ಜಾನುವಾರುಗಳ ಅಲಂಕಾರ ಸಾಮಗ್ರಿ ಖರೀದಿ ಜೋರು

| Published : Oct 21 2025, 01:00 AM IST

ಜಾನುವಾರುಗಳ ಅಲಂಕಾರ ಸಾಮಗ್ರಿ ಖರೀದಿ ಜೋರು
Share this Article
  • FB
  • TW
  • Linkdin
  • Email

ಸಾರಾಂಶ

ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಬರದ ಸಿದ್ಧತೆ ನಡೆದಿದ್ದು, ಸಾರ್ವಜನಿಕರಿಂದ ಹಬ್ಬದ ಸಾಮಗ್ರಿ ಮತ್ತು ರೈತರಿಂದ ಜಾನುವಾರುಗಳ ಅಲಂಕಾರ ಸಾಮಗ್ರಿಗಳ ಖರೀದಿ ಜೋರಾಗಿದೆ.

ಕನ್ನಡಪ್ರಭ ವಾರ್ತೆ ಮುಂಡಗೋಡ

ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಬರದ ಸಿದ್ಧತೆ ನಡೆದಿದ್ದು, ಸಾರ್ವಜನಿಕರಿಂದ ಹಬ್ಬದ ಸಾಮಗ್ರಿ ಮತ್ತು ರೈತರಿಂದ ಜಾನುವಾರುಗಳ ಅಲಂಕಾರ ಸಾಮಗ್ರಿಗಳ ಖರೀದಿ ಜೋರಾಗಿದೆ.

ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಆಕಾಶ ಬುಟ್ಟಿ ಕಂಗೊಳಿಸುತ್ತಿದ್ದು, ಮನೆಗಳಿಗೆ ಬೆಳಕಿನ ಮೆರಗು ನೀಡಲು ಗ್ರಾಹಕರಿಂದ ತಮಗಿಷ್ಟವಾದ ಆಕಾಶ ಬುಟ್ಟಿ, ಲೈಟಿನ ಸರ, ಹಣತೆ ಮುಂತಾದ ವಸ್ತುಗಳ ಖರೀದಿ ಒಂದು ಕಡೆಯಾದರೆ, ಪೂಜಾ ಸಾಮಗ್ರಿಗಳಾದ ಹೂವು, ವಿವಿಧ ತರಹದ ಹಣ್ಣು, ಬಾಳೆ ಕಂಬ, ಕಬ್ಬು ಸೇರಿ ಮುಂತಾದ ಪೂಜಾ ಸಾಮಗ್ರಿಗಳ ಖರೀದಿ ಕೂಡ ಜೋರಾಗಿದ್ದು, ಮಾರುಕಟ್ಟೆ ಸಂಪೂರ್ಣ ಜನದಟ್ಟಣೆಯಿಂದ ಕೂಡಿದೆ.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿರುವ ರೈತರು ಸಾಕಷ್ಟು ನೋವಿನಲ್ಲೂ ಕೂಡ ತಮ್ಮ ಸಂಪ್ರದಾಯವನ್ನು ಮರೆಯದೆ ಜಾನುವಾರುಗಳ ಅಲಂಕಾರ ಸಾಮಗ್ರಿಗಳ ಖರೀದಿಸಿದರು. ದೀಪಾವಳಿ ಬಲಿ ಪಾಡ್ಯದಂದು ರೈತರ ಸಂಗಾತಿ ಎತ್ತು ಜಾನುವಾರುಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅದಕ್ಕಾಗಿ ಕುಟುಂಬಸ್ಥರಿಗೆಲ್ಲ ಹೊಸ ಬಟ್ಟೆ ಖರೀದಿಸಿದಂತೆಯೇ ತಮ್ಮ ಜಾನುವಾರುಗಳನ್ನು ಶೃಂಗರಿಸಲು ವಿಶೇಷ ಅಲಂಕಾರ ಸಾಮಗ್ರಿ ಖರಿಸಲಾಗುತ್ತದೆ. ಪ್ರಮುಖವಾಗಿ ಮೂಗುದಾರ, ಗೆಜ್ಜೆ ಸರ, ಹಣೆ ಪಟ್ಟಿ, ವಿವಿಧ ಬಣ್ಣದ ರಿಬ್ಬನ್‌ಗಳು, ಬಣ್ಣದ ಹಗ್ಗ, ಕೊಂಬಿಗೆ ಹಚ್ಚಲು ಬಗೆ ಬಗೆಯ ಬಣ್ಣವನ್ನು ರೈತರು ಸೋಮವಾರ ಇಲ್ಲಿಯ ವಾರದ ಸಂತೆಯಲ್ಲಿ ಖರೀದಿಸಿದರು. ದೀಪಾವಳಿ ಪಾಡ್ಯದಂದು ಪ್ರಯುಕ್ತ ಸುತ್ತಮುತ್ತ ಪ್ರದೇಶಗಳಲ್ಲಿ ಏರ್ಪಡಿಸಲಾಗುವ ದನ ಬೆದರಿಸುವ ಸ್ಪರ್ಧೆಯಲ್ಲಿ ತಮ್ಮ ಜಾನುವಾರುಗಳನ್ನು ಶೃಂಗರಿಸಿ ಬಿಡುವ ಮೂಲಕ ತಮ್ಮ ಜಾನುವಾರುಗಳ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಾರೆ.

ಮಳೆಯ ನಡುವೆಯು ದೀಪಾವಳಿ ಹಬ್ಬದ ಖರೀದಿ ಜೋರು:

ಕಳೆದ ೨ ದಿನಗಳಿಂದ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯ ನಡುವೆಯೂ ಕೂಡ ವ್ಯಾಪಾರ ಹಾಗೂ ಖರೀದಿ ಜೋರಾಗಿ ನಡೆಯಿತು. ಸೋಮವಾರ ಪಟ್ಟಣದ ವಾರದ ಸಂತೆ ನಡುವೆ ನಿರಂತರ ಮಳೆಯಾದರೂ ಕೂಡ ಜನರು ಮಳೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖರೀದಿಯಲ್ಲಿ ನಿರತರಾಗಿದ್ದರು.