ಕ್ಯಾಂಪೇನ್ ಸ್ಟೋರಿ 6

ಸಾಗರದಿಂದ ಹೊನ್ನಾವರ ತನಕ ಜನತೆಗೆ ಕಿಚ್ಚು ಹಚ್ಚಿದ ಯೋಜನೆ । ಗೇರುಸೊಪ್ಪದಲ್ಲಿ ಅನುಷ್ಠಾನಗೊಳಿಸಲು ಪೂರ್ವಸಿದ್ಧತೆ

ಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ


ಸಾಗರದಿಂದ ಹೊನ್ನಾವರ ತನಕ ಜನತೆಗೆ ಕಿಚ್ಚು ಹಚ್ಚಿದ್ದು ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಈ ಎರಡೂ ಜಿಲ್ಲೆಗಳಲ್ಲಿ ಯೋಜನೆಯ ವಿರುದ್ಧ ಹೋರಾಟ ನಡೆಯುತ್ತಿದೆ.

ಈ ಯೋಜನೆಯಿಂದ ಉಂಟಾಗುವ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು ಎಂದು ಕಂಡುಬರುತ್ತಿದ್ದಂತೆ ಜನತೆ ಹೋರಾಟದ ಹಾದಿ ಹಿಡಿದಿದ್ದಾರೆ. ಗೇರುಸೊಪ್ಪದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ 2004ರಿಂದ ಸುದ್ದಿಯಲ್ಲಿದೆ. ಅಂದು ಇದು ಸುಮಾರು ₹4 ಸಾವಿರ ಕೋಟಿಯ ಯೋಜನೆ ಆಗಿದ್ದರೆ, 2025ರಲ್ಲಿ ಅದು ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ. ವಿದ್ಯುದುತ್ಪಾದನೆಯಾದ ನೀರನ್ನು ಮೇಲಕ್ಕೆತ್ತಿ ಡ್ಯಾಂನಲ್ಲಿ ಶೇಖರಿಸಿ ಆ ನೀರನ್ನು ಬಳಸಿಕೊಂಡು ಅಗತ್ಯವಿದ್ದಾಗ ವಿದ್ಯುತ್ ಉತ್ಪಾದನೆ ಮಾಡುವುದೇ ಪಂಪ್ಡ್ ಸ್ಟೋರೆಜ್ ಯೋಜನೆ. ಜತೆಗೆ ಈ ಯೋಜನೆಗೆ ಬಲಿಯಾಗಲಿರುವ ಮರಗಳ ಸಂಖ್ಯೆ ಅಂದಾಜು 16 ಸಾವಿರ.

ಯೋಜನೆಗೆ ಸಮೀಕ್ಷೆ ನಡೆಯುತ್ತಿದ್ದಂತೆ ಹೊನ್ನಾವರ ತಾಲೂಕಿನ ಹಲವು ಪಂಚಾಯಿತಿಗಳು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿ ನಿರ್ಣಯ ಕೈಗೊಂಡಿವೆ. ಶರಾವತಿ ನದಿಯ ಎಡ ಮತ್ತು ಬಲ ದಂಡೆಯ ಗ್ರಾಮಗಳು ಇದರಿಂದ ನೇರ ಪರಿಣಾಮ ಎದುರಿಸಲಿರುವುದರಿಂದ ಇಕ್ಕೆಲಗಳ ಜನತೆ ಗ್ರಾಮಸಭೆಯಲ್ಲಿ ಈ ಯೋಜನೆಗೆ ತಮ್ಮ ವಿರೋಧವಿರುವುದನ್ನು ದಾಖಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ್ದಾರೆ. ನಾಡಿನ ಹಲವು ಮಠಾಧೀಶರು, ಪರಿಸರ ಪ್ರೇಮಿಗಳು, ಜೀವ ವಿಜ್ಞಾನಿಗಳು ಈ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕಾರಿಸುತ್ತಿದ್ದಾರೆ.

ಅಲ್ಲದೆ ಗೇರಸೊಪ್ಪಾ ಹಾಗೂ ಸಾಗರ ತಾಲೂಕಿನ ಕಾರ್ಗಲ್ ಹೀಗೆ ಎರಡು ಕಡೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಿತು. ಈ ಎರಡೂ ಸಭೆಗಳಲ್ಲಿ ಜನತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಯೋಜನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಸಭೆಗಳು ಯೋಜನೆ ವಿರುದ್ಧ ಜನಾಂದೋಲನಾ ಸಭೆಗಳಾಗಿ ರೂಪುಗೊಂಡವು.

ಯೋಜನೆ ವಿರುದ್ಧ ಜನತೆ ಪಾದಯಾತ್ರೆ, ಧರಣಿ, ಪತ್ರ ಚಳವಳಿ ನಡೆಸಿದರು. ಅಲ್ಲದೆ ಶರಾವತಿ ಉಳಿಸಿ ಸಮಿತಿ ಕೇಂದ್ರ ಸಚಿವರು, ಮುಖ್ಯಮಂತ್ರಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ಪತ್ರವನ್ನು ಬರೆದಿದೆ.

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಹಾನಿಯಾಗುವ ಸಾಧ್ಯತೆ, ಜೀವವೈವಿಧ್ಯಕ್ಕೆ ಅಪಾಯ, ಅಪರೂಪದ ಸಸ್ಯ-ಪ್ರಾಣಿ ಜಾತಿಗಳು ನಾಶವಾಗುವ ಭೀತಿ, ಸ್ಥಳೀಯ ಗ್ರಾಮಸ್ಥರಿಗೆ ಮನೆ-ಜಮೀನು ಕಳೆದುಕೊಳ್ಳುವ ಆತಂಕ, ಇವೆಲ್ಲವುದರ ನಡುವೆ ಜೀವನದಿಯಾಗಿ ಹರಿಯುತ್ತಿರುವ ಶರಾವತಿ ತನ್ನ ವೈಭವವನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಇದೇ ಕಾರಣಕ್ಕೆ ಶತಾಯ-ಗತಾಯ ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿ ಜನರು ಹೋರಾಟ ನಡೆಸುತ್ತಿದ್ದಾರೆ.

ಯೋಜನೆಯಿಂದ ಕೃಷಿಯನ್ನು ಅವಲಂಬಿಸಿರುವ ಜನರಿಗೆ, ಪ್ರಾಣಿ, ಪಕ್ಷಿಗಳಿಗೆ, ರಾಜ್ಯದ ಹಿತದೃಷ್ಟಿಯಿಂದ ಈ ಯೋಜನೆ ಅಪಾಯಕಾರಿ. ರಾಜ್ಯದಲ್ಲಿ ಇಂತಹ ಯೋಜನೆಗಳು ಎಲ್ಲಿಯೂ ಬೇಡ ಎನ್ನುವುದು ನಿವೃತ್ತ ಕೆಪಿಸಿ ಅಧಿಕಾರಿ, ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿ ಹೋರಾಟಗಾರ ಶಂಕರ್ ಶರ್ಮಾ ಒತ್ತಾಯವಾಗಿದೆ.