ತಪಸ್ಸಿನಿಂದ ಮನಸ್ಸು, ಶರೀರ ಮತ್ತು ವಾತಾವರಣಗಳ ಶುದ್ಧಿ: ಸ್ವರ್ಣವಲ್ಲೀ ಶ್ರೀ

| Published : Aug 02 2025, 12:00 AM IST

ತಪಸ್ಸಿನಿಂದ ಮನಸ್ಸು, ಶರೀರ ಮತ್ತು ವಾತಾವರಣಗಳ ಶುದ್ಧಿ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಧರ್ಮಾಚರಣೆ, ಸ್ವಾಶ್ರಮ ಧರ್ಮಾಚರಣೆಯೇ ತಪಸ್ಸು.

ಶಿರಸಿ: ತಪಸ್ಸಿನಿಂದ ಮನಸ್ಸು, ಶರೀರ ಮತ್ತು ವಾತಾವರಣಗಳ ಶುದ್ಧಿಯಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಮದ್ ಗಂಗಾಧರೇದ್ರ ಸರಸ್ವತೀ ಸ್ವಾಮೀಜಿ ನುಡಿದರು.ಹೆಗಡೆಕಟ್ಟಾ, ಶಿವಳ್ಳಿ ಸೀಮಾ ಶಿಷ್ಯರು ಚಾತುರ್ಮಾಸ್ಯ ವೇಳೆ ಸ್ವೀಕರಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಸ್ವಧರ್ಮಾಚರಣೆ, ಸ್ವಾಶ್ರಮ ಧರ್ಮಾಚರಣೆಯೇ ತಪಸ್ಸು. ಅವರವರ ಆಶ್ರಮಕ್ಕೆ ಹೇಳಲ್ಪಟ್ಟಂತಹ ಧರ್ಮಗಳನ್ನೇ ನಿಷ್ಠೆಯಿಂದ ಆಚರಣೆ ಮಾಡಿದರೆ ಅದನ್ನು ತಪ್ಪಸ್ಸು ಎಂದು ಕರೆಯುತ್ತಾರೆ. ಚಾತುರ್ಮಾಸ್ಯ ಈ ಶಬ್ದವನ್ನು ಕೇಳಿದಾಗ ತಪೋನಿಷ್ಠ ಎನ್ನುವುದು ನೆನಪಾಗುತ್ತದೆ. ನಿಯಮದಿಂದ ದಿನಚರಿಯನ್ನು ಮಾಡುತ್ತಾ, ಹೆಚ್ಚುಕಾಲ ದೇವರ ಚಿಂತನೆಯಲ್ಲಿ ತೊಡಗುತ್ತಾ ತಪಸ್ಸನ್ನು ಆಚರಿಸುತ್ತಾ ಇರುತ್ತಾರೆಂಬ ಕಲ್ಪನೆ ಚಾತುರ್ಮಾಸ್ಯ ಶಬ್ದ ಕೇಳಿದೊಡನೆ ಮನಸ್ಸಿಗೆ ಬರುತ್ತದೆ ಎಂದರು.

ಯತಿಗಳು ಯಾವಾಗಲೂ ತಪಸ್ಸನ್ನು ಮಾಡುತ್ತಾ ಇರುವವರು. ಚಾತುರ್ಮಾಸ್ಯದಲ್ಲಿ ವಿಶೇಷ ನಿಯಮಗಳೊಂದಿಗೆ ಮಾಡುತ್ತಾರೆ. ಈ ತಪಸ್ಸಿನ ಅನುಷ್ಠಾನ ಎನ್ನುವುದು ಯತಿಗಳಿಗೆ ಮಾತ್ರ ಸೀಮಿತವಲ್ಲ. ಗೃಹಸ್ಥರಿಗೆ, ಬ್ರಹ್ಮಚಾರಿಗಳಿಗೆ, ಗೃಹಿಣಿಯರಿಗೂ ಇದೆ ಎಂದರು.

ಸಾಮಾನ್ಯವಾಗಿ ತಪಸ್ಸು, ತಪಸ್ವಿಗಳು ಈ ರೀತಿಯಾದ ಶಬ್ದಗಳನ್ನು ಕೇಳಿದಾಗ ಸನ್ಯಾಸಿಗಳು, ಕಾಡಿನಲ್ಲಿ ವಾಸಮಾಡುವವರು ಎಂದು ನೆನಪಾಗುತ್ತದೆ. ಆದರೆ ಗೃಹಸ್ಥರೂ, ಬ್ರಹ್ಮಚಾರಿಗಳೂ, ಗೃಹಿಣಿಯರೂ ತಪಸ್ಸನ್ನು ಮಾಡಬಹುದು. ಇವರುಗಳು ಮಾಡುವ ತಪಸ್ಸನ್ನು ವಿವರಿಸಿದ ಅವರು, ಅಂತಹ ಒಂದು ಶುದ್ಧಿಗೋಸ್ಕರ ತಪಸ್ಸು ಬೇಕು. ಶುದ್ಧಿ ನಮ್ಮ ಮುಂದಿನ ಉತ್ತಮ ಗತಿಗಳಿಗೆ ಬೇಕು. ಉತ್ತಮ ಗತಿಗಳು ಎಂದರೆ ಅಭ್ಯುದಯ ಮತ್ತು ನಿಶ್ರೆಯಸ್ಸುಗಳು. ಅಭ್ಯುದಯ ಎಂದರೆ ಐಹಿಕ ಬದುಕಿನಲ್ಲಿ ಹೆಚ್ಚು ಆರೋಗ್ಯವಂತ, ನೆಮ್ಮದಿಯುಳ್ಳ, ಆಯುಷ್ಯವುಳ್ಳ ಬದುಕು ಆಗಬೇಕು. ಪರದಲ್ಲೂ ಕೂಡ ಇನ್ನೂ ಹೆಚ್ಚಿನ ಸ್ಥಿತಿಗೆ ಹೋಗಬೇಕು ಎಂಬುದು. ನಿಶ್ರೆಯಸ್ಸು ಎಂದರೆ ಮೋಕ್ಷ. ಅಭ್ಯುದಯ ಮತ್ತು ನಿಶ್ರೆಯಸ್ಸುಗಳಿಗೆ ಹೋಗಲು ನಮಗೆ ಮೊದಲನೆಯದಾಗಿ ಶುದ್ಧಿ ಬೇಕು. ಈ ಶುದ್ಧಿಯನ್ನು ತಪಸ್ಸು ಉಂಟುಮಾಡುತ್ತದೆ. ನಮ್ಮ ಧರ್ಮವನ್ನೇ ಹೆಚ್ಚು ನಿಷ್ಠೆಯಿಂದ ಮಾಡಿದರೆ ಅದೇ ತಪಸ್ಸು ಆಗುತ್ತದೆ ಎಂದರು.

ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.

ಎನ್.ಆರ್.ಹೆಗಡೆ, ಜಿ.ವಿ.ಹೆಗಡೆ, ಪ್ರಮೀಳಾ ಭಟ್ಟ, ಪ್ರಸನ್ನ ಭಟ್ಟ ಓಣಿಕೈ ಇದ್ದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ೯೫ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು. ಪುರುಷರು ಗಾಯತ್ರಿ ಜಪಾನುಷ್ಠಾನ, ಮಾತೆಯರು ಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು.