ರಾಮೇಶ್ವರ ವಾಲ್ಮೀಕಿ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಿ

| Published : May 25 2024, 12:48 AM IST

ಸಾರಾಂಶ

ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯದ ರಮೇಶ ವಾಲ್ಮೀಕಿ ಎಂಬ ಯುವಕನನ್ನು ಅದೇ ಗ್ರಾಮದ ಲಿಕ್ಕರ್ ಮಾಫಿಯಾದವರು ಅಕ್ರಮವಾಗಿ ಬಂಧಿಸಿಟ್ಟು, ಅಮಾನುಷವಾಗಿ ಹತ್ಯೆಗೈದಿದ್ದಾರೆ. ಹಂತಕರನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ನಾಯಕ ಸಮಾಜ, ಎಲ್.ಜಿ.ಹಾವನೂರು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

- ರಾಜಸ್ಥಾನ ಪ್ರಕರಣ ಖಂಡಿಸಿ ಪ್ರತಿಭಟನೆಯಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯ । ಕರ್ನಾಟಕ ಮಾದರಿ ಸೌಲಭ್ಯಕ್ಕೆ ಆಗ್ರಹ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯದ ರಾಮೇಶ್ವರ ವಾಲ್ಮೀಕಿ ಎಂಬ ಯುವಕನನ್ನು ಅದೇ ಗ್ರಾಮದ ಲಿಕ್ಕರ್ ಮಾಫಿಯಾದವರು ಅಕ್ರಮವಾಗಿ ಬಂಧಿಸಿಟ್ಟು, ಅಮಾನುಷವಾಗಿ ಹತ್ಯೆಗೈದಿದ್ದಾರೆ. ಹಂತಕರನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ನಾಯಕ ಸಮಾಜ, ಎಲ್.ಜಿ.ಹಾವನೂರು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಿಂದ ಶ್ರೀ ಜಯದೇವ ವೃತ್ತ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಘಟನೆ ಸಂಬಂಧ ರಾಜಸ್ಥಾನದ ಸಮಾಜ ಕಲ್ಯಾಣ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಆಗ್ರಹಿಸಿ, ಉಪವಿಭಾಗಾಧಿಕಾರಿ ಮುಖಾಂತರ ರಾಜಸ್ಥಾನ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ನಾಯಕ ಸಮಾಜದ ಹಿರಿಯ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ರಾಜಸ್ಥಾನದ ಜುಂಜುನು ಜಿಲ್ಲೆಯ ಹಳ್ಳಿಯೊಂದರ 27 ವರ್ಷದ ದಲಿತ ಯುವಕ ರಾಮೇಶ್ವರ ವಾಲ್ಮೀಕಿ ಹತ್ಯೆಯಾಗಿದೆ. ಅದೇ ಗ್ರಾಮದ ಲಿಕ್ಕರ್ ಮಾಫಿಯಾದ ಗುಂಪು ಅಪಹರಿಸಿ, ಅಜ್ಞಾತ ಸ್ಥ‍ಳವೊಂದರಲ್ಲಿ ಕೈ-ಕಾಲುಗಳನ್ನು ಕಟ್ಟಿ, ಅಮಾನವೀಯ, ಪೈಶಾಚಿಕವಾಗಿ ಹಲ್ಲೆ ನಡೆಸಿ ಕೊಂದಿದೆ. ಅನಂತರ ಮೃತಪಟ್ಟ ರಾಮೇಶ್ವರನ ಶವವನ್ನು ಆತನ ಮನೆ ಮುಂದೆ ಬಿಸಾಕಿಹೋಗಿದೆ. ಕೊಲೆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಾನವೀಯತೆಯನ್ನೇ ಮರೆತು, ಪೈಶಾಚಿಕ ಕೃತ್ಯ ಎಸಗಿರುವ ಅಲ್ಲಿನ ಲಿಕ್ಕರ್ ಮಾಫಿಯಾದ ರೌಡಿಗಳನ್ನು ಮಟ್ಟಹಾಕುವ ಕೆಲಸವನ್ನು ರಾಜಸ್ಥಾನ ಹಾಗೂ ಕೇಂದ್ರ ಸರ್ಕಾರಗಳು ಮೊದಲು ಮಾಡಬೇಕು ಎಂದು ಒತ್ತಾಯಿಸಿದರು.

ನಾಯಕ ಸಮಾಜದ ಮುಖಂಡ ಹದಡಿ ಹಾಲೇಶಪ್ಪ ಮಾತನಾಡಿ, ರಾಮೇಶ್ವರ ವಾಲ್ಮೀಕಿ ಎಂಬವನ ಹತ್ಯೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಸಂಗತಿ. ಪ್ರಕರಣವನ್ನು ರಾಜಸ್ಥಾನ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹಂತಕರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು.

ಸಮಾಜದ ಮುಖಂಡರಾದ ರಾಜನಹಟ್ಟಿ ರಾಜು, ಆಲೂರು ಪರಶುರಾಮ, ಯಲೋದಹಳ್ಳಿ ರವಿಕುಮಾರ, ಯಲೋದಹಳ್ಳಿ ಪರಶುರಾಮ, ಕರನಾಯಕನಹಳ್ಳಿ ತಿಪ್ಪಣ್ಣ, ಗಂಡುಗಲಿ ಅಸ್ತಾಫನಹಳ್ಳಿ, ಕರಿಯಪ್ಪ ನಾಯಕ, ಶಿವಪುರ ಕೃಷ್ಣಮೂರ್ತಿ, ಮುಸ್ಲಿಂ ಸಮಾಜದ ಜಿಕ್ರಿಯಾ, ಜಮೀರ್ ಬಾಷಾ, ಭೋವಿ ಸಮಾಜದ ದಯಾನಂದ, ಆರನೇಕಲ್ಲು ಹನುಮಂತಪ್ಪ, ಶ್ಯಾಗಲೆ ಸತೀಶ, ತ್ಯಾವಣಿಗೆ ಜ್ಞಾನೇಶ, ರಾಜನಹಟ್ಟಿ ರಾಜು, ಗೌರವನಹಳ್ಳಿ ಸತೀಶ ಇತರರು ಇದ್ದರು.

- - -

ಬಾಕ್ಸ್-1 * ಬೇಡಿಕೆಗಳೇನು?- ಪರಿಶಿಷ್ಟ ಪಂಗಡದ ಯುವಕನ ಮೇಲೆ ನಿರ್ದಯವಾಗಿ ಹಲ್ಲೆ ಮಾಡಿ, ಹತ್ಯೆಗೈದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು

- ರಾಜಸ್ಥಾನ ಸರ್ಕಾರವು ದಲಿತ ಯುವಕನ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು

- ಮೃತ ರಾಮೇಶ್ವರ ವಾಲ್ಮೀಕಿ ಕುಟುಂಬಕ್ಕೆ ಕನಿಷ್ಠ ₹3 ಕೋಟಿ ಪರಿಹಾರ ನೀಡಬೇಕು

- ಆತನ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಿ, ಜೀವನ ಭದ್ರತೆ, ಸುರಕ್ಷತೆ ಕಲ್ಪಿಸಬೇಕು

- ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಕರ್ನಾಟಕ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಬೇಕು

- - - ಬಾಕ್ಸ್‌-2 * ವಾಲ್ಮೀಕಿ ಸಮುದಾಯ ಅಭ್ಯುದಯಕ್ಕೆ ಸ್ಪಂದಿಸಿ2011ರ ಜಾತಿಗಣತಿ ಪ್ರಕಾರ ದೇಶದಲ್ಲಿ ಸುಮಾರು ಶೇ.19.6ರಷ್ಟು ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜವಿದೆ. ಉತ್ತರ ಭಾರತದಲ್ಲಿ ಸಫಾಯಿ ಕರ್ಮಚಾರಿ, ಸ್ಮಶಾನ ಕೆಲಸ, ಚರಂಡಿ ಕೆಲಸ, ಮ್ಯಾನ್ಯುವಲ್ ಕೆಲಸ ಹೀಗೆ ಸಮಾಜದ ಸ್ಥಿತಿ ದಯನೀಯವಾಗಿದೆ. ಅತ್ಯಂಕ ಕೆಳಮಟ್ಟದ ಕೆಲಸ ಮಾಡುತ್ತಿದ್ದಾರೆ. ಕಡು ಬಡತನದಲ್ಲಿರುವ ಈ ಸಮುದಾಯಕ್ಕೆ ಮುಖ್ಯವಾಹಿನಿಗೆ ಬರಲು ಕೇಂದ್ರ ಸರ್ಕಾರ ಸಬ್ಸಿಡಿ ದರದ ಸಾಲ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಮಾದರಿ ಸೌಲಭ್ಯ ನೀಡಬೇಕು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ತರಬೇಕು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಸರ್ಕಾರಗಳಿಗೆ ಆಗ್ರಹಿಸಿದರು.

- - - (-ಫೋಟೋ ಇದೆ)