ಸರ್ಕಾರಕ್ಕೆ ಸದ್ಬದ್ಧಿ ಬರಲೆಂದು ಕಾವೇರಿ ಮಾತೆಗೆ ಪೂಜೆ
KannadaprabhaNewsNetwork | Published : Oct 08 2023, 12:01 AM IST
ಸರ್ಕಾರಕ್ಕೆ ಸದ್ಬದ್ಧಿ ಬರಲೆಂದು ಕಾವೇರಿ ಮಾತೆಗೆ ಪೂಜೆ
ಸಾರಾಂಶ
ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ತಾಲೂಕು ಘಟಕ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು.
-ಕಕಜವೇ ಪ್ರತಿನಿತ್ಯ 2 ತಾಸು ಹೋರಾಟದಲ್ಲಿ ಬ್ರಾಹ್ಮಣ ಅರ್ಚಕ, ಪುರೋಹಿತ್ ಪರಿಷತ್ ಭಾಗಿ ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ತಾಲೂಕು ಘಟಕ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು. ನಗರದ ಅಂಚೇ ಕಚೇರಿ ರಸ್ತೆಯಲ್ಲಿ ವೇದಿಕೆ ಹಮ್ಮಿಕೊಂಡಿರುವ ನಿರಂತರ ಪ್ರತಿಭಟನೆಯಲ್ಲಿ ಅರ್ಚಕರು ಹಾಗೂ ಪುರೋಹಿತರು ಕಾವೇರಿ ಮಾತೆಯ ಭಾವಚಿತ್ರಕ್ಕೆ ವೇದಘೋಷಗಳೊಂದಿಗೆ ಪೂಜಿಸಿ, ಮಳೆಗಾಗಿ ಪ್ರಾರ್ಥಿಸಿ, ಸರ್ಕಾರ ನಡೆಸುವವರಿಗೆ ಸದ್ಬುದ್ಧಿ ಪ್ರಾಪ್ತಿಯಾಗಲೆಂದು ಕಾವೇರಿ ಮಾತೆಗೆ ಪೂಜಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು. ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಯ್ಯ ಮಾತನಾಡಿ, ಹಿಂದೆ ಸಂಕಷ್ಟ ಕಾಲದಲ್ಲಿ ರಾಜರು ತಮ್ಮ ಆಸ್ಥಾನದಲ್ಲಿನ ರಾಜ ಪುರೋಹಿತರು ಹಾಗೂ ಇತರರ ಸಲಹೆ ಪಡೆಯುತ್ತಿದ್ದರು. ಆದರೆ, ಈಗಿನ ಸರ್ಕಾರಗಳು ಯಾರಿಂದಲೂ ಸಲಹೆ ಪಡೆಯದೇ ಸಂಕಷ್ಟಕ್ಕೆ ಸಿಲುತ್ತಿವೆ. ಕಾವೇರಿ ನೀರಿನ ವಿಚಾರದಲ್ಲಿ ಇದೇ ಆಗಿದೆ. ರಾಜ್ಯ ಸರ್ಕಾರ ಕಾವೇರಿ ನೀರನ್ನು ಮೊದಲು ಕನ್ನಡಿಗರಿಗೆ ಕುಡಿಯಲು ಮೀಸಲಿಟ್ಟು ನಂತರ ತಮಿಳುನಾಡಿಗೆ ನೀರು ಹರಿಸಲಿ ಎಂದು ಆಗ್ರಹಿಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ, ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ದಶಕಗಳಿಂದಲೂ ಕಾವೇರಿ ನೀರಿನ ಸಮಸ್ಯೆ ಇದೆ. ಮಳೆ ಅಭಾವ ಕಂಡು ಬಂದ ಎಲ್ಲ ವರ್ಷ ಈ ಸಮಸ್ಯೆ ಬಿಗಡಾಯಿಸುತ್ತದೆ. ಆದ್ದರಿಂದ ರಾಜ್ಯದಲ್ಲಿ ಮಳೆ ಇಲ್ಲದ ಸಂದರ್ಭದಲ್ಲಿ ನೀರನ್ನು ಯಾವ ರೀತಿ ಹಂಚಿಕೆ ಮಾಡಿಕೊಳ್ಳಬೇಕು, ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾ, ಕೃಷಿ ಚಟುವಟಿಕೆಗೆ ಆದ್ಯತೆ ನೀಡಬೇಕಾ ಎಂಬ ಕುರಿತು ಮೊದಲು ಸಂಕಷ್ಟ ಸೂತ್ರ ರಚನೆಯಾಗಬೇಕು. ಇದರ ಜತೆಗೆ ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ್ ಪರಿಷತ್ ತಾಲೂಕು ಅಧ್ಯಕ್ಷ ಪಟ್ಲು ಶಿವಸ್ವಾಮಿ, ಉಪಾಧ್ಯಕ್ಷ ಸ್ವಾಮಿನಾಥ್ ಶರ್ಮ, ಕಾರ್ಯದರ್ಶಿ ನರಸಿಂಹ ಪ್ರಸಾದ್, ಜಿ.ಬಾಲಾಜಿ, ಉಪೇಂದ್ರ, ಶ್ರೀನಿವಾಸಮೂರ್ತಿ, ನಾಗರಾಜು, ಬೇವುರಿನ ಚಿದಂಬರ ದೀಕ್ಷಿತ್, ವೆಂಕಟೇಶ್, ಮಂಗಡಹಳ್ಳಿ ಶಾಮರಾವ್, ರಮೇಶ್, ಭವಾನಿ ಪ್ರಸಾದ್ ಮತ್ತು ಬ್ರಾಹ್ಮಣ ಮುಖಂಡರಾದ ಚಂದ್ರಶೇಖರ್, ಕಕಜವೇ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ ಮತ್ತಿತರರಿದ್ದರು. ಪೊಟೋ೭ಸಿಪಿಟಿ೧: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ್ ಪರಿಷತ್ ತಾಲೂಕು ಘಟಕದ ಅರ್ಚಕರು ಹಾಗೂ ಪುರೋಹಿತರು ಭಾಗವಹಿಸಿದ್ದರು.