ಪಡಿತರ ಅಂಗಡಿಗಳಲ್ಲೇ ಇ-ಕೆವೈಸಿ ಸಮರ್ಪಕವಾಗಿ ಆಗದಿರುವುದು ಫಲಾನುಭವಿಗಳಿಗೆ ಹೊಸ ಸಂಕಷ್ಟ ತಂದಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಪಡಿತರ ಅಂಗಡಿಗಳಲ್ಲೇ ಇ-ಕೆವೈಸಿ ಸಮರ್ಪಕವಾಗಿ ಆಗದಿರುವುದು ಫಲಾನುಭವಿಗಳಿಗೆ ಹೊಸ ಸಂಕಷ್ಟ ತಂದಿದೆ. ಇ-ಕೆವೈಸಿ ಅಥವಾ ಬಯೋಮೆಟ್ರಿಕ್‌ ಸಮಸ್ಯೆ ಎದುರಾದ ಕೂಡಲೇ ಪಡಿತರ ಅಂಗಡಿದಾರರು ಫಲಾನುಭವಿಗಳನ್ನು ಆಧಾರ್‌ ಸೇವಾ ಕೇಂದ್ರಗಳಿಗೆ ಕಳುಹಿಸುತ್ತಿರುವುದರಿಂದ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. "ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಿಸಿಕೊಳ್ಳಿ " ಎಂಬ ಸೂಚನೆ ಪಡೆದು ಬರುವವರಿಗೆ ಇಲ್ಲಿ ಮತ್ತೆ ಸರದಿ, ಟೋಕನ್‌ ಹಾಗೂ ಸರ್ವರ್‌ ಸಮಸ್ಯೆ ಎದುರಾಗುತ್ತಿದೆ.

ಪಡಿತರ ಕಾರ್ಡನ ಇ-ಕೆವೈಸಿ ಪೂರ್ಣಗೊಳಿಸಲು ಅ. 20ರ ವರೆಗೆ ಸರ್ಕಾರ ಗಡುವು ನೀಡಿರುವ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಆಧಾರ್‌ ಕೇಂದ್ರಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪಡಿತರ ಅಂಗಡಿಯಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಫಲಾನುಭವಿಗಳನ್ನು ಆಧಾರ್‌ ಕೇಂದ್ರಗಳಿಗೆ ಕಳುಹಿಸುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ.

ಸಮಸ್ಯೆ ಎಲ್ಲಿದೆ ಎಂಬುದೇ ಗೊಂದಲ:

ಪಡಿತರ ಅಂಗಡಿಯಲ್ಲಿ ಇ-ಕೆವೈಸಿ ಮಾಡುವಾಗ ಬಯೋಮೆಟ್ರಿಕ್‌ ಹೊಂದಿಕೆಯಾಗದಿರುವುದು, ಸರ್ವರ್‌ ಸಮಸ್ಯೆ ಅಥವಾ ಕೆವೈಸಿ ಸ್ಟೇಟಸ್‌ ತಕ್ಷಣ ಅಪ್‌ಡೇಟ್‌ ಆಗದಿರುವುದು ಸಾಮಾನ್ಯವಾಗಿದೆ. ಆದರೆ, ಸಮಸ್ಯೆಯ ನಿಖರ ಕಾರಣ ಪರಿಶೀಲಿಸದೆ "ಆಧಾರ್‌ ಕೇಂದ್ರಕ್ಕೆ ಹೋಗಿ " ಎಂದು ಕಳುಹಿಸಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.

ಈ ರೀತಿ ಬಂದ ಕೆಲವರು ಈಗಾಗಲೇ ಕೆವೈಸಿ ಮಾಡಿಸಿಕೊಂಡಿದ್ದರೂ ಸ್ಟೇಟಸ್‌ "ಪ್ರೊಸೆಸಿಂಗ್‌ " ನಲ್ಲಿರುವುದು ಕಂಡುಬರುತ್ತಿದೆ. ಮತ್ತೆ ಪಡಿತರ ಅಂಗಡಿಗೆ ತೆರಳಿದಾಗ ಕೆವೈಸಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಪರಿಣಾಮ ಒಂದೇ ಕೆಲಸಕ್ಕಾಗಿ 2-3 ಬಾರಿ ಅಲೆದಾಡುವಂತಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ದಿನವಿಡೀ ಸರದಿಯಲ್ಲಿ ನಿಂತರೂ ಸೇವೆ ಸಿಗದೆ ಆಧಾರ್‌ ಕೇಂದ್ರದ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಕೇಂದ್ರದ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ.

200 ಮಂದಿಗಷ್ಟೇ ಸೇವೆ:

ಕೇಶ್ವಾಪುರದ ಆಧಾರ್‌ ಸೇವಾ ಕೇಂದ್ರದಲ್ಲಿ ನಾಲ್ಕು ಕೌಂಟರ್‌ಗಳಿದ್ದು, ದಿನಕ್ಕೆ ಸುಮಾರು 200 ಮಂದಿಗೆ ಮಾತ್ರ ಸೇವೆ ನೀಡಲು ಸಾಧ್ಯವಾಗುತ್ತಿದೆ. ಸರ್ವರ್‌ ವೇಗವಾಗಿದ್ದರೆ ಹೆಚ್ಚುವರಿಯಾಗಿ 20-30 ಮಂದಿಗೆ ಸೇವೆ ನೀಡಬಹುದು. ಆದರೆ, ಸರ್ವರ್‌ ನಿಧಾನವಾದಾಗ ಈ ಸಂಖ್ಯೆಯೂ ಕುಸಿಯುತ್ತದೆ.

ಸಾಮಾನ್ಯವಾಗಿ ಐದು ನಿಮಿಷದಲ್ಲಿ ಮುಗಿಯಬೇಕಾದ ಕೆಲಸ ಸರ್ವರ್‌ ಸಮಸ್ಯೆಯಿಂದ 10, 15, ಕೆಲವೊಮ್ಮೆ 20 ನಿಮಿಷ ತೆಗೆದುಕೊಳ್ಳುತ್ತಿದೆ. ಕೆಲ ಸಂದರ್ಭಗಳಲ್ಲಿ ಮುಖ್ಯ ಸರ್ವರ್‌ ಸ್ಥಗಿತಗೊಂಡು ಹಲವು ಗಂಟೆಗಳ ಕಾಲ ಸೇವೆ ಸ್ಥಗಿತವಾಗುತ್ತದೆ. ಬೆಳಗ್ಗೆಯೇ ಟೋಕನ್‌ ಮುಗಿಯುವುದರಿಂದ ದೂರದ ಊರುಗಳಿಂದ ಬಂದವರು ಸೇವೆ ಪಡೆಯದೆ ವಾಪಸ್‌ ತೆರಳುವಂತಾಗಿದೆ.

ವೃದ್ಧರು, ಮಕ್ಕಳಿಗೆ ಹೆಚ್ಚು ತೊಂದರೆ:

ಬೆರಳಚ್ಚು ಸರಿಯಾಗಿ ದಾಖಲಾಗದ ವೃದ್ಧರು ಹಾಗೂ ಚಿಕ್ಕ ಮಕ್ಕಳ ಬಯೋಮೆಟ್ರಿಕ್‌ ಪಡೆಯಲು ಹಲವು ಬಾರಿ ಪ್ರಯತ್ನಿಸಬೇಕಾಗುತ್ತದೆ. ವಿಶೇಷ ಅಗತ್ಯವಿರುವವರು, ಆಸ್ಪತ್ರೆಯಿಂದ ಬಂದವರು ಹಾಗೂ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದವರಿಗೂ ಜನದಟ್ಟಣೆ ತೊಂದರೆ ಉಂಟುಮಾಡುತ್ತಿದೆ.

ಕರ್ನಾಟಕ ಒನ್‌ ಹಾಗೂ ಕೆಲವು ಅಂಚೆ ಕಚೇರಿಗಳಲ್ಲೂ ಇ-ಕೆವೈಸಿ ಸೇವೆ ಲಭ್ಯವಿದ್ದರೂ, ಎಲ್ಲೆಡೆ ಸಮರ್ಪಕವಾಗಿ ಸೇವೆ ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಮುಖ್ಯ ಆಧಾರ್‌ ಕೇಂದ್ರಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚುತ್ತಿದೆ. ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲೇ ಬಾಕಿ ಕೆವೈಸಿ ಪೂರ್ಣಗೊಳಿಸುವ ವ್ಯವಸ್ಥೆ ಬಲಪಡಿಸಿ, ನಿಜವಾಗಿಯೂ ಅಗತ್ಯವಿರುವವರನ್ನು ಮಾತ್ರ ಆಧಾರ್‌ ಕೇಂದ್ರಗಳಿಗೆ ಕಳುಹಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಮೊದಲು ಸಮಸ್ಯೆ ಪತ್ತೆ ಮಾಡಲಿ

ಇ-ಕೆವೈಸಿ ವಿಫಲವಾದ ಪ್ರತಿಯೊಂದು ಪ್ರಕರಣವನ್ನೂ ಬಯೋಮೆಟ್ರಿಕ್‌ ಸಮಸ್ಯೆ ಎಂದು ಪರಿಗಣಿಸಿ ಫಲಾನುಭವಿಯನ್ನು ಆಧಾರ್‌ ಕೇಂದ್ರಕ್ಕೆ ಕಳುಹಿಸುವ ಬದಲು, ಸಮಸ್ಯೆ ಯಾವ ಹಂತದಲ್ಲಿದೆ ಎಂಬುದನ್ನು ಪಡಿತರ ಅಂಗಡಿಯಲ್ಲೇ ಪರಿಶೀಲಿಸಬೇಕು. ಇ-ಕೆವೈಸಿ ಪೂರ್ಣಗೊಂಡಿದೆಯೇ, ಪ್ರಕ್ರಿಯೆಯಲ್ಲಿದೆಯೇ ಅಥವಾ ನಿಜವಾಗಿಯೂ ಬಯೋಮೆಟ್ರಿಕ್‌ ಅಪ್‌ಡೇಟ್‌ ಅಗತ್ಯವಿದೆಯೇ ಎಂಬುದನ್ನು ಸ್ಪಷ್ಟಪಡಿಸಿದರೆ ಅನಗತ್ಯ ಜನದಟ್ಟಣೆ ತಪ್ಪಿಸಬಹುದು ಎಂದು ಕೇಶ್ವಾಪುರದ ಆಧಾರ್‌ ಕೇಂದ್ರದ ವ್ಯವಸ್ಥಾಪಕ ಪ್ರವೀಣ "ಕನ್ನಡಪ್ರಭ "ಕ್ಕೆ ತಿಳಿಸಿದರು.ಪಡಿತರ ಅಂಗಡಿಯಲ್ಲೇ ಇ-ಕೆವೈಸಿ ಮಾಡಿಕೊಡಬೇಕಾದರೆ ನಮ್ಮನ್ನು ಆಧಾರ್‌ ಕೇಂದ್ರಕ್ಕೆ ಏಕೆ ಕಳುಹಿಸುತ್ತಿದ್ದಾರೆ?. ಒಂದೇ ಕೆಲಸಕ್ಕಾಗಿ ಎರಡು ಕಡೆ ಅಲೆದಾಡುವಂತಾಗಿದೆ.

ಅರುಣಾ ಎಸ್. ಹಾಗೂ ಚಂದ್ರಶೇಖರ ಬಳ್ಳಾರಿ, ಬಯೋಮೆಟ್ರಿಕ್‌ಗಾಗಿ ಆಧಾರ್‌ ಸೇವಾ ಕೇಂದ್ರಕ್ಕೆ ಆಗಮಿಸಿದವರು