ಮೈಸೂರಿನ ರಾಜರು ನೀಡಿದ್ದ ಕತ್ತಿ ಗುರಾಣಿ, ನವರತ್ನ ಕಿರೀಟ, ಖಡ್ಗಕ್ಕೆ ಪೂಜೆ

| Published : Oct 13 2024, 01:07 AM IST

ಮೈಸೂರಿನ ರಾಜರು ನೀಡಿದ್ದ ಕತ್ತಿ ಗುರಾಣಿ, ನವರತ್ನ ಕಿರೀಟ, ಖಡ್ಗಕ್ಕೆ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರಿಗೆ ಧರ್ಮ ದರ್ಶನವಲ್ಲದೆ ವಿಶೇಷ ಸರದಿ ಸಾಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಂಗಳವಾರ ಸಂಜೆ ನಡೆದ ಚಿನ್ನದ ರಥೋತ್ಸವದಲ್ಲಿ ಜಿಲ್ಲೆಯ, ಹೊರ ಜಿಲ್ಲೆಗಳು ಮಾತ್ರವಲ್ಲದೆ, ತಮಿಳುನಾಡಿನಿಂದಲೂ ಬಂದಿದ್ದ ಭಕ್ತರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹನೂರು

ವಿಜಯದಶಮಿ ಮತ್ತು ಆಯುಧ ಪೂಜೆ ಪ್ರಯುಕ್ತ ಮಹದೇಶ್ವರಬೆಟ್ಟದಲ್ಲಿ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ಜರುಗಿತು.

ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜೆ ಹಾಗೂ ಉತ್ಸವಗಳು ನಡೆಯಿತು.

ಆಯುಧ ಪೂಜೆಯ ಅಂಗವಾಗಿ ಬೇಡಗಂಪಣ ಪೂಜಾ ವಿಧಾನಗಳೊಂದಿಗೆ ಮೈಸೂರಿನ ರಾಜ ಮನೆತನದ ರಾಜರು ನೀಡಿದ್ದ ಕತ್ತಿ ಗುರಾಣಿ, ನವರತ್ನ ಕಿರೀಟ, ಖಡ್ಗ ಸೇರಿ ಹಲವು ಆಯುಧಗಳು, ಬೆಲೆಬಾಳುವ ವಸ್ತುಗಳಿಗೆ ಪೂಜೆ ಸಲ್ಲಿಸಲಾಯಿತು.

ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ನೇತೃತ್ವದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಇರುವ ಸಾರಿಗೆ ವಾಹನಗಳಿಗೆ ಮತ್ತು ದೇಗುಲಕ್ಕೆ ಸಂಬಂಧಿಸಿದ ಪ್ರತಿಯೊಂದು ವಾಹನಗಳಿಗೆ ಆಯುಧ ಪೂಜೆ ಪೂಜಾ ಕಾರ್ಯಕ್ರಮ ನಡೆಯಿತು .

ಜಗಮಗಿಸಿದ ವಿದ್ಯುತ್ ದೀಪಾಲಂಕಾರ :ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ವಿಜಯ ದಶಮಿ ಪ್ರಯುಕ್ತ ಬೆಟ್ಟದಲ್ಲಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರದಿಂದ ಅಲಂಕಾರ ಮಾಡಲಾಗಿ ರಾಜಗೋಪುರ ಮುಖ್ಯ ದ್ವಾರ ದೇವಾಲಯದ ಸುತ್ತಲೂ ಹಾಗೂ ದಾಸೋಹಕ್ಕೆ ತೆರಳುವ ಮಾರ್ಗ ಸೇರಿದಂತೆ ವಿವಿಧದ ವಿಶೇಷ ವಿದ್ಯುತ್ ದೀಪ ಅಲಂಕಾರ ನೋಡುಗರ ಕಣ್ಮಣಿ ಸೆಳೆಯುವಂತೆ ಭಕ್ತರ ಕಣ್ಮನ ಸೆಳೆಯುವಂತೆ ಮಾಡಲಾಗಿತ್ತು.

ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳು: ಮಲೆಮಹದೇಶ್ವರ ಬೆಟ್ಟದಲ್ಲಿ ವಿಜಯದಶಮಿ ಪ್ರಯುಕ್ತ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಬರುವಂತ ಭಕ್ತಾದಿಗಳು ಚಿನ್ನದ ರಥೋತ್ಸವ ಹಾಗೂ ಬೆಳ್ಳಿ ರಥೋತ್ಸವ ಮತ್ತು ಮಾದೇಶ್ವರನ ಉತ್ಸವ ಮೂರ್ತಿ ಸೇರಿದಂತೆ ಹುಲಿ ಉತ್ಸವ ರುದ್ರಾಕ್ಷಿ ಮಂಟಪೋತ್ಸವ ಪಂಜಿನ ಸೇವೆ ದೂಪದ ಸೇವೆ ಹರಕೆ ಹೊತ್ತು ಭಕ್ತರಿಂದ ಉರುಳು ಸೇವೆ ಮತ್ತು ಮುಡುಸೇವೆಯೊಂದಿಗೆ ಹಲವು ಉತ್ಸವಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಮುಗಿಲು ಮುಟ್ಟಿದ ಜೈಕಾರ ಮೊಳಗಿತು .

ದಾಸೋಹ ವ್ಯವಸ್ಥೆ: ಮಲೆ ಮಹದೇಶ್ವರ ಬೆಟ್ಟಕ್ಕೆ ದಸರಾ ಹಬ್ಬ ಹಾಗೂ ವಿಜಯದಶಮಿ ಪ್ರಯುಕ್ತ ರಜ ಇದ್ದ ಕಾರಣ ರಾಜ್ಯದ ನಾನಾ ಭಾಗಗಳಿಂದ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತಮಿಳುನಾಡಿನಿಂದಲೂ ಸಹ ಭಾರಿ ಸಂಖ್ಯೆಯಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಿರಂತರ ಅನ್ನ ದಾಸೋಹದ ವ್ಯವಸ್ಥೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ, ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸಿತ್ತು.

ಭಕ್ತರಿಗೆ ಧರ್ಮ ದರ್ಶನವಲ್ಲದೆ ವಿಶೇಷ ಸರದಿ ಸಾಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಂಗಳವಾರ ಸಂಜೆ ನಡೆದ ಚಿನ್ನದ ರಥೋತ್ಸವದಲ್ಲಿ ಜಿಲ್ಲೆಯ, ಹೊರ ಜಿಲ್ಲೆಗಳು ಮಾತ್ರವಲ್ಲದೆ, ತಮಿಳುನಾಡಿನಿಂದಲೂ ಬಂದಿದ್ದ ಭಕ್ತರು ಭಾಗವಹಿಸಿದ್ದರು.

ಬಿಗಿ ಭದ್ರತೆ: ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿಜಯದಶಮಿ ದಸರಾ ಹಬ್ಬದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಕಂಡು ಬರದಂತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ರೀತಿಯಲ್ಲಿಯೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕಲ್ಪಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.