ಏ.19ರಿಂದ ಮೂರು ದಿನ ಪುಲಿಗೆರೆ ಉತ್ಸವ

| Published : Apr 04 2024, 01:06 AM IST

ಸಾರಾಂಶ

ಪುಲಿಗೆರಿ ಉತ್ಸವದಲ್ಲಿ ಸ್ಥಳೀಯ ಎಲೆ ಮರೆಯ ಕಾಯಿಯಂತೆ ಇರುವ ಸಂಗೀತ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯ ನಮ್ಮ ಉಭಯ ಸಂಸ್ಥೆಗಳು ಮಾಡುತ್ತಿದೆ

ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಭಾರತೀ‌ಯ ವಿದ್ಯಾಭವನವು ಸೋಮೇಶ್ವರ ದೇವಸ್ಥಾನದಲ್ಲಿ 7ನೇ ಪುಲಿಗೆರೆ ಉತ್ಸವವನ್ನು ಏ. 19 ರಿಂದ 21 ವರೆಗೆ ಆಚರಿಸಲಾಗುವುದು ಎಂದು ನಾಗಲಕ್ಷ್ಮೀ ಕೆ. ರಾವ್ ಹೇಳಿದರು.

ಮಂಗಳವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಹಾಗೂ ಸೋಮೇಶ್ವರ ಭಕ್ತರ ಸೇವಾ ಸಮಿತಿ ಸಹಯೋಗದಲ್ಲಿ ನಡೆದ ಪುಲಿಗೆರೆ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಕೆ.ಎಂ. ಮುನ್ಸಿ ಸ್ಥಾಪಿಸಿದ ಭಾರತೀಯ ವಿದ್ಯಾಭವನವು ಇದುವರೆಗೂ ಭಾರತೀಯ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯ ಬೆಳೆಸುವ ಕಾರ್ಯ ಮಾಡುತ್ತಿದೆ. ಇನ್ಫೋಸಿಸ್ ಪ್ರತಿಷ್ಠಾನವು ದೇಶದ ಅನೇಕ ಕಡೆಗಳಲ್ಲಿ ಭಾರತೀಯ ಕಲೆ ಸಂಸ್ಕೃತಿ ಕಾರ್ಯಕ್ರಮ ಮಾಡುವ ಕಾರ್ಯ ಮಾಡುತ್ತಿದೆ. ಪುಲಿಗೆರೆ ಉತ್ಸವವು ಏ.19, 20 ಹಾಗೂ 21 ರಂದು 3 ದಿನಗಳ ಕಾಲ ಪಟ್ಟಣದ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಲಿದೆ.

ಈ ಉತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರು ಹಾಗೂ ಸಾಂಸ್ಕೃತಿಕ ರಾಯಭಾರಿಗಳು ಭಾಗಿಯಾಗಿ ತಮ್ಮ ಪ್ರೌಢಿಮೆ ತೋರಿಸುವ ಕಾರ್ಯ ಮಾಡುವರು. ಸಂಗೀತ. ಸಾಂಸ್ಕೃತಿಕ, ಕಲೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ಜರುಗುತ್ತಿವೆ. ಪುಲಿಗೆರಿ ಉತ್ಸವದಲ್ಲಿ ಸ್ಥಳೀಯ ಎಲೆ ಮರೆಯ ಕಾಯಿಯಂತೆ ಇರುವ ಸಂಗೀತ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯ ನಮ್ಮ ಉಭಯ ಸಂಸ್ಥೆಗಳು ಮಾಡುತ್ತಿದೆ ಎಂದು ಹೇಳಿದರು. ಈಶ್ವರ ಮೆಡ್ಲೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಚಂಬಣ್ಣ ಬಾಳಿಕಾಯಿ ಮಾತನಾಡಿ, ಪುಲಿಗೆರೆ ಉತ್ಸವವನ್ನು ಕಳೆದ 7 ವರ್ಷಗಳಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಲೆಗಳ ಪ್ರದರ್ಶನವು ನಮ್ಮೂರಿಗೆ ಹೆಚ್ಚಿನ ಮೆರುಗು ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಈ ವೇಳೆ ಚನ್ನಪ್ಪ ಜಗಲಿ, ಸುರೇಶ ರಾಚನಾಯಕ, ಎಸ್.ಪಿ‌.ಪಾಟೀಲ, ಗೀತಾ ಮಾನ್ವಿ, ಮಾಲಾದೇವಿ ದಂದರಗಿ, ಪ್ರವೀಣ ಬಾಳಿಕಾಯಿ, ವಿರುಪಾಕ್ಷಪ್ಪ ಆದಿ, ರಾಘವೇಂದ್ರ ಪೂಜಾರಿ, ವಿ.ಜಿ.ಪಡಗೇರಿ, ಬಿ.ಎಸ್.ಬಾಳೇಶ್ವರಮಠ, ಗೋವಿಂದಪ್ಪ, ಸಿದ್ದನಗೌಡ ಬಳ್ಳೊಳ್ಳಿ, ಜಿ.ಎಸ್.ಗುಡಗೇರಿ, ನೀಲಪ್ಪ ಕರ್ಜಕಣ್ಣವರ, ಸುಮಾ ಚೋಟಗಲ್ಲ ಇದ್ದರು.