ಕನ್ನಡಪ್ರಭ ವಾರ್ತೆ ಶಿರಸಿ
ಟಿಆರ್‌ಸಿಯ ಪ್ರಧಾನ ಕಚೇರಿಯಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಜೇನುಕೃಷಿ ಯೋಜನೆಯಡಿ ರೈತರು ಉತ್ಪಾದಿಸಿದ ಪರಿಶುದ್ಧ ಜೇನುತುಪ್ಪವನ್ನು ಸಾಂಕೇತಿಕವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ನಮ್ಮ ಸಂಘದಿಂದ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮಾರ್ಗಸೂಚಿ ಹಾಗೂ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಜೇನು ಕೃಷಿ ಕೈಗೊಳ್ಳಲು ಶೂನ್ಯ ಬಡ್ಡಿದರದಲ್ಲಿ ಕೆಸಿಸಿ ಸಾಲ ವಿತರಿಸಲಾಗುತ್ತಿದೆ. ಅಡಕೆಗೆ ಪ್ರಸ್ತುತ ಬಾಧಿಸಿದ ಎಲೆಚುಕ್ಕಿ ರೋಗದಿಂದಾಗಿ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು ಈ ಸಂಕಷ್ಟದಿಂದ ರೈತರನ್ನು ಪಾರು ಮಾಡಲು ಪರ್ಯಾಯ ಮಾರ್ಗವನ್ನು ನಮ್ಮ ಸದಸ್ಯರಿಗೆ ಒದಗಿಸಬೇಕೆಂಬುದು ಸಂಘದ ಬಯಕೆಯಾಗಿತ್ತು. ಈ ಹಿನ್ನೆಲೆ ಜೇನು ಕೃಷಿ ಯೋಜನೆಯನ್ನು ಸದಸ್ಯರಿಗೆ ಪರಿಚಯಿಸಲಾಗಿತ್ತು. ಸಂಘದ ಸದಸ್ಯರು ಇದರ ಸದುಪಯೋಗವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯರು ಜೇನು ಕೃಷಿಯೋಜನೆಯಡಿ ಜೇನು ಸಾಕಾಣಿಕೆ ಕೈಗೊಂಡು ಆರ್ಥಿಕ ಸ್ವಾವಂಬನೆ ಹೊಂದಬೇಕು ಎಂದು ಹೇಳಿದರು.ರೈತರು ಉತ್ಪಾದಿಸಿದ ಜೇನುತುಪ್ಪಕ್ಕೆ ನಮ್ಮ ಸಂಘದ ರೈತ ಉತ್ಪಾದಕ ಸಂಸ್ಥೆಯಾದ ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮಸ್ ಪ್ರೊಡ್ಯೂಸರ್ ಕಂಪನಿ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಂಘದ ನಿರ್ದೇಶಕ ಸಂತೋಷಕುಮಾರ ಗೌಡರ ಕಸಗೆ ಮಾತನಾಡಿದರು.ಈ ಸಂದರ್ಭ ಟಿಆರ್‌ಸಿ ನಿರ್ದೇಶಕರಾದ ಎಸ್.ಎನ್. ಹೆಗಡೆ ಹಾವಳಿಮನೆ, ವಿಶ್ವೇಶ್ವರ ಹೆಗಡೆ ಆಗ್ಲಾಲಕಿಬ್ಬಳ್ಳಿ, ಟಿಆರ್‌ಸಿ ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್ ಮಾವಿನಕೊಪ್ಪ ಹಾಗೂ ಮಕರಂದ ರೈತ ಉತ್ಪಾದಕ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಹರ್ಷ ಹೆಗಡೆ, ಟಿಆರ್‌ಸಿ ರೈತ ಉತ್ಪಾದಕ ಸಂಸ್ಥೆಯ ಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.