ಸಾರಾಂಶ
ಹೊಸಕೋಟೆ: ಬರಗಾಲ ಹಿನ್ನೆಲೆ ಮಳೆಗಾಗಿ ಹಲಸಹಳ್ಳಿಯಲ್ಲಿ ಮಕ್ಕಳಿಂದ ವಿಶೇಷ ಆಚರಣೆ ಮಾಡಲಾಗಿದೆ ಎಂದು ಗ್ರಾಮದ ಹಿರಿಯ ರೈತ ಬೆಮಲ್ ಶ್ರೀನಿವಾಸಯ್ಯ ತಿಳಿಸಿದರು.
ಹೊಸಕೋಟೆ: ಬರಗಾಲ ಹಿನ್ನೆಲೆ ಮಳೆಗಾಗಿ ಹಲಸಹಳ್ಳಿಯಲ್ಲಿ ಮಕ್ಕಳಿಂದ ವಿಶೇಷ ಆಚರಣೆ ಮಾಡಲಾಗಿದೆ ಎಂದು ಗ್ರಾಮದ ಹಿರಿಯ ರೈತ ಬೆಮಲ್ ಶ್ರೀನಿವಾಸಯ್ಯ ತಿಳಿಸಿದರು.
ಈ ಬಾರಿ ರಾಜ್ಯದಲ್ಲಿ ಮಳೆ ವಿಳಂಬವಾಗಿ ಪ್ರಾಣಿ ಪಶು ಪಕ್ಷಿಗಳಿಗೆ ನೀರು ಆಹಾರದ ಅಭಾವ ಕಂಡು ಬಂದಿದ್ದು ಕೆರೆ ಕುಂಟೆ ಬತ್ತಿ ಜಲಾಶಯಗಳು ಬರಿದಾಗಿವೆ. ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ. ಅಂತರ್ಜಲ ಕುಸಿದಿದ್ದು ಕೊಳವೆ ಬಾವಿಗಳೂ ಬತ್ತಿಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಳೆಗಾಗಿ ಹಲವೆಡೆ ತಮ್ಮದೆ ಆದ ಸಂಪ್ರದಾಯಿಕ ಆಚರಣೆಗಳ ಮೂಲಕ ಮಳೆರಾಯನನ್ನು ಪೂಜಿಸುತ್ತಿದ್ದಾರೆ. ತಾಲೂಕಿನ ಹಲಸಹಳ್ಳಿಯಲ್ಲಿ ಮಕ್ಕಳಿಂದಲೆ ಮಳೆರಾಯನನ್ನು ವಿಶೇಷವಾಗಿ ಪೂಜಿಸುವ ಆಚರಣೆ ನಡೆದುಕೊಂಡು ಬಂದಿದ್ದು ಗ್ರಾಮದಲ್ಲಿ ಮಕ್ಕಳು ಕೆರೆಯ ಮಣ್ಣಿನಲ್ಲಿ ಮಳೆರಾಯನ ಮೂರ್ತಿಯನ್ನು ನಿರ್ಮಿಸಿ ತಲೆಯ ಮೇಲೆ ಹೊತ್ತು ಗ್ರಾಮದ ಮನೆ ಮನೆಗೆ ತೆರಳಿ ಮಳೆರಾಯನ ಮೂರ್ತಿಗೆ ನೀರನ್ನು ಹುಯ್ದು ಪೂಜೆ ಸಲ್ಲಿಸಿ ಭಕ್ತಿ ಭಾವಗಳಿಂದ ಬೇಡಿಕೊಳ್ಳುವುದು ಪದ್ಧತಿ. ಗ್ರಾಮ ಪ್ರದಕ್ಷಿಣೆ ಮೂಲಕ ಮಳೆರಾಯನ ಮೂರ್ತಿಯನ್ನು ಕೆರೆ ಅಥವಾ ಕುಂಟೆಯಲ್ಲಿ ಬಿಟ್ಟು ಅನ್ನದಾನ ಮಾಡುವ ಪರಿಪಾಠ ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದು ಮಳೆರಾಯನನ್ನು ಎತ್ತಿದ ದಿನ ಅಥವಾ ಒಂಬತ್ತು ದಿನಗಳ ಒಳಗೆ ಮಳೆ ಬಂದಿರುವ ಉದಾಹರಣೆಗಳಿದ್ದು ಅಂದಿನಿಂದ ಇಂದಿನವರೆಗೂ ನಮ್ಮ ಗ್ರಾಮದಲ್ಲಿ ಇದೆ ಆಚರಣೆ ನಡೆದು ಬಂದಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ಚಂದ್ರಶೇಖರ, ಗ್ರಾಮ ಮುಖಂಡ ಕೃಷ್ಣಪ್ಪ, ರೈತರಾದ ನಾರಾಣಪ್ಪ, ನಾಣಿ, ಶೀಗಡಿಯಪ್ಪ, ಮಧು ಲಕ್ಷ್ಮಮ್ಮ ಮುಂತಾದವರು ಹಾಜರಿದ್ದರು.
ಬಾಕ್ಸ್ಮಕ್ಕಳಿಂದ ಮಳೆರಾಯನ ಮೆರವಣಿಗೆ
ಮಕ್ಕಳೆಂದರೆ ದೇವರ ಸಮ. ಮಕ್ಕಳು ಬಿಸಿನಲ್ಲಿ ಮಳೆರಾಯನನ್ನು ಹೊತ್ತು ಮನೆ ಮನೆ ತಿರುಗಿ ಪ್ರಾರ್ಥಿಸಿದರೆ ಮಳೆರಾಯನಿಗೆ ಕರುಣೆ ಉಂಟಾಗಿ ಮಳೆ ಸುರಿಸುತ್ತಾನೆಂಬ ನಂಬಿಕೆಯಿಂದ ತಲತಲಾಂತರಗಳಿಂದ ಮಕ್ಕಳಿಂದಲೆ ಈ ಆಚರಣೆ ನಡೆದುಕೊಂಡು ಬಂದಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ಸುಬ್ಬುಲಕ್ಷ್ಮಿ ಚಿಕ್ಕನಾರಾಯಣಸ್ವಾಮಿ ತಿಳಿಸಿದರು.ಪೋಟೋ :28 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲೂಕಿನ ಹಲಸಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಮಕ್ಕಳಿಂದ ಮಳೆರಾಯನ ಮೂರ್ತಿ ನಿರ್ಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.