ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಂದ್ರಗುಪ್ತ ರಸ್ತೆಯ ಎಂ.ಎಲ್. ವರ್ಧಮಾನಯ್ಯ ಸಭಾ ಭವನದಲ್ಲಿ ಭಟ್ಟಾಕಲಂಕ ಭಟ್ಟಾರಕ ಸ್ವಾಮಿಯ ಸಮ್ಮುಖದಲ್ಲಿ 108ನೇ ಆಚಾರ್ಯ ಶ್ರೀ ಪುಣ್ಯಸಾಗರ ಮುನಿ ಮಹಾರಾಜರ ಚಾತುರ್ಮಾಸವು ಮಂಗಳ ಕಳಸ ಸ್ಥಾಪನೆಯೊಂದಿಗೆ ನೆರವೇರಿತು.ಸಮಸ್ತ ಜೈನ ಸಮಾಜದವರು ಈ ವೇಳೆ ಹಾಜರಿದ್ದರು. ಇದಕ್ಕೂ ಮುನ್ನ ನ್ಯೂ ಸಯ್ಯಾಜಿರಾವ್ ರಸ್ತೆಯ ಡಿ. ಬನುಮಯ್ಯ ಕಾಲೇಜು ಆವರಣದಲ್ಲಿನ ಶ್ರೀ ಶಾಂತಿನಾಥ ಬಸದಿಯಿಂದ ನಗರ ಪಾಲಿಕೆ, ಕಾಡಾ ಕಚೇರಿ, ಬೆಂಗಳೂರು ನೀಲಗಿರಿ ರಸ್ತೆ, ಹಾರ್ಡಿಂಗ್‌ವೃತ್ತ, ಚಂದ್ರಗುಪ್ತ ರಸ್ತೆ ಮೂಲಕ ಎಂ.ಎಲ್. ವರ್ಧಮಾನಯ್ಯ ಸಭಾ ಭವನದವರೆಗೆ ವೈಭವದ ಮೆರವಣಿಗೆ ನಡೆಯಿತು.
ಈ ವೇಳೆ ಉದ್ಯಮಿಯೊಬ್ಬರು ಹರಾಜಿನಲ್ಲಿ ಖರೀದಿಸಿದ ಧ್ವಜವನ್ನು ಹಾರೋಹಿಸಲಾಯಿತು.ಬಳಿಕ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮಹಾವೀರ, ಬುದ್ಧ ಅವರಂತಹ ಸಾಧು ಸಂತರು, ಅಹಿಂಸೆಯೊಂದಿಗೆ ಶಾಂತಿಯುತವಾಗಿ ಹೋರಾಟ ನಡೆಸಿ, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಪ್ರೇರಣೆ ನೀಡಿದ್ದಾರೆ. ಅಂತಹ ಮಹನೀಯರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಜೈನ ಸಮಾಜವು ಶಾಂತಿ, ಅಂಹಿಸಾ ತತ್ತ್ವಗಳನ್ನು ನಂಬಿ ಬದುಕುತ್ತಿದೆ. ಸಮಾಜದಲ್ಲಿ ಎಲ್ಲರೂ ನೆಮ್ಮದಿ ಮತ್ತು ಸಂತೋಷದಿಂದ ಇರಬೇಕಾದರೆ ಮಹನೀಯರ ಮಾರ್ಗಗಳನ್ನು ಅನುಸರಿಸಿ, ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಮನುಷ್ಯ ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಗೆಲ್ಲಬೇಕು ಎಂದು ಅವರು ತಿಳಿಸಿದರು.ಈ ವೇಳೆ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್. ಸುನಿಲ್‌ಕುಮಾರ್, ಉಪಾಧ್ಯಕ್ಷ ಬಿ. ಭರತ್‌ರಾಜ್, ಕಾರ್ಯದರ್ಶಿ ಪಿ.ಎಸ್. ಲಕ್ಷ್ಮೀಶ್‌ಬಾಬು, ಕೋಶಾಧ್ಯಕ್ಷ ಬಿ. ಜ್ವಾಲೇಂದ್ರ ಪ್ರಸಾದ್, ಜೈನ ಸಮಾಜದ ಹಲವು ಪ್ರಮುಖರು ಭಾಗವಹಿಸಿದ್ದರು.