ಮಳೆರಾಯನಿಗಾಗಿ ಬೂದಿಕೋಟೆಯಲ್ಲಿ ಪೂಜೆ: ಬಳಿಕ ಉತ್ತಮ ಮಳೆ

| Published : Oct 04 2024, 01:10 AM IST

ಸಾರಾಂಶ

ಇದರಿಂದ ಆತಂಕಗೊಂಡಿದ್ದ ಬೂದಿಕೋಟೆ ಗ್ರಾಮದ ರೈತರು, ಮಣ್ಣಿನಿಂದ ಮಳೆರಾಯನ ಆಕಾರ ಬೊಂಬೆ ಮಾಡಿ ಗ್ರಾಮದಲ್ಲಿ ೫ ದಿನಗಳಿಂದ ಮಳೆಗಾಗಿ ಪೂಜೆಯಲ್ಲಿ ತೊಡಗಿದ್ದರು. ಅಲ್ಲದೆ ಮನೆ ಮನೆಗೂ ತೆರಳಿ ಅಕ್ಕಿ ಸೇರಿದಂತೆ ಇತರೆ ದವಸ, ಧಾನ್ಯಗಳನ್ನು ಸಂಗ್ರಹಿಸಿದ್ದರು.

ಬಂಗಾರಪೇಟೆ: ತಾಲೂಕಿನಲ್ಲಿ ಸೂಕ್ತಕಾಲಕ್ಕೆ ಮಳೆಯಾಗದೆ ಅನ್ನದಾತರು ಕಂಗಾಲಾಗಿದ್ದರು, ಗ್ರಾಮದ ಹಳೆಯ ಪದ್ಧತಿಯಂತೆ ಮಳೆಗಾಗಿ ಪೂಜೆ ಸಲ್ಲಿಸಿದ ಬಳಿಕ ಮಳೆಯಾಗಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ.

ತಾಲೂಕಿನ ರೈತರು ಯಾವುದೇ ನದಿ, ನಾಲೆಗಳಿಲ್ಲದೆ ಮಳೆಯನ್ನೇ ನಂಬಿ ಕೃಷಿ ಮಾಡುವರು. ಆದರೆ ಇತ್ತೀಚೆಗೆ ಮಳೆರಾಯನ ದರ್ಶನವೇ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು, ರೈತರು ಬೆಳೆದ ಎಲ್ಲಾ ಬೆಳೆಗಳು ಕಣ್ಣ ಮುಂದೆಯೇ ಬಾಡುತ್ತಿದ್ದವು. ಇದರಿಂದ ಆತಂಕಗೊಂಡಿದ್ದ ಬೂದಿಕೋಟೆ ಗ್ರಾಮದ ರೈತರು, ಮಣ್ಣಿನಿಂದ ಮಳೆರಾಯನ ಆಕಾರ ಬೊಂಬೆ ಮಾಡಿ ಗ್ರಾಮದಲ್ಲಿ ೫ ದಿನಗಳಿಂದ ಮಳೆಗಾಗಿ ಪೂಜೆಯಲ್ಲಿ ತೊಡಗಿದ್ದರು. ಅಲ್ಲದೆ ಮನೆ ಮನೆಗೂ ತೆರಳಿ ಅಕ್ಕಿ ಸೇರಿದಂತೆ ಇತರೆ ದವಸ, ಧಾನ್ಯಗಳನ್ನು ಸಂಗ್ರಹಿಸಿದ್ದರು.

ವಿಪರ್ಯಾಸವೆಂದರೆ ಬೂದಿಕೋಟೆ ಗ್ರಾಮಸ್ಥರು ಮಳೆಗಾಗಿ ಪೂಜೆ ಸಲ್ಲಿಸಿದ ೫ ದಿನಗಳ ಬಳಿಕ ಉತ್ತಮ ಮಳೆಯಾಗಿದೆ. ಇದರಿಂದ ಸಂತಸಗೊಂಡಿರುವ ರೈತರು, ಕೈಕೊಡುವ ಹಂತದಲ್ಲಿದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ ಎಂದು ಕುಣಿದು ಕುಪ್ಪಳಿಸಿದರು. ಯುವಕರು ಮಳೆ ಸುರಿಯುತಿದ್ದಂತೆ ‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ, ಬಾಳೆ ತೋಟಕ್ಕೆ ನೀರಿಲ್ಲ’ ಎಂದು ಹಾಡಿ ಕುಣಿದು ಸಂಭ್ರಮಿಸಿದರು. ಮಳೆಯಾದ ಕಾರಣ ಗ್ರಾಮದಲ್ಲಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಗೆ ಅನ್ನದಾನ ಮಾಡಿದರು.