8ರಂದು ಪುರಿ ಶ್ರೀ ಜಗನ್ನಾಥ ರಥಯಾತ್ರೆ: ಅವಧೂತ ಚಂದ್ರಹಾಸ

| Published : Jul 05 2024, 12:46 AM IST

ಸಾರಾಂಶ

ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದಿಂದ ಪ್ರಾರಂಭವಾಗುವ ರಥಯಾತ್ರೆಗೆ ನೂತನ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ದಾವಣಗೆರೆ ವತಿಯಿಂದ ಜು.8ರಂದು ದಾವಣಗೆರೆಯಲ್ಲಿ 3ನೇ ಬಾರಿಗೆ ನೂತನ ರಥದಲ್ಲಿ ಪುರಿ ಶ್ರೀ ಜಗನ್ನಾಥನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಳೆದ ಎರಡು ವರ್ಷದಿಂದ ಪುರಿ ಜಗನ್ನಾಥ ಸ್ವಾಮಿ ಆಶೀರ್ವಾದ ಸರ್ವರಿಗೂ ದೊರೆಯುವಂತಾಗಲಿ ಮತ್ತು ರಥೋತ್ಸವ ಇಲ್ಲಿಯೇ ನಡೆಸಲಿ ಎಂಬ ಮಹದಾಶಯದೊಂದಿಗೆ ಇಸ್ಕಾನ್‌ನಿಂದ ಪುರಿ ಜಗನ್ನಾಥ ರಥಯಾತ್ರೆ ನಡೆಸಲಾಗುತ್ತಿದೆ ಎಂದರು.ಜು.8ರ ಬೆಳಗ್ಗೆ 7ಕ್ಕೆ ರಥಯಾತ್ರೆ ಅಂಗವಾಗಿ ಶ್ರೀ ನರಸಿಂಹ ಯಜ್ಞ ನೆರವೇರಲಿದೆ. ಮಧ್ಯಾಹ್ನ 2ಗಂಟೆಗೆ ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದಿಂದ ಪ್ರಾರಂಭವಾಗುವ ರಥಯಾತ್ರೆಗೆ ನೂತನ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ಕೋದಂಡರಾಮ ದೇವಸ್ಥಾನದಿಂದ ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಅರುಣ ಸರ್ಕಲ್, ಆರ್.ಎಚ್. ಛತ್ರ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ, ಜಿಲ್ಲಾ ಆಸ್ಪತ್ರೆ ರಸ್ತೆ ಮೂಲಕ ಸಾಗಲಿದೆ. ರಥಯಾತ್ರೆ ಒಟ್ಟು ಐದು ಕಿಲೋ ಮೀಟರ್ ಸಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಲಿದೆ ಎಂದು ತಿಳಿಸಿದರು.

ಸಂಜೆ 5.30ಕ್ಕೆ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶ್ರೀ ಜಗನ್ನಾಥ ಮಹಾಮಂಗಳಾರತಿ, ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ ಇತರೆ ಕಾರ್ಯಕ್ರಮ ನಡೆಯಲಿವೆ. ನಂತರ ಪ್ರಸಾದ ವಿನಿಯೋಗ ಇದೆ ಎಂದು ತಿಳಿಸಿದರು.

ಈವರೆಗೆ ಬೆಳಗಾವಿಯಿಂದ ರಥ ತರಿಸಲಾಗುತ್ತಿತ್ತು. ಈ ವರ್ಷ ನೂತನ ರಥದಲ್ಲಿ ಶ್ರೀ ಜಗನ್ನಾಥ ಸ್ವಾಮಿಯ ಮೆರವಣಿಗೆ ನಡೆಯಲಿದೆ. ದಾವಣಗೆರೆ ಭಕ್ತರ ಸಹಾಯದಿಂದ ₹11 ಲಕ್ಷ ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗಿದೆ. ಅಂತಿಮ ಸ್ಪರ್ಶದ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ರಥಯಾತ್ರೆ ಸಾಗಿ ಬರುವಂತಹ ಮಾರ್ಗದಲ್ಲಿ ಚಾಮರಾಜಪೇಟೆ, ಹಾಸಬಾವಿ ವೃತ್ತ, ಹೊಂಡದ ವೃತ್ತ, ರೇಣುಕ ಮಂದಿರ, ಆರ್.ಎಚ್. ಛತ್ರ ಒಳಗೊಂಡಂತೆ ಆಯ್ದ ಕಡೆಯಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಗುವುದು. 25 ರಿಂದ 30 ಸಾವಿರ ಜನರಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ದಾನಿಗಳು ಅಕ್ಕಿ, ಬೇಳೆ, ಎಣ್ಣೆ.. ಹೀಗೆ ಆಹಾರ ಪದಾರ್ಥಗಳನ್ನ ಕಾಣಿಕೆಯಾಗಿ ಸಲ್ಲಿಸಬಹುದು ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ಸೂಕ್ತ ಜಾಗ ಪರಿಶೀಲನೆ ನಡೆಸಲಾಗುತ್ತಿದೆ. ನಗರಾಭಿವೃದ್ಧಿ ಪ್ರಾದಿಕಾರದಿಂದ ಸಿಎ ನಿವೇಶನ ಇಲ್ಲವೇ ಯಾರಾದರೂ ಭಕ್ತಾದಿಗಳು ಜಾಗ ನೀಡಿದಲ್ಲಿ ಇಸ್ಕಾನ್ ದೇವಸ್ಥಾನ ನಿರ್ಮಾಣ ಮಾಡಲಾಗುವುದು. ಆಸಕ್ತ ದಾನಿಗಳು ಜಾಗ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್.ಟಿ.ವೀರೇಶ್, ನಗರಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಕೆ.ಬಿ.ಶಂಕರ ನಾರಾಯಣ, ಸತ್ಯನಾರಾಯಣಮೂರ್ತಿ, ಕಾಸಲ್ ಬದರಿನಾಥ, ನಲ್ಲೂರು ರಾಜಕುಮಾರ್ ಇತರರು ಇದ್ದರು.