ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ ₹8,500 ಕೋಟಿ ವೆಚ್ಚದಲ್ಲಿ ಪಂಪ್ ಸ್ಟೋರೇಜ್

| Published : Feb 04 2024, 01:32 AM IST

ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ ₹8,500 ಕೋಟಿ ವೆಚ್ಚದಲ್ಲಿ ಪಂಪ್ ಸ್ಟೋರೇಜ್
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ ₹8,500 ಕೋಟಿ ವೆಚ್ಚದಲ್ಲಿ ಪಂಪ್ ಸ್ಟೋರೇಜ್ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ಲಿಂಗನಮಕ್ಕಿ ಅಣೆಕಟ್ಟೆಯಿಂದ ಜಲವಿದ್ಯುತ್ ಉತ್ಪಾದಿಸಿದ ನೀರು ವಾಪಸ್ ನದಿಗೆ ಹರಿಸದೇ, ಅದನ್ನು ಮರುಬಳಕೆ ಮಾಡಲು ಪಂಪ್ ಸ್ಟೋರೇಜ್ ಮಾಡಲಾಗುತ್ತಿದೆ. ಇದರಿಂದ 24 ಗಂಟೆಯೂ ವಿದ್ಯುತ್ ಉತ್ಪಾದನೆ ಮಾಡಬಹುದು. ಶರಾವತಿ ಅಲ್ಲದೇ ವಾರಾಹಿಯಲ್ಲೂ ಪಂಪ್ ಸ್ಟೋರೇಜ್ ನಿರ್ಮಿಸಿ, ಹೆಚ್ಚು ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಇರುವ ವಿದ್ಯುತ್ ಅಭಾವ ನೀಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ವಿದ್ಯುತ್ ಉತ್ಪಾದನೆ ವಿಭಾಗದಲ್ಲಿ ₹8,500 ಕೋಟಿ ವೆಚ್ಚದಲ್ಲಿ ಪಂಪ್ ಸ್ಟೋರೇಜ್ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗನಮಕ್ಕಿ ಅಣೆಕಟ್ಟೆಯಿಂದ ಜಲವಿದ್ಯುತ್ ಉತ್ಪಾದಿಸಿದ ನೀರು ವಾಪಸ್ ನದಿಗೆ ಹರಿಸದೇ, ಅದನ್ನು ಮರುಬಳಕೆ ಮಾಡಲು ಪಂಪ್ ಸ್ಟೋರೇಜ್ ಮಾಡಲಾಗುತ್ತಿದೆ. ಇದರಿಂದ 24 ಗಂಟೆಯೂ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದರು.

ಶರಾವತಿ ಬೆಂಗಳೂರಿಗಿಲ್ಲ:

ಶರಾವತಿ ಅಲ್ಲದೇ ವಾರಾಹಿಯಲ್ಲೂ ಪಂಪ್ ಸ್ಟೋರೇಜ್ ನಿರ್ಮಿಸಿ, ಹೆಚ್ಚು ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಇರುವ ವಿದ್ಯುತ್ ಅಭಾವ ನೀಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಅನುದಾನದಿಂದ 1.62 ಕೋಟಿ ಕುಟುಂಬಗಳಿಗೆ ನಿರಂತರ ವಿದ್ಯುತ್ ಕೊಡುತ್ತಿದ್ದೇವೆ. ಮೊದಲು ಮಳೆಗಾಲ ಬಂದಾಗ ಕಲ್ಲಿದ್ದಲು ವಿದ್ಯುತ್​ ಸ್ಥಾವರಗಳನ್ನು ನಾವು ವಾರ್ಷಿಕ ಮೆಂಟೆನೆನ್ಸ್‌ಗಾಗಿ ಬಂದ್ ಮಾಡುತ್ತಿದ್ದೆವು. ಈ ವರ್ಷವೂ ಹಾಗೇ ಮಾಡಿದ್ದೆವು. ಆದರೆ, ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಯಿತು. 16ರಿಂದ17 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಕಳೆದ ವರ್ಷ 8ರಿಂದ 9 ಮೆಗಾವ್ಯಾಟ್ ಬೇಡಿಕೆ ಇತ್ತು. ಈ ವರ್ಷ ಅದು ದ್ವಿಗುಣವಾಯಿತು. ಇದರಿಂದ ರೈತರಿಗೆ 7 ಗಂಟೆ ಸತತ ವಿದ್ಯುತ್ ನೀಡುವುದನ್ನು ಈಗ 5 ಗಂಟೆಗೆ ಇಳಿಸಿದ್ದೇವೆ ಎಂದು ತಿಳಿಸಿದರು.

ಈಗ ವಿದ್ಯುತ್ ಅಭಾವವಿಲ್ಲ:

ನಮಗೆ ಸದ್ಯ ವಿದ್ಯುತ್ ಅಭಾವವಿಲ್ಲ. ಒಂದು ವೇಳೆ ವಿದ್ಯುತ್ ಅಭಾವ ಉಂಟಾದರೆ, ವಿದ್ಯುತ್ ಖರೀದಿಸಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ನಿರಂತರ ಜ್ಯೋತಿ ಕಳಪೆ ಕಾಮಗಾರಿ ತನಿಖೆ ನಡೆದು ವರದಿ ಬಂದರೆ, ಯಾರೇ ತಪ್ಪು ಮಾಡಿದರೂ ಅವರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಸೇರಿದಂತೆ ಇತರೇ ಪಕ್ಷದವರಿಗೆ ನಮ್ಮ ಗ್ಯಾರಂಟಿ ನೋಡಿ ಸಹಿಲು ಅಗುತ್ತಿಲ್ಲ ಎಂದು ಈಗ ಸಿಎಂ ಹೇಳಿದ್ದಾರೆ. ಎಲ್ಲ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದ್ದರು. ಈ ಹಿಂದೆ ಬಂಗಾರಪ್ಪ ಅವರು ಕೃಷಿಗೆ ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದರು. ಈಗಲೂ ಅದು ಮುಂದುವರಿದಿದೆ. ಕಾಂಗ್ರೆಸ್ ಒಂದು ಬಾರಿ ಯೋಜನೆ ಜಾರಿ ಮಾಡಿದರೆ, ಅದನ್ನು ವಾಪಸ್ ಪಡೆಯುವುದಿಲ್ಲ ಎಂದು ಭರವಸೆ ನೀಡಿದರು.

ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ನಾನು ಉತ್ತರ ಕೊಡಲ್ಲ. ಇನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆರೋಪಕ್ಕೆ ನಾನು ಉತ್ತರ ಕೊಡಲ್ಲ.‌ ನಮ್ಮ ಪಕ್ಷ ಚುನಾವಣೆಗೆ ಸದಾ ಸಿದ್ಧವಾಗಿರುತ್ತದೆ. ನಮ್ಮದು ಜನಹಿತಕ್ಕಾಗಿ‌ ಇರುವ ಪಕ್ಷವಾಗಿದೆ ಎಂದು ತಿಳಿಸಿದರು.

- - - ಫೋಟೋ: (-ಕೆ.ಜೆ.ಜಾರ್ಜ್, ಸಚಿವ)