ಪಂಪ್‌ಸೆಟ್ ಕಳ್ಳತನ: ನಾಲ್ವರು ಆರೋಪಿಗಳ ಸೆರೆ

| Published : Jul 20 2024, 12:58 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಹತ್ತಿರ ಮಲಪ್ರಭಾ ನದಿ ದಡದಲ್ಲಿರುವ ರೈತರ ಜಮೀನಿನಲ್ಲಿನ 10 ಪಂಪಸೆಟ್ ಕಳವು ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿರುವ ಬೈಲಹೊಂಗಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ನಯಾನಗರ ಗ್ರಾಮದ ಹತ್ತಿರ ಮಲಪ್ರಭಾ ನದಿ ದಡದಲ್ಲಿರುವ ರೈತರ ಜಮೀನಿನಲ್ಲಿನ 10 ಪಂಪಸೆಟ್ ಕಳವು ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿರುವ ಬೈಲಹೊಂಗಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ ಕಳವು ಮಾಡಿದ್ದ 10 ಪಂಪ್‌ಸೆಟ್‌ ಹಾಗೂ ಅಪರಾಧಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.

ಧಾರವಾಡದ ಮಾಳಾಪುರ ಖಾದ್ರಿಗಲ್ಲಿಯ ನಿವಾಸಿಗಳಾದ ಮೊಹಮ್ಮದ್ ನದೀಮ್‌ ಮಹಮ್ಮದ್‌ ಹನೀಫ್‌ ಹೆಬ್ಬಳ್ಳಿ (33), ರಿಯಾಜ್‌ ರಫೀಕ್‌ ಕಾರಿಗಾರ (28), ಸಮೀರ್‌ ನಜೀರ್ ಹೆಬ್ಬಳ್ಳಿ (21), ಜಾಕೀರ್‌ ಹುಸೇನ್‌ ನೂರಹ್ಮದ ಮಾಲದಾರ (25) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಹಿನ್ನೆಲೆ: ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿರುವ ರೈತರ ಜಮೀನಿನಲ್ಲಿನ 10 ಪಂಪ್‌ಸೆಟ್‌ ಕಳ್ಳತನವಾಗಿದ್ದವು. ಈ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಪಿ ಭೀಮಾಶಂಕರ ಗುಳೇದ ಅವರು, ಕೆಎಸ್‌ಪಿಎಸ್ ಶ್ರುತಿ ಕೆ., ಹೆಚ್ಚುವರಿ ಎಸ್‌ಪಿ ಆರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಪಿಐ ಪಿ.ವಿ.ಸಾಲಿಮಠ, ಪಿಎಸ್‌ಐಗಳಾದ ಗುರುರಾಜ ಕಲಬುರ್ಗಿ, ಎಫ್.ವೈ. ಮಲ್ಲೂರ ನೇತೃತ್ವದಲ್ಲಿ ಸಿಬ್ಬಂದಿ ಎಸ್.ಯು. ಮೆಣಸಿನಕಾಯಿ, ಚೇತನ ಬುದ್ನಿ, ಎಂ.ಬಿ.ಕಂಬಾರ, ಎಂ.ಎಸ್. ದೇಶನೂರ, ಟೆಕ್ನಿಕಲ್ ವಿಭಾಗದ ಸಿಬ್ಬಂದಿ ವಿನೋದ ಠಕ್ಕನವರ, ಸಚೀನ ಪಾಟೀಲ ಪಾಲ್ಗೊಂಡಿದ್ದರು. ಬೈಲಹೊಂಗಲ ಪೊಲೀಸರ ಕಾರ್ಯಕ್ಕೆ ಬೆಳಗಾವಿ ಎಸ್.ಪಿ. ಭೀಮಾಶಂಕರ ಗುಳೇದ, ರೈತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.