ಕರ್ನಾಟಕ ರತ್ನ ಹಾಗೂ ಭಾರತ ರತ್ನ ಇಬ್ಬರ ಹೆಸರಿನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿರುವ ಅಪ್ಪು ಕಲಾಂಜೀ ಟ್ರಸ್ಟ್ ಎಲ್ಲ ಸಮಾಜಕ್ಕೆ ಮಾದರಿ ಆಗಬೇಕು ಎಂದು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್‌.ವಿ. ಈರೇಶ್ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಕರ್ನಾಟಕ ರತ್ನ ಹಾಗೂ ಭಾರತ ರತ್ನ ಇಬ್ಬರ ಹೆಸರಿನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿರುವ ಅಪ್ಪು ಕಲಾಂಜೀ ಟ್ರಸ್ಟ್ ಎಲ್ಲ ಸಮಾಜಕ್ಕೆ ಮಾದರಿ ಆಗಬೇಕು ಎಂದು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್‌.ವಿ. ಈರೇಶ್ ಹೇಳಿದರು.

ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಅಂಗವಾಗಿ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಅಪ್ಪು ಜನ್ಮದಿನ ಹಾಗೂ ಅಬ್ದುಲ್‌ ಕಲಾಂ ಚಾರಿಟೆಬಲ್ ಟ್ರಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿನಿಮಾ ಕಲಾವಿದನಾಗಿ ಕೊಡುಗೈ ದಾನಿಯಾಗಿ ಇತರೆ ನಟರಿಗೆ ಮಾದರಿಯಾಗಿದ್ದ ಅಪ್ಪು ಅನಾಥಾಶ್ರಮಗಳು ಶಿಕ್ಷಣ ಸಂಸ್ಥೆಗಳು ಸೇರಿದಂತೆ ವೃದ್ಧಾಶ್ರಮಗಳಿಗೆ ಆಸರೆಯಾಗಿದ್ದರು ಅವರ ಸಮಾಜಮುಖಿ ಕಾರ್ಯ ಹೆಚ್ಚು ಅಗತ್ಯವಿದೆ. ಸುದೀರ್ಘ ಕಾಲ ಅವರು ಬದುಕಬೇಕಿತ್ತು, ಅವರ ಅಕಾಲಿಕ ಸಾವು ಸಮಾಜಕ್ಕೆ ಅಪಾರ ನಷ್ಟ ಉಂಟು ಮಾಡಿದೆ. ಈ ಟ್ರಸ್ಟಿನ ಸಾಮಾಜಿಕ ಕಾರ್ಯಕ್ಕೆ ಸಾಧ್ಯವಾದ ಅಳಿಲು ಸೇವೆ ನೀಡುವುದಾಗಿ ತಿಳಿಸಿದರು.

ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ, ಪುರಸಭಾ ಸದಸ್ಯ ಮಹಮ್ಮದ್ ಸಾಧಿಕ್ ಮಾತನಾಡಿ, ಸಮಾಜದ ಸೇವೆಗಾಗಿ ಟ್ರಸ್ಟ್ ಆರಂಭಿಸಬೇಕು ಎಂದು ಯೋಚಿಸಿದಾಗ ಪ್ರಥಮವಾಗಿ ಜ್ಞಾಪಕವಾಗಿದ್ದು ಅಪ್ಪು ಹಾಗೂ ಕಲಾಂಜಿ. ಈ ಇಬ್ಬರು ಮಹಾನ್ ಶ್ರೇಷ್ಠ ಸಾಧಕರ ಸಾಧನೆ ಇಡೀ ಜಗತ್ತಿಗೆ ಮಾದರಿಯಾಗಿದೆ. ವಿವಿಧ ಧರ್ಮಗಳ 50ಕ್ಕೂ ಹೆಚ್ಚು ಸಾಮೂಹಿಕ ವಿವಾಹವನ್ನು ನಡೆಸಲಾಗುವುದು. ಈ ತಾಲೂಕಿನ 2 ಲಕ್ಷ ಜನರಿಗೆ ಟ್ರಸ್ಟ್‌ನಿಂದ ಅನುಕೂಲ ಮಾಡಿಕೊಡಬೇಕೆಂಬುದು ನಮ್ಮ ಉದ್ದೇಶ ಎಂದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್. ರಾಜು ಮಾತನಾಡಿ, ಬಡತನದಲ್ಲಿ ಹುಟ್ಟಿ ಉತ್ತಮ ಶಿಕ್ಷಣ ಪಡೆದು, ದೇಶದ ರಾಷ್ಟ್ರಪತಿಯಾಗಿ ಸುಧಾರಣೆ ತಂದ ಅಬ್ದುಲ್ ಕಲಾಂ ಅವರು ಹಾಗೂ ಚಲನಚಿತ್ರಗಳ ಮೂಲಕ ಉತ್ತಮ ಸಂದೇಶಗಳನ್ನು ನೀಡಿ, ಜೀವನದಲ್ಲಿಯೂ ನುಡಿದಂತೆ ನಡೆದ ಡಾ. ರಾಜಕುಮಾರ್ ಪುತ್ರ ಪುನೀತ್ ಅವರ ಸಾಧನೆ ಮಾದರಿಯಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ತಂದೆಯಿಂದ ಪುನೀತ್‌ಗೆ ಬಳುವಳಿಯಾಗಿ ಬಂದ ಸಂಸ್ಕಾರ ಮತ್ತು ಕೊಡುಗೆ, ಈ ನಾಡು ಮೆಚ್ಚುವಂಥ ರಾಜಕುಮಾರರಾಗಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ಅಪ್ಪು ಅಭಿಮಾನಿ ಬಳಗದ ವೈಭವ್ ಬಸವರಾಜ್ ಮಾತನಾಡಿ, ಡಾ.ರಾಜಕುಮಾರ್ ನೂರಾರು ರಸಮಂಜರಿ ಕಾರ್ಯಕ್ರಮಗಳ ಮೂಲಕ ಅನೇಕ ಸಂಘ ಸಂಸ್ಥೆಗಳಿಗೂ ಅನಾಥಾಶ್ರಮಗಳಿಗೂ ಪೊಲೀಸ್ ಕ್ವಾಟ್ರಸ್‌ಗಳಿಗೂ ದಾನ, ಧರ್ಮ ಮಾಡಿದ್ದರು. ಕರ್ನಾಟಕದ 26 ಜಿಲ್ಲಾ ಕೇಂದ್ರಗಳಿಗೆ ರಸಮಂಜರಿ ಕಾರ್ಯಕ್ರಮಗಳ ಮೂಲಕ ಯುವಜನ ಕ್ರೀಡಾಂಗಣಗಳನ್ನು ಕಟ್ಟಿಸಿ ಕೊಟ್ಟು ನೆರವಾಗಿದ್ದರು ಎಂದು ಶ್ಲಾಘಿಸಿದರು.

ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಎಸ್.ಎಸ್. ರಾಘವೇಂದ್ರ, ಸಿವಿಲ್ ಎಂಜಿನಿಯರ್ ರಾಜ್‌ಕುಮಾರ್, ಪಟ್ಟಣ ಠಾಣೆ ಪಿಎಸ್‌ಐ ಕಾಂತರಾಜ್, ಕೋಮಲಾಚಾರ್ ಮಾತನಾಡಿದರು. ಜಿ.ಕೆ. ಹೆಬ್ಬಾರ್, ಈರಣ್ಣ, ಪಾರು ಸ್ವಾಮಿ, ನ್ಯಾಯವಾದಿ ಕವಿತಾ, ನಜೀಮ್ ಬಾಷಾ, ಮುಸ್ಲಿಂ ಸಮಾಜದ ಮುಖಂಡ ರಿಜ್ವಾನ್ ಭಾಷಾ, ಬಾಳೆಕಾಯಿ ಸಿದ್ದಲಿಂಗಪ್ಪಮತ್ತಿತರರು ಉಪಸ್ಥಿತರಿದ್ದರು.

ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬೃಹತ್ ಕೇಕ್ ಕತ್ತರಿಸಲಾಯಿತು. ಲಕ್ಕಿ ಲಕ್ಷ್ಮಣ್ ಮತ್ತು ಮಧು ಗಾಯನ ಸುಧೆ ಎಲ್ಲರ ಗಮನ ಸೆಳೆಯಿತು. ಆನಂದ್ ಸ್ವಾಗತಿಸಿ, ನಿರೂಪಿಸಿದರು.

- - - -18ಕೆಎಸ್.ಕೆ.ಪಿ1:

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ನಡೆದ ನಟ ಪುನೀತ್ ರಾಜಕುಮಾರ್ ಹುಟ್ಟಹಬ್ಬ, ಅಬ್ದುಲ್ ಕಲಾಂ ಚಾರಿಟೆಬಲ್ ಟ್ರಸ್ಟ್ ಕಾರ್ಯಕ್ರಮವನ್ನು ಈರೇಶ್ ಉದ್ಘಾಟಿಸಿದರು.