ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ ಅದ್ಧೂರಿ ಆಚರಣೆ

| Published : Mar 18 2025, 12:35 AM IST

ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ ಅದ್ಧೂರಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪುನೀತ್‌ ರಾಜ್‌ಕುಮಾರ್‌ ಅವರ 50ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರು ಮತ್ತು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಅಶ್ವಿನಿ ಪುನೀತ್‌ಕುಮಾರ್‌ ಮತ್ತು ಮಕ್ಕಳಾದ ಧೃತಿ, ವಂದಿತಾ ಖುದ್ದು ತಾವೇ ನಿಂತು ಅಭಿಮಾನಿಗಳಿಗೆ ಊಟ ಬಡಿಸಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪುನೀತ್‌ ರಾಜ್‌ಕುಮಾರ್‌ ಅವರ 50ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರು ಮತ್ತು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಅಶ್ವಿನಿ ಪುನೀತ್‌ಕುಮಾರ್‌ ಮತ್ತು ಮಕ್ಕಳಾದ ಧೃತಿ, ವಂದಿತಾ ಖುದ್ದು ತಾವೇ ನಿಂತು ಅಭಿಮಾನಿಗಳಿಗೆ ಊಟ ಬಡಿಸಿದ್ದು ವಿಶೇಷವಾಗಿತ್ತು.

ಬೆಳಗ್ಗೆಯೇ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಅವರ ಪತ್ನಿ ಮಂಗಳಾ ದಂಪತಿ ಜತೆಗೆ ಅಶ್ವಿನಿ ಮತ್ತು ಮಕ್ಕಳು ಪುನೀತ್‌ ಅವರ ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಮಂದಿ ಅಭಿಮಾನಿಗಳಿಗೆ ಕುಟುಂಬದಿಂದ ಅನ್ನದಾನ ನಡೆಯಿತು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ। ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಭಿಮಾನಿಗಳು ಸುಮಾರು 25 ಬೃಹತ್‌ ಕೇಕ್‌ಗಳನ್ನು ಕತ್ತರಿಸುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದರು. ಬೆಳಗ್ಗಿನಿಂದಲೇ ರಾಜ್ಯದ ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪುನೀತ್‌ ಅವರ ಸಮಾಧಿಗೆ ನಮನ ಸಲ್ಲಿಸಿದರು.

ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿ ಕಂಠೀರವ ಸ್ಟುಡಿಯೋ ಬಳಿ 25 ಸಾವಿರ ನಂದಿನಿ ಮಜ್ಜಿಗೆ ಪ್ಯಾಕೆಟ್, 10 ಸಾವಿರ ನಂದಿನಿ ಪೇಡಾ,‌ 5 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಪ್ಪು ಯೂತ್‌ ಬ್ರಿಗೇಡ್‌ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ಕೆಲಸ ಮಾಡುವವರಿಗೆ ಬಟ್ಟೆ ವಿತರಣೆ ಮಾಡಲಾಯಿತು.

ರಾಜ್ಯದ ವಿವಿಧೆಡೆ ಪುನೀತ್‌ ಅವರ ಅಭಿಮಾನಿಗಳು ರಕ್ತದಾನ ಶಿಬಿರ, ಆರೋಗ್ಯ ತಪಸಾಣೆ, ನೇತ್ರದಾನಕ್ಕೆ ನೋಂದಣಿ ಶಿಬಿರ, ಅನ್ನ ಸಂತರ್ಪಣೆ, ಶಾಲಾ-ಮಕ್ಕಳಿಗೆ ನೋಟ್‌ ಪುಸ್ತಕ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು ಹಾಗೂ ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪುನೀತ್‌ರಾಜ್‌ಕುಮಾರ್‌ ಅವರ 50ನೇ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದರು.ಬಾಕ್ಸ್...

ಪುನೀತ್‌ ಅಭಿಮಾನಿಗಳ ಜೊತೆ ಧ್ರುವ ಬರ್ತ್‌ಡೇ:

ಸೋಮವಾರ ಬೆಳಗ್ಗೆ ತಮ್ಮ ನಿವಾಸದ ಬಳಿ ಬಂದಿದ್ದ ಪುನೀತ್‌ ಅವರ ಅಭಿಮಾನಿಗಳ ಜತೆಗೆ ನಟ ಧ್ರುವ ಸರ್ಜಾ ಕೇಕ್‌ ಕಟ್‌ ಮಾಡಿ ಪುನೀತ್‌ ಅವರ ಹುಟ್ಟುಹಬ್ಬವನ್ನು ಆಚರಿಸಿದರು.