ಮನಸ್ಸಿನ ಏಕಾಗ್ರತೆಗೆ ಪರಿಶುದ್ಧತೆಯೇಮೂಲಾಧಾರ: ನಿಖಿಲೇಶ್ವರಾನಂದಜೀ

| Published : Jun 17 2024, 01:36 AM IST

ಮನಸ್ಸಿನ ಏಕಾಗ್ರತೆಗೆ ಪರಿಶುದ್ಧತೆಯೇಮೂಲಾಧಾರ: ನಿಖಿಲೇಶ್ವರಾನಂದಜೀ
Share this Article
  • FB
  • TW
  • Linkdin
  • Email

ಸಾರಾಂಶ

ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಹಂಕ

ಮನಸ್ಸಿನ ಏಕಾಗ್ರತೆ ಜ್ಞಾನಾರ್ಜನೆಗೆ ಮೂಲವಾದರೆ ಏಕಾಗ್ರತೆಗೆ ಪರಿಶುದ್ಧತೆಯೇ ಮೂಲಾಧಾರವಾಗಿದೆ. ಈ ದಿಸೆಯಲ್ಲಿ ನಾವು ಮನಸ್ಸನ್ನು ಪರಿಶುದ್ಧವಾಗಿ ಇಟ್ಟುಕೊಳ್ಳುವುದರಿಂದ ಏಕಾಗ್ರತೆಯನ್ನು ಗಳಿಸಿಕೊಳ್ಳಬಹುದಾಗಿದೆ ಎಂದು ಗುಜರಾತಿನ ರಾಜ್ ಕೋಟ್‌ನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿಖಿಲೇಶ್ವರಾನಂದಜೀ ಅಭಿಪ್ರಾಯಪಟ್ಟರು.

ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಕಣ್ಣು, ಕಿವಿ, ಬಾಯಿಯ ಮೂಲಕ ಸ್ವೀಕರಿಸುವ ವಿಷಯ ಅಥವಾ ಆಹಾರ ಪರಿಶುದ್ಧವಿದ್ದಾಗ ಮಾತ್ರ ಮನಸ್ಸು ಪರಿಶುದ್ಧವಾಗುತ್ತದೆ. ಮನಸ್ಸು ಪರಿಶುದ್ಧವಾದಾಗ ಏಕಾಗ್ರತೆ ಲಭಿಸುತ್ತದೆ, ಏಕಾಗ್ರತೆಯ ಅಧ್ಯಯನ ಜ್ಞಾನಾರ್ಜನೆಗೆ ಇಂಬು ನೀಡುತ್ತದೆ. ಏಕಾಗ್ರತೆಯಿಲ್ಲದೆ ಮಾಡುವ ಹತ್ತು ಗಂಟೆಗಳ ಅಧ್ಯಯನವನ್ನು ಏಕಾಗ್ರತೆಯಿಂದ ಮಾಡುವ ಕೇವಲ ಒಂದು ಗಂಟೆಯ ಅಧ್ಯಯನ ಸರಿದೂಗಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಇದನ್ನು ಮನವರಿಕೆ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಿದರೆ, ನೀವಂದುಕೊಳ್ಳುವ ಜ್ಞಾನಾರ್ಜನೆಯ ಗುರಿಯನ್ನು ಬಹುಬೇಗ ತಲುಪಬಹುದು. ಸ್ವಾಮಿ ವಿವೇಕಾನಂದರು ಮನಸ್ಸಿನ ಏಕಾಗ್ರತೆ, ಪರಿಶುದ್ಧತೆಯನ್ನು ಗಳಿಸುವ ಬಗೆಯನ್ನು ವೇದಾಂತ ಸಾರದ ವಿವರಣೆಯ ಮೂಲಕ ವಿಶ್ವಕ್ಕೆ ಸಾರಿದ್ದಾರೆ. ಪ್ರಸ್ತುತವಾಗಿ ವಿಶ್ವದಾದ್ಯಂತ 165 ರಾಮಕೃಷ್ಣ ಆಶ್ರಮಗಳಿವೆ, ಬೆಂಗಳೂರು ನಗರದ ಹಲಸೂರು ಮತ್ತು ಬಸವನಗುಡಿಯಲ್ಲಿ ರಾಮಕೃಷ್ಣ ಆಶ್ರಮವಿದ್ದು, ಸ್ವಾಮಿ ವಿವೇಕಾನಂದರ ಭವ್ಯ ಸಂದೇಶವನ್ನು ಸಾರುವ ಮೂಲಕ ಸತ್ ಚಿಂತನೆಯನ್ನು ಪಸರಿಸುವಲ್ಲಿ ನಿರತವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಕಾರ್ಯದರ್ಶಿ ವುಡೆ.ಪಿ.ಕೃಷ್ಣ, ಜಂಟಿ ಕಾರ್ಯದರ್ಶಿ ಶೇಷನಾರಾಯಣ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ। ಎಸ್.ಎನ್. ವೆಂಕಟೇಶ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.