ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಸ್ವಾಧೀನದ ಅಧಿಸೂಚನೆ ಪ್ರಕಟಗೊಂಡಿದೆ. ಹೆದ್ದಾರಿ ಕಾಮಗಾರಿ ನಡೆಯುವ 12 ಗ್ರಾಮಗಳ ಜಮೀನುದಾರರಿಗೆ ಅಗತ್ಯ ದಾಖಲೆ ಪತ್ರಗಳನ್ನು ನೀಡಲು ಸೂಚಿಸಲಾಗಿದೆ.ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ 33.1 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ವ್ಯಾಪ್ತಿಯು ಸರ್ಕಾರಿ, ಕಂದಾಯ,ಅರಣ್ಯ ಭಾಗಗಳಲ್ಲದೆ ಕೆಲವು ಖಾಸಗಿ ಸ್ಥಳಗಳ ಮೂಲಕ ಹಾದು ಹೋಗುತ್ತದೆ. ಈಗಾಗಲೇ ಸರ್ಕಾರಿ, ಕಂದಾಯ,ಅರಣ್ಯ ಭಾಗಗಳಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಜಾಗಗಳ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದೆ.
ರಸ್ತೆ ಅಗಲೀಕರಣ, ಸೇತುವೆ ರಚನೆ, ತಡೆಗೋಡೆ ನಿರ್ಮಾಣ ಚರಂಡಿ, ಕಿರು ಸೇತುವೆಗಳ ಕಾಮಗಾರಿ ನಡೆಯುತ್ತಿದ್ದು ಈ ವ್ಯಾಪ್ತಿಯಲ್ಲಿ ಭಾರಿ ಧೂಳಿನ ಸಮಸ್ಯೆಯೂ ಉಂಟಾಗಿದೆ. ಕಾಮಗಾರಿಗಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಮರಗಳ ತೆರವು ಕಾರ್ಯ ನಡೆದಿದೆ . 12.88 ಹೆಕ್ಟೇರ್ ಜಾಗ ಗುರುತು: ರಾಷ್ಟ್ರೀಯ ಹೆದ್ದಾರಿ 73ರ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ವತಿಯಿಂದ ಭೂ ಸ್ವಾಧೀನದ ಅಧಿಸೂಚನೆ ಪ್ರಕಟಗೊಂಡಿದ್ದು 12.88 ಹೆಕ್ಟೇರ್ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಜಾಗಗಳು ಒಳಗೊಂಡಿವೆ. ಜಾಗಗಳ ಮಾಲಕರು ಜಮೀನಿನ ಮೂಲ ದಾಖಲೆ ಪತ್ರ ಭೂ- ಪರಿವರ್ತನೆ ಆಗಿದ್ದಲ್ಲಿ ಆದೇಶ ಪ್ರತಿ, ಆರ್ ಟಿ ಸಿ, ಮ್ಯೂಟೇಷನ್ ಪ್ರತಿ ಕಂದಾಯ ಪಾವತಿ ರಶೀದಿ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಗೆ ನೀಡಲು ಸೂಚಿಸಲಾಗಿದೆ.ದಾಖಲೆ ನೀಡಲು ದಿನಾಂಕ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು, ಬೆಳ್ತಂಗಡಿ ತಾಲೂಕಿನ ಮಾಲಾಡಿ, ಸೋಣಂದೂರು, ಕುಕ್ಕುಳ, ಪಾರೆಂಕಿ, ಕುವೆಟ್ಟು, ಬೆಳ್ತಂಗಡಿ ಕಸಬಾ,ಲಾಯಿಲ ಉಜಿರೆ, ಕಲ್ಮಂಜ, ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ ಗ್ರಾಮಗಳಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪಿಲಾತಬೆಟ್ಟು ಮಾಲಾಡಿ ಗ್ರಾಮದವರು ಮಾ. 28ರಂದು ಬೆಳಗ್ಗೆ 11 ಗಂಟೆಗೆ, ಸೋಣಂದೂರು, ಕುಕ್ಕುಳ ಗ್ರಾಮದವರು 3 ಗಂಟೆಗೆ, ಪಾರೆಂಕಿ ಕುವೆಟ್ಟು ಗ್ರಾಮದವರು ಮಾ.30 ರಂದು ಬೆಳಗ್ಗೆ 11 ಗಂಟೆಗೆ, ಬೆಳ್ತಂಗಡಿ ಕಸಬಾ ಏ.1ರಂದು ಬೆಳಗ್ಗೆ 11 ಗಂಟೆಗೆ, ಲಾಯಿಲ ಗ್ರಾಮದವರು ಏ.2ರಂದು ಬೆಳಗ್ಗೆ 11 ಗಂಟೆಗೆ, ಉಜಿರೆ ಗ್ರಾಮದವರು ಏ.3ರಂದು ಬೆಳಗ್ಗೆ 11 ಗಂಟೆಗೆ, ಚಿಬಿದ್ರೆ ಕಲ್ಮಂಜ ಗ್ರಾಮದವರು ಏ. 4ರಂದು ಬೆಳಗ್ಗೆ 11 ಗಂಟೆಗೆ, ಮುಂಡಾಜೆ ಗ್ರಾಮದವರು ಏ.5ರಂದು ಬೆಳಗ್ಗೆ 11ಗಂಟೆಗೆ, ಚಾರ್ಮಾಡಿ ಗ್ರಾಮದವರು ಏ.6ರಂದು ಬೆಳಗ್ಗೆ 11 ಗಂಟೆಗೆ ಕಚೇರಿಗೆ ದಾಖಲೆಗಳನ್ನು ನೀಡಲು ದಿನ ನಿಗದಿಪಡಿಸಲಾಗಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ವೇಳೆ ರಸ್ತೆ ಹೆಚ್ಚು ನೇರಗೊಳ್ಳಲಿದೆ. ಸದ್ಯ 35 ಕಿ.ಮೀ. ವ್ಯಾಪ್ತಿ ಇರುವ ಈ ರಸ್ತೆಯ ವ್ಯಾಪ್ತಿ 33.1ಕಿಮೀ.ಗಳಿಗೆ ಸೀಮಿತಗೊಳ್ಳಲಿದೆ. ಪ್ರಸ್ತುತ ಕಾಮಗಾರಿಗೆ ನೀರಿನ ಸಮಸ್ಯೆ ಎದುರಾಗುವ ಭೀತಿ ಇದೆ. ಅರ್ಧಂಬರ್ಧ ಕಾಮಗಾರಿ ಬಗ್ಗೆ ಜನರ ಆಕ್ರೋಶ. ಕಾಮಗಾರಿಯಿಂದ ರಸ್ತೆ, ಪೇಟೆಗಳ ಚಿತ್ರಣವೂ ಬದಲಾಗಲಿದೆ.