ಪುಷ್ಪಗಿರಿ ಶ್ರೀಗಳ ಹೋರಾಟದಿಂದ ರಣಘಟ್ಟ ಕಾರ್ಯರೂಪ: ಸಂಸದ ಪ್ರಜ್ವಲ್ ರೇವಣ್ಣ

| Published : Mar 03 2024, 01:37 AM IST

ಪುಷ್ಪಗಿರಿ ಶ್ರೀಗಳ ಹೋರಾಟದಿಂದ ರಣಘಟ್ಟ ಕಾರ್ಯರೂಪ: ಸಂಸದ ಪ್ರಜ್ವಲ್ ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪುಷ್ಪಗಿರಿ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು,ರೈತ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ಪಕ್ಷಾತೀತವಾಗಿ ಮುಖಂಡರು ನಡೆಸಿದ ಹೋರಾಟ ಜಿಲ್ಲೆಯಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಪುಷ್ಪಗಿರಿ ಮಠದ ಶ್ರೀಗಳು ನಡೆಸಿದ ಅವಿರತ ಹೋರಾಟದ ಶ್ರಮದಿಂದಾಗಿ ರಣಘಟ್ಟ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ತಾಲೂಕಿನ ಬೆಣ್ಣೂರು ಗ್ರಾಮದ ರಾಷ್ಟ್ರೀಯ ತೆಂಗು ನಾರು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್‌ರವರ ಪ್ರಾಯೋಜತ್ವದಲ್ಲಿ ನಡೆದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಷ್ಪಗಿರಿ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು,ರೈತ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ಪಕ್ಷಾತೀತವಾಗಿ ಮುಖಂಡರು ನಡೆಸಿದ ಹೋರಾಟ ಜಿಲ್ಲೆಯಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಪುಷ್ಪಗಿರಿ ಶ್ರೀಗಳ ಮೇಲೆ ಪ್ರಕರಣ ದಾಖಲಿಸಿದರೂ ಶ್ರೀಗಳು ನಡೆಸಿದ ಅವಿರತ ಧರಣಿಯಿಂದಲೇ ರಣಘಟ್ಟ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದರು.

ಪುಷ್ಪಗಿರಿ ಮಠದ ಪೂಜ್ಯ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಪ್ರಸಕ್ತ ರಾಜಕೀಯ ಅತ್ಯಂತ ಕಲುಷಿತವಾಗಿದೆ. ಓಟಿ ಆಸೆಯಿಂದ ಯೋಜನೆಗಳಲ್ಲಿ ಜಾತಿ,ಧರ್ಮವನ್ನು ತರುವ ಮೂಲಕ ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಜನಪರ ಮತ್ತು ರೈತರ ಬಗ್ಗೆ ಮಾತನಾಡುವ ಬದಲು ಹೆಚ್ಚು ಇಲ್ಲ-ಸಲ್ಲದ ವಿಚಾರಗಳ ಚರ್ಚೆಯಿಂದಲೇ ಕಾಲ ಕಳೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ರಸ್ತೆ,ಚರಂಡಿ ಇನ್ನಿತರ ಕಾಮಗಾರಿಗಳನ್ನು ಎಲ್ಲರೂ ನಡೆಸಬಹುದು. ಆದರೆ ನೀರಾವರಿ ಯೋಜನೆ ರೂಪಿಸುವುದು ಬಹಳ ಮುಖ್ಯವಾಗಿದೆ. ಸಂಸದ ಪ್ರಜ್ವಲ್ ರೇವಣ್ಣನವರು ತಮ್ಮ ತಾತ ದೇವೇಗೌಡರಂತೆ ನೀರಾವರಿ ಅಭಿವೃದ್ಧಿಗೆ ಶ್ರಮಿಸಬೇಕು, ರಣಘಟ್ಟ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇನ್ನು ಯಗಚಿ ಏತನೀರಾವರಿ ಯೋಜನೆಗೆ ವಿದ್ಯುತ್ ಶುಲ್ಕ ಪಾವತಿ ಮಾಡದ ಕಾರಣದಿಂದ ನೆನಗುಂದಿದೆ ಬಿದ್ದಿದೆ. ಹೇಳಿಕೊಳ್ಳಲು ಬಯಲುಸೀಮೆಗೆ ಮೂರು ನೀರಾವರಿ ಸವಲತ್ತುಗಳಿದ್ದರೂ ಯಾವೊಂದು ಪರಿಪೂರ್ಣವಾಗಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಬಸವತತ್ವ ಪೀಠದ ಪೂಜ್ಯ ಡಾ. ಶ್ರೀ ಬಸವಮರಳುಸಿದ್ಧ ಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಕೊರಟಿಕೆರೆ ಪ್ರಕಾಶ್, ಸಾಹಿತಿ ಚಟ್ನಹಳ್ಳಿ ಮಹೇಶ್, ಪತ್ರಕರ್ತ ಹೆಬ್ಬಾಳು ಹಾಲಪ್ಪ, ಬಿ.ಎಂ.ದೊಡ್ಡವೀರೇಗೌಡ, ಹಳೇಬೀಡು ಕಾಂತರಾಜು, ಆರ್.ಎಸ್.ಸುಬ್ರಮಣ್ಯ, ರಾಜಶೇಖರ್, ಭುವನೇಶ್, ಬಲ್ಲೇನಹಳ್ಳಿ ರವಿಕುಮಾರ್, ಕನಾಯಕನಹಳ್ಳಿ ಮಹಾದೇವ್, ಬಿ.ಡಿ.ಚಂದ್ರೇಗೌಡ,ಮಲ್ಲೇಗೌಡ ಇನ್ನು ಮುಂತಾದವರು ಹಾಜರಿದ್ದರು.

ವೈಜ್ಞಾನಿಕ ಜಾತಿಗಣತಿಗೆ ಆಗ್ರಹ

ನಾವು ಎಂದಿಗೂ ಜಾತಿಗಣತಿ ವಿರೋಧಿಸುವುದಿಲ್ಲ, ಆದರೆ ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಜಾತಿಗಣತಿ ಮಾರಕ ಪರಿಣಾಮ ಉಂಟು ಮಾಡುವ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವೇ ವೈಜ್ಞಾನಿಕ ಮಟ್ಟದಲ್ಲಿ ಜಾತಿಗಣತಿ ನಡೆಸಬೇಕಿದೆ. ಹಾಗೇಯೆ ವೀರಶೈವ ಲಿಂಗಾಯಿತರು ಉಪಜಾತಿಗಳನ್ನು ಬಿಟ್ಟು ಒಟ್ಟಾಗಿ ವರದಿ ನೀಡಿದರೆ ಮಾತ್ರ ಮುಂದಿನ ಭವಿಷ್ಯವನ್ನು ಸುಭದ್ರವಾಗಿ ಕಟ್ಟಲು ಸಾಧ್ಯವೆಂದು ಚಿಕ್ಕಮಗಳೂರು ಬಸವತತ್ವ ಪೀಠದ ಪೂಜ್ಯ ಡಾ. ಶ್ರೀ ಬಸವಮರಳುಸಿದ್ಧ ಸ್ವಾಮೀಜಿ ಹೇಳಿದರು.