಾಜರಿದ್ದರು.