ಬೈಚನಹಳ್ಳಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

| Published : Aug 28 2024, 12:57 AM IST

ಸಾರಾಂಶ

ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮತ್ತು ನೋಟ್‌ಬುಕ್ ವಿತರಿಸುವುದು ಪುಣ್ಯದ ಕೆಲಸ. ಅವಕಾಶ ಇದ್ದಾಗ ಇಂತಹ ಕೆಲಸಗಳನ್ನು ಮಾಡಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು. ಬೈಚನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ಗಾಂಧಿನಗರ ದಿವಾಕರ್ ಅವರು ನೀಡಿರುವ ನೋಟ್‌ಬುಕ್, ನೀರು ಶುದ್ಧೀಕರಣ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ವಿಶೇಷ ಕಾರ್ಯಕ್ರಮ. ದಾನ ಮಾಡುವ ಚಿಂತನೆ, ಮನಸ್ಸು ಎಲ್ಲರಿಗೂ ಬರುವುದಿಲ್ಲ. ಗಾಂಧಿನಗರ ದಿವಾಕರ್‌ ಅವರು ಶಾಲಾ ಮಕ್ಕಳಿಗೆ ನೀರು ಶುದ್ಧೀಕರಣ ಯಂತ್ರ ಮತ್ತು 20 ಸಾವಿರ ನೋಟ್‌ಬುಕ್ ನೀಡುತ್ತಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮತ್ತು ನೋಟ್‌ಬುಕ್ ವಿತರಿಸುವುದು ಪುಣ್ಯದ ಕೆಲಸ. ಅವಕಾಶ ಇದ್ದಾಗ ಇಂತಹ ಕೆಲಸಗಳನ್ನು ಮಾಡಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು.

ಬೈಚನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ಗಾಂಧಿನಗರ ದಿವಾಕರ್ ಅವರು ನೀಡಿರುವ ನೋಟ್‌ಬುಕ್, ನೀರು ಶುದ್ಧೀಕರಣ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ವಿಶೇಷ ಕಾರ್ಯಕ್ರಮ. ದಾನ ಮಾಡುವ ಚಿಂತನೆ, ಮನಸ್ಸು ಎಲ್ಲರಿಗೂ ಬರುವುದಿಲ್ಲ. ಗಾಂಧಿನಗರ ದಿವಾಕರ್‌ ಅವರು ಶಾಲಾ ಮಕ್ಕಳಿಗೆ ನೀರು ಶುದ್ಧೀಕರಣ ಯಂತ್ರ ಮತ್ತು 20 ಸಾವಿರ ನೋಟ್‌ಬುಕ್ ನೀಡುತ್ತಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ಧರ್ಮದವರು ತಮ್ಮ ದುಡಿಮೆಯಲ್ಲಿ ಶೇ.5ರಷ್ಟು ಆದಾಯವನ್ನು ಆ ಧರ್ಮದ ಸಮುದಾಯಕ್ಕೆ ಮೀಸಲಿಡುತ್ತಾರೆ. ಆದರೆ, ನಮ್ಮ ಧರ್ಮದವರಿಗೆ ಮಾಡಬೇಕೆಂಬ ಭಾವನೆಯೇ ಬರುವುದಿಲ್ಲ ಎಂದ ಅವರು, ಪುಸ್ತಕಕ್ಕೆ ಬೆಲೆ ಕಟ್ಟಬಹುದೇ ಹೊರತು ಕೊಡಬೇಕೆಂಬ ಮನಸ್ಸಿಗೆ ಬೆಲೆಕಟ್ಟಲಾಗದು. ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ, ಎಲ್ಲರನ್ನು ಒಟ್ಟುಗೂಡಿಸಿ ಅವರ ಸಹಕಾರದೊಂದಿಗೆ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.ನಾನು ವಿದ್ಯೆ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಕಾರಣ, ವಿದ್ಯೆ ಆತನ ಬದುಕನ್ನು ಹಸನುಮಾಡುತ್ತದೆ. ಬದುಕು ರೂಪಿಸಿಕೊಳ್ಳಬಹುದು. ಹಾಗಾಗಿ ವಿದ್ಯೆ ಬಹಳ ಮುಖ್ಯವಾದುದು. ಪದವಿ ಪಡೆದ ಮಾತ್ರಕ್ಕೆ ಅವರನ್ನು ದೊಡ್ಡ ವಿದ್ಯಾವಂತರೆಂದು ಒಪ್ಪುವುದಿಲ್ಲ. ಬದಲಾಗಿ ಜ್ಞಾನಿಗಳಾಗಬೇಕು. ಜನರಿಗೆ ತಿಳಿವಳಿಕೆ ಹೇಳಿಕೊಡಬೇಕು ಎಂದ ಅವರು, ಕಾಲೇಜು ಪ್ರಾಂಶುಪಾಲರು 2 ಕೊಠಡಿ ಮಾಡಿಕೊಡುವಂತೆ ಮನವಿ ಮಾಡಿದ್ದು 1 ಕೊಠಡಿ ಮಾಡಿಕೊಡುವ ಭರವಸೆ ನೀಡಿದರು. ಸಮಾಜ ಸೇವಕ ಗಾಂಧಿನಗರ ದಿವಾಕರ್ ಮಾತನಾಡಿ, ಕಳೆದ 4 ವರ್ಷದಿಂದ ಮಲ್ಲಿಪಟ್ಟಣ ಮತ್ತು ಕಸಬಾ ಹೋಬಳಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ನೀಡುತ್ತಾ ಬರುತ್ತಿದ್ದು, 12 ಸಾವಿರ ನೋಟ್‌ಬುಕ್ ವಿತರಿಸುತ್ತಿದ್ದೆ. ಆದರೆ, ಈ ಬಾರಿ 20 ಸಾವಿರ ಬುಕ್ ನೀಡುತ್ತಿದ್ದೇನೆ. ಇದೊಂದು ಸಣ್ಣ ಸೇವೆ ಎಂದು ಹೇಳಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮೋಹನ್, ನಿರ್ದೇಶಕ ಯೋಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ರಾಜೇಗೌಡ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಯೋಗಣ್ಣ, ಜಿಪಂ ಮಾಜಿ ಸದಸ್ಯ ಗೋವಿಂಡೇಗೌಡ, ಬಿಇಓ ನಾರಾಯಣ, ಬಾಲರಾಜ್ ಮತ್ತಿತರಿದ್ದರು.

ಕ್ಯಾಪ್ಸನ್: ಅರಕಲಗೂಡು ತಾಲೂಕು ಬೈಚನಹಳ್ಳಿ ಪ್ರೌಢಶಾಲೆಯಲ್ಲಿ ಅಳವಡಿಸಿರುವ ಶುದ್ಧ ನೀರಿನ ಯಂತ್ರವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು.