ಸಾರಾಂಶ
ಕರ್ನಾಟಕದಲ್ಲಿ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಲು ಕೇಂದ್ರ ಸರ್ಕಾರವು ದರ ನಿಗದಿಪಡಿಸಿದೆ. ಖರೀದಿಸುವ ಪ್ರತಿ ಕ್ವಿಂಟಲ್ ಭತ್ತ (ಸಾಮಾನ್ಯ)ಕ್ಕೆ 2,300 ರು. ; ಭತ್ತ (ಗ್ರೇಡ್-ಎ) 2,320 ರು.; ರಾಗಿ 4,290 ರು, ಜೋಳ (ಹೈಬ್ರಿಡ್) 3,371 ರು ಹಾಗೂ ಜೋಳ (ಮಾಲ್ದಂಡಿ) 3,421 ರು. ದರ ನಿಗದಿಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಮೂಲಕ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳವನ್ನು 2025ರ ಜನವರಿ 1 ರಿಂದ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಆಹಾರಧಾನ್ಯಗಳ ಖರೀದಿ ಸಂಬಂಧ ಈಗಾಗಲೇ ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 2025ರ ಮಾರ್ಚ್ 31ರ ವರೆಗೂ ಆಹಾರಧಾನ್ಯಗಳನ್ನು ಖರೀದಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಭತ್ತಕ್ಕೆ ರೈತರ ನೋಂದಣಿ ಅವಧಿಯನ್ನು 2025ರ ಫೆಬ್ರವರಿ 28 ರವರೆಗೂ ಹಾಗೂ ರಾಗಿ ಮತ್ತು ಬಿಳಿ ಜೋಳಕ್ಕೆ ಮಾರ್ಚ್ 31 ರವರೆಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.ಭತ್ತ ಖರೀದಿಗೆ- ಮಂಡ್ಯದಲ್ಲಿ 9, ಹಾಸನ - 22, ಮೈಸೂರು – 16, ಚಾಮರಾಜನಗರ – 4 ಹಾಗೂ ರಾಗಿ ಖರೀದಿಗೆ ಮಂಡ್ಯದಲ್ಲಿ 12, ಹಾಸನ - 22, ಮೈಸೂರು – 16, ಚಾಮರಾಜನಗರ – 5 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಲು ಕೇಂದ್ರ ಸರ್ಕಾರವು ದರ ನಿಗದಿಪಡಿಸಿದೆ. ಖರೀದಿಸುವ ಪ್ರತಿ ಕ್ವಿಂಟಲ್ ಭತ್ತ (ಸಾಮಾನ್ಯ)ಕ್ಕೆ 2,300 ರು. ; ಭತ್ತ (ಗ್ರೇಡ್-ಎ) 2,320 ರು.; ರಾಗಿ 4,290 ರು, ಜೋಳ (ಹೈಬ್ರಿಡ್) 3,371 ರು ಹಾಗೂ ಜೋಳ (ಮಾಲ್ದಂಡಿ) 3,421 ರು. ದರ ನಿಗದಿಪಡಿಸಲಾಗಿದೆ.ಭತ್ತ - ಪ್ರತಿ ಎಕರೆಗೆ 25 ಕ್ವಿಂಟಲ್ ನಂತೆ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ರಾಗಿ - ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಹಾಗೂ ಜೋಳ- ಪ್ರತಿ ಎಕರೆಗೆ 10 ಕ್ವಿಂಟಲ್ ನಂತೆ ಪ್ರತಿ ರೈತರಿಂದ ಗರಿಷ್ಠ 150 ಕ್ವಿಂಟಲ್ ಖರೀದಿಸಲು ಪ್ರಮಾಣ ನಿಗದಿಪಡಿಸಲಾಗಿದೆ.
ಶಾಸಕ ಮಧು ಜಿ.ಮಾದೇಗೌಡರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಶಾಶ್ವತವಾಗಿ ಆಹಾರ ಧಾನ್ಯಗಳ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತು ಕೇಳಿದ ಪ್ರಶ್ನೆಗೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖರೀದಿಗೆ ನಿಗದಿಗೊಳಿಸಿರುವ ಅವಧಿಯಲ್ಲೇ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳವನ್ನು ಖರೀದಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ. ಅಲ್ಲದೇ, 2024-25ನೇ ಸಾಲಿಗೆ ಬೆಂಬಲ ಬೆಲೆಯಡಿ ಖರೀದಿಸುವ ಆಹಾರಧಾನ್ಯಗಳಿಗೆ ಪ್ರೋತ್ಸಾಹಧನ ನೀಡುವ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿರುವುದಿಲ್ಲ ಎಂದು ತಿಳಿಸಿದ್ದಾರೆ.