ಪುರಂದರದಾಸರು ನಾರದರ ಪ್ರತಿರೂಪ: ಕೊಪ್ರೇಶಾಚಾರ್‌

| Published : Feb 11 2024, 01:48 AM IST

ಪುರಂದರದಾಸರು ನಾರದರ ಪ್ರತಿರೂಪ: ಕೊಪ್ರೇಶಾಚಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಸುಗೂರು ತಾಲೂಕಿನ ಹೂನೂರು (ಕಿಡದೂರು ಸೀಮಾ) ಬಳಿ ಇರುವ ಶ್ರೀಕ್ಷೇತ್ರ ಅಮ್ಮನಕಟ್ಟೆ ಶ್ರೀ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 211ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಜನಸಾಮಾನ್ಯರಲ್ಲಿ ನಾರದರ ಕುರಿತು ತಪ್ಪು ವ್ಯಾಖ್ಯಾನಗಳನ್ನು, ತಿಳುವಳಿಕೆಗಳನ್ನು ಇದುವರೆಗೆ ನೀಡಲಾಗಿದೆ. ನಾರದರು ಸಂಚಾರಿ ಪ್ರೀಯರು. ಅವರ ಹೆಸರೇ ಸೂಚಿಸುವಂತೆ ಒಳ್ಳೆಯ ಗುಣಗಳುಳ್ಳ ಸಂದೇಶ ಪ್ರಚಾರ ಮಾಡಿದ್ದಾರೆ. ಅದೇ ತೆರನಾಗಿ ಪುರಂದರದಾಸರು ಭಗವಂತನ ಮಹಿಮೆ, ಧ್ಯಾನ, ಧರ್ಮದ ಪ್ರಚಾರ ಮಾಡಿದ್ದು, ದಾಸರು ನಾರದರ ಪ್ರತಿರೂಪವಾಗಿದ್ದಾರೆ ಎಂದು ಸಿಂಧನೂರಿನ ಸುಧಾಪಂಡಿತ ವೇ.ಮೂ.ಕೊಪ್ರೇಶಾಚಾರ್‌ ತಿಳಿಸಿದರು.

ತಾಲೂಕಿನ ಹೂನೂರು(ಕಿಡದೂರು ಸೀಮಾ) ಬಳಿ ಇರುವ ಶ್ರೀಕ್ಷೇತ್ರ ಅಮ್ಮನಕಟ್ಟೆ ಶ್ರೀ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 211ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪುರಂದರದಾಸರ ಆರಾಧನೆ ನಿಮಿತ್ತ ಉಪನ್ಯಾಸ ನೀಡಿದರು.

ಭಗವಂತನ ಆರಾಧನೆ ದೊಡ್ಡ ಪುಣ್ಯದ ಕೆಲಸ. ಕೇವಲ ಸಾಧಕರಾದರೆ ಸಾಲದು, ಅತ್ಯುತ್ತಮ ಸಾಧಕರಾಗಬೇಕಾಗಿದೆ. ದಾಸ ಎಂಬ ಶಬ್ಧದ ಕೀಳರಿಮೆ ಬೇಡ. ಭಕ್ತರು ಆತ್ಮನಿವೇದನೆ ಮಾಡಿಕೊಳ್ಳಬೇಕು. ನಮಸ್ಕಾರ ಮಾಡುವ ಪರಿಪಾಠದಲ್ಲಿ ದೊಡ್ಡ ಶಕ್ತಿ ಮತ್ತು ಅಪಾರ ಗೂಢಾರ್ಥವಿದೆ. ಸಂಸ್ಕೃತಿಯನ್ನು ಬಿಂಬಿಸುವ, ವ್ಯಕ್ತಿತ್ವವನ್ನು ಪ್ರದರ್ಶಿಸುವ ಪ್ರಮುಖ ಸಾಧನವಾಗಿದೆ ಎಂದರು.

ಭಗವಂತನ ಆರಾಧನೆಗೆ ವೃದ್ಯಾಪವೇ ಸೂಕ್ತ ಸಂದರ್ಭ ಎಂದು ತಿಳಿದುಕೊಳ್ಳುವುದು ತಪ್ಪು. ಬಾಲ್ಯ, ಯೌವನದಲ್ಲಿಯೇ ಆರಾಧನೆ, ಸ್ಮರಣೆ, ಅಧ್ಯಯನಗಳು ನಡೆಯುವದು ಸೂಕ್ತ. ಪುರಂದರದಾಸರ ಕೀರ್ತನೆಗಳು, ಸಂದೇಶಗಳು ಹಾಗೂ ಅವರ ಜೀವನದಲ್ಲಿ ಆದ ಭಗವಂತನ ಪ್ರೇರಣೆ, ಬದಲಾವಣೆಗಳು ನಮ್ಮೆಲ್ಲರಿಗೆ ಸರ್ವ ಕಾಲಕ್ಕೂ ಅಗತ್ಯವಾಗಿ ಬೇಕಾಗಿದೆ ಎಂದರು.

ದಾಸರ ಸಾಹಿತ್ಯದಲ್ಲಿ ಕನ್ನಡ ಭಾಷೆಯ ಕಳಕಳಿ, ಸಮಾಜ ಸುಧಾರಣೆ ಚಿಂತನೆಗಳು ಅಡಕವಾಗಿವೆ. ಎಲ್ಲರೂ ದಾಸರ ಸಾಹಿತ್ಯದ ಅಧ್ಯಯನ ಮಾಡುವ ಮೂಲಕ ಎಲ್ಲರ ಮನ-ಮನೆಗಳು ಪರಿವರ್ತನೆಯಾಗಬೇಕೆಂದು ಸುಧಾ ಪಂಡಿತ ವೇ.ಮೂ.ಕೊಪ್ರೇಶಾಚಾರ್ ಸಿಂಧನೂರು ತಿಳಿಸಿದರು.

ಕು.ಅಪೇಕ್ಷಾ ಎಸ್.ಎನ್.ಸರಕೀಲ್ರ ದಾಸವಾಣಿ ಕಾರ್ಯಕ್ರಮ ಗಮನ ಸೆಳೆಯಿತು. ಹಾರ್ಮೋನಿಯಂ ಮಾರುತಿ ಸಾಂತಪೂರ, ತಬಲಾ ಸೇವೆಯನ್ನು ಹರೀಶ ಕುಲಕರ್ಣಿ ನೀಡಿದರು.

ಈ ಸಂದರ್ಭದಲ್ಲಿ ಸೇವಾ ವಿಶ್ವಸ್ಥ ಸಮಿತಿ ಅಧ್ಯಕ್ಷ ಗುರುರಾಜರಾವ್ ಕುಲಕರ್ಣಿ ಗೋನವಾರ, ಪದಾಧಿಕಾರಿಗಳಾದ ನಾರಾಯಣರಾವ್ ಸಿದ್ದಾಪೂರ, ರಾಘವೇಂದ್ರಾಚಾರ್ ಕನಸಾವಿ, ಅಣ್ಣಪ್ಪಾಚಾರ್ ಹೂನೂರು, ಹನುಮಂತಾಚಾರ್ ಜೋಷಿ ನಂದವಾಡಗಿ, ಗುರುರಾಜರಾವ್ ಕುಲಕರ್ಣಿ ಮುದ್ದಲಗುಂಡಿ ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು. ಹನುಮೇಶರಾವ್ ಪಟವಾರಿ ಬನ್ನಿಗೋಳ ನಿರೂಪಿಸಿದರು.