ನಿಗದಿತ ಅವಧಿಯೊಳಗೆ ಸಕಾಲ ಸೇವೆ: ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮೊದಲು

| Published : Feb 03 2024, 01:47 AM IST

ನಿಗದಿತ ಅವಧಿಯೊಳಗೆ ಸಕಾಲ ಸೇವೆ: ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮೊದಲು
Share this Article
  • FB
  • TW
  • Linkdin
  • Email

ಸಾರಾಂಶ

ಸಕಾಲ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿಪಡಿಸಿದ ಅವಧಿಗೂ ಮುಂಚೆಯೇ ತ್ವರಿತವಾಗಿ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಒಂದನೇ ಸ್ಥಾನದಲ್ಲಿದೆ.

ಕಾರವಾರ:

ಸಕಾಲ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿಪಡಿಸಿದ ಅವಧಿಗೂ ಮುಂಚೆಯೇ ತ್ವರಿತವಾಗಿ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಒಂದನೇ ಸ್ಥಾನದಲ್ಲಿದೆ.ಜನರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೇವೆ ಗೊತ್ತುಪಡಿಸಿದ ಕಾಲಮಿತಿಯಲ್ಲಿ ನೀಡುವ ಉದ್ದೇಶದಿಂದ ಸಕಾಲ ಸೇವೆ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ೨೦೨೪ ಜನವರಿ ತಿಂಗಳಲ್ಲಿ ಸಕಾಲ ಯೋಜನೆಯಡಿ ಒಟ್ಟು ೫೮,೩೧೮ ಅರ್ಜಿ ಸ್ವೀಕರಿಸಿಸಲಾಗಿತ್ತು. ವಿಲೇವಾರಿಗೆ ನಿಗದಿಪಡಿಸಿದ್ದ ಕಾಲಮಿತಿಗೂ ಮುಂಚಿತವಾಗಿ ಅರ್ಜಿಗಳನ್ನು ಯಶಸ್ವಿಯಾಗಿ ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಜನವರಿಯಲ್ಲಿ ಅಂಕೋಲಾ ತಾಲೂಕಿನಲ್ಲಿ ೩೮೭೯, ಭಟ್ಕಳ ೩೮೭೩, ದಾಂಡೇಲಿ ೨೪೨೬, ಹಳಿಯಾಳ ೩೪೭೨, ಹೊನ್ನಾವರ ೮೧೦೮, ಕಾರವಾರ ೯೧೫೨, ಕುಮಟಾ ೪೬೨೬, ಮುಂಡಗೋಡ ೪೫೪೫, ಸಿದ್ದಾಪುರ ೪೧೧೪, ಶಿರಸಿ ೮೨೧೬, ಜೋಯಿಡಾ ೧೩೪೭ ಹಾಗೂ ಯಲ್ಲಾಪುರದಲ್ಲಿ ೪೫೬೦ ಸಕಾಲ ಯೋಜನೆಯಡಿ ಸಲ್ಲಿಕೆಯಾಗಿದ್ದ ಅರ್ಜಿ ವಿಲೇವಾರಿ ಮಾಡಲಾಗಿದೆ.ತಾಲೂಕುಗಳ ನಡುವಿನ ಸಕಾಲ ಅರ್ಜಿಗಳ ರ‍್ಯಾಕಿಂಗ್‌ನಲ್ಲಿ ಮುಂಡಗೋಡ ಪ್ರಥಮ, ಸಿದ್ದಾಪುರ ದ್ವಿತೀಯ, ಹೊನ್ನಾವರ ತೃತೀಯ ಸ್ಥಾನ ಪಡೆದಿವೆ. ಸಕಾಲ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಗಿಂತ ಮುಂಚಿತವಾಗಿಯೇ ವಿಲೇವಾರಿ ಮಾಡುವಲ್ಲಿ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.ಸಾರ್ವಜನಿಕರು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ, ತಮಗೆ ಅಗತ್ಯವಿರುವ ಸೇವೆ ಪಡೆಯಲು ಸಲ್ಲಿಸುವ ಅರ್ಜಿಗಳನ್ನು ಸಕಾಲ ಯೋಜನೆಯ ವ್ಯಾಪ್ತಿಯೊಳಗೆ ತೆಗೆದುಕೊಳ್ಳಲಾಗುತ್ತಿದೆ. ಸಾರ್ವಜನಿಕರು ನೇರವಾಗಿ ಸಲ್ಲಿಸುವ ಅರ್ಜಿಗಳನ್ನೂ ಸಹ ಸಕಾಲ ವ್ಯಾಪ್ತಿಗೆ ಸೇರಿಸಿ ಇತ್ಯರ್ಥಪಡಿಸಲಾಗುತ್ತಿದೆ. ಯಾವುದೇ ಅರ್ಜಿಗಳು ಸಕಾಲದಿಂದ ಹೊರಗುಳಿಯದಂತೆ ಕ್ರಮಕೈಗೊಳ್ಳಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅವರು ಕೋರಿರುವ ಸೇವೆಗಳು ನಿರ್ದಿಷ್ಟ ಅವಧಿಗಿಂತ ಮುಂಚಿತವಾಗಿಯೇ ಲಭ್ಯವಾಗುತ್ತಿವೆ.

ಅರ್ಜಿಗಳ ವಿಲೇವಾರಿ ಕುರಿತಂತೆ ಪ್ರತಿ ದಿನ ಪರಿಶೀಲನೆ ಹಾಗೂ ಪ್ರತಿ ವಾರ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಸಕಾಲ ಯೋಜನೆಯ ಒಟ್ಟು ರ‍್ಯಾಕಿಂಗ್‌ನಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಎಲ್ಲ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಜನರಿಗೆ ತ್ವರಿತವಾಗಿ ತಮ್ಮ ಇಲಾಖೆಯ ಸೇವೆ ಒದಗಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ಅರ್ಜಿಗಳನ್ನು ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ಅಗತ್ಯ ಸೇವೆ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ.