ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 49ನೇ ಜನ್ಮದಿನವಿಂದು. ತನ್ನ ಮಾದರಿ ಕೆಲಸಗಳಿಂದ ಜನ ಮೆಚ್ಚುಗೆ ಪಡೆದ ಪುನೀತ್ ಬರ್ತ್‌ಡೇಯನ್ನು ಸ್ಫೂರ್ತಿ ದಿನವಾಗಿ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನಟನ ಸಿಡಿಪಿ ಬಿಡುಗಡೆಯಾಗಿದ್ದು, ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬ ಪುನೀತ್ ಮಾತನ್ನು ಇದರಲ್ಲಿ ಘೋಷವಾಕ್ಯವಾಗಿಸಲಾಗಿದೆ.
ಇನ್ನೊಂದೆಡೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿರುವ ಅಪ್ಪು ಸಮಾಧಿಗೆ ಭೇಟಿಕೊಟ್ಟು ನಮನ ಸಲ್ಲಿಸಲಿದ್ದಾರೆ. ಕುಟುಂಬದವರೂ ಪೂಜಾವಿಧಿಗಳನ್ನು ನಡೆಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಪುನೀತ್ ಸಮಾಧಿಯಿಂದ ಪ್ರಸನ್ನ ಚಿತ್ರಮಂದಿರದವರೆಗೂ ಬೈಕ್ ರಾಲಿಯನ್ನು ಅಭಿಮಾನಿಗಳು ಆಯೋಜಿಸಿದ್ದಾರೆ.ರಾಜ್ಯಾದ್ಯಂತ ನೇತ್ರದಾನ ಜಾಗೃತಿ, ರಕ್ತದಾನ ಶಿಬಿರ, ಅನ್ನದಾನಗಳು ನಡೆಯಲಿವೆ.
ಮೈಸೂರಿನ ಅಗ್ರಹಾರದಲ್ಲಿ ಪುನೀತ್ ರಾಜ್‌ಕುಮಾರ್ ಅವರ 49 ಅಡಿ ಎತ್ತರ ಕಟೌಟ್ ರಾರಾಜಿಸುತ್ತಿದೆ. ಇನ್ನೊಂದೆಡೆ ಪುನೀತ್ ನಟನೆಯ ‘ಜಾಕಿ’ ಸಿನಿಮಾ ಮರು ಬಿಡುಗಡೆಯಾಗಿ ಎಲ್ಲೆಡೆ ಜಯಭೇರಿ ಬಾರಿಸುತ್ತಿದೆ.
ಈಗಾಗಲೇ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಶೋಗಳು ಸೋಲ್ಡ್ ಔಟ್ ಆಗಿವೆ. ಸಿನಿಮಾ ಮರು ಬಿಡುಗಡೆಗೊಂಡ ಮೊದಲನೇ ದಿನವೇ ಒಟ್ಟು 1 ಕೋಟಿ ರೂಪಾಯಿ ಸಂಪಾದಿಸಿದೆ.
ಇಂದು ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. 14 ವರ್ಷಗಳ ನಂತರ ‘ಜಾಕಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು.
ಈ ಸಿನಿಮಾದ ಯಶಸ್ಸನ್ನು ಕಂಡು ಪ್ರತೀ ವರ್ಷವೂ ಪುನೀತ್ ಜನ್ಮದಿನದಂದು ಅವರ ಸಿನಿಮಾ ಮರು ಬಿಡುಗಡೆ ಮಾಡಲಾಗುವುದು ಎಂದು ಕೆಆರ್‌ಜಿ ಸ್ಟುಡಿಯೋಸ್ ತಿಳಿಸಿದೆ.
ಜೊತೆಗೆ ಮುಂದಿನ ವರ್ಷ ಪುನೀತ್ ಅವರಿಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಪಿಆರ್‌ಕೆ ಪ್ರೊಡಕ್ಷನ್ಸ್ ಪುನೀತ್ ನಟನೆಯ ‘ಅಪ್ಪು’ ಚಿತ್ರ ಬಿಡುಗಡೆ ಮಾಡಲಿವೆ.