ಕಾಯ್ದೆಯ ಅಡಿಯಲ್ಲಿ ತಿಳಿಸಿರುವ ರಸ್ತೆ ಸಂಚಾರ ಸುರಕ್ಷತೆಗಾಗಿ ಟ್ರಾಫಿಕ್ ನಿಯಮ ಪಾಲಿಸಬೇಕು
ಕುಕನೂರು: ಅಪಘಾತ ಸಂಭವಿಸಿದರೆ ಶಿಕ್ಷೆ ಹಾಗೂ ದಂಡ ತಪ್ಪಿದ್ದಲ್ಲ ಎಂದು ವಕೀಲೆ ವಿಜಯಲಕ್ಷ್ಮೀ ನವಲಗುಂದ ಹೇಳಿದರು.
ತಾಲೂಕಿನ ದ್ಯಾಂಪೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ಯಾನಲ್ ವಕೀಲರು ಹಾಗೂ ಅಧ್ಯಕ್ಷರು ನಿರಂತರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮೊಟಾರು ವಾಹನ ಕಾಯ್ದೆ-೧೯೮೮ ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾನೂನುಗಳು ಬಗ್ಗೆ ಮಾತನಾಡಿ, ೧೯೮೮ ರಲ್ಲಿ ಭಾರತ ಸರ್ಕಾರ ಜಾರಿಗೆ ತಂದಿರುವ ಮೊಟಾರು ವಾಹನ ಕಾಯ್ದೆ ೧೮ ವರ್ಷ ಪೂರೈಸದ ಮಕ್ಕಳು ವಾಹನ ಚಲಾಯಿಸಬಾರದು ಚಲಾಯಿಸಿದರೆ ಆ ಮಕ್ಕಳ ಪೋಷಕರಿಗೆ ದಂಡ ವಿಧಿಸಲಾಗುವುದು. ಕಾಯ್ದೆಯ ಅಡಿಯಲ್ಲಿ ತಿಳಿಸಿರುವ ರಸ್ತೆ ಸಂಚಾರ ಸುರಕ್ಷತೆಗಾಗಿ ಟ್ರಾಫಿಕ್ ನಿಯಮ ಪಾಲಿಸಬೇಕು. ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ ಹಾಕುವುದು, ವಾಹನ ಚಾಲನೆ ವೇಳೆಯಲ್ಲಿ ಮೊಬೈಲ್ ಬಳಸದಿರುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸದಿರುವುದು, ವೇಗ ಮಿತಿಯಲ್ಲಿರಿಕೊಳ್ಳುವುದು, ಸಿಗ್ನಲ್ ಜಂಪ್ ಮಾಡದಿರುವುದು ನಿಯಮಗಳಾಗಿದ್ದು ಇವುಗಳ ಉಲ್ಲಂಘಿಸಿದರೆ ಮತ್ತು ಅದರಿಂದ ಅಪಘಾತಗಳು ಸಂಭವಿಸಿದರೆ ಭಾರಿ ದಂಡ ಕಟ್ಟುವುದರ ಜತೆಗೆ ಶಿಕ್ಷೆಗೂ ಒಳಗಾಗಬಹುದು ಎಂದು ಎಚ್ಚರಿಸಿದರು.ಚಾಲನಾ ಪರವಾನಗಿ, ನೋಂದಣಿ ಪ್ರಮಾಣ ಪತ್ರ, ವಿಮೆ ಮತ್ತು ಇತರೆ ದಾಖಲೆ ಯಾವಾಗಲು ಇಟ್ಟುಕೊಳ್ಳಬೇಕು. ಅಪಘಾತ ಸಂಭವಿಸಿದರೆ ಪರಿಹಾರ ಪಡೆದುಕೊಳ್ಳುವ ವಿಧಾನಗಳ ಬಗ್ಗೆಯೂ ತಿಳಿಸಲಾಯಿತು. ನಂತರ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆಯೂ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಶಾಲೆಯ ಮುಖ್ಯ ಶಿಕ್ಷಕ ಮಹಮದ್ ಖಧೀರ್ ವಹಿಸಿದ್ದರು. ಕುಕನೂರು ಪಪಂ ಕಾನೂನು ಸಲಹೆಗಾರ ರಮೇಶ ಗಜಕೋಶ, ಶಾಲಾ ಶಿಕ್ಷಕರಿದ್ದರು.