ಸಾರಾಂಶ
ಎನ್. ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ನಗರಸಭೆಗೆ ಸರ್ಕಾರ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಗೊಳಿಸಿದ ಬೆನ್ನಲ್ಲೆ ಆಕಾಂಕ್ಷಿಗಳು ಗದ್ದುಗೆ ಹಿಡಿಯಲು ತೀವ್ರ ಕಸರತ್ತು ಆರಂಭಿಸಿದ್ದಾರೆ.
ಎಸ್ಸಿ ಮಹಿಳೆಗೆ ಅಧ್ಯಕ್ಷ ಸ್ಥಾನ ನಿಗದಿಯಾಗಿದ್ದ ಹಿನ್ನೆಲೆ 27ನೇ ವಾರ್ಡ್ ಪುಷ್ಪಲತಾ ಶಾಂತರಾಜು, 3ನೇ ವಾರ್ಡ್ ರೇಖಾ ರಮೇಶ್ 2ನೇ ವಾರ್ಡ್ ಭಾಗ್ಯ ಸೋಮ (ಉಪಚುನಾವಣೆಯಲ್ಲಿ) ಎಸ್ಸಿ ಮಹಿಳಾ ಮೀಸಲಾತಿ ಕೋಟಾದಡಿಯಡಿ ಗೆಲುವು ಸಾಧಿಸಿದ್ದು 14 ತಿಂಗಳ ಕೊನೆ ಅವಧಿಗೆ ನಡೆಯುವ ಈ ಚುನಾವಣೆಯಲ್ಲಿ ವರಿಷ್ಟರು ಬಹುತೇಕವಾಗಿ ನಗರಸಭೆ ಮಾಜಿ ಸದಸ್ಯ, ಹಾಲಿ ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಎಸ್ ಜಯಣ್ಣ ಅವರು ಆಪ್ತರಾಗಿರುವ ಮುಡಿಗುಂಡ ಶಾಂತರಾಜು ಅವರು ಪತ್ನಿ ಹಾಲಿ 27ನೇ ವಾರ್ಡ್ ಸದಸ್ಯೆ ಪುಷ್ಪಲತಾ ಶಾಂತರಾಜು ಪ್ರಬಲ ಆಕಾಂಕ್ಷಿಯಾಗಿದ್ದು ಬಹುತೇಕವಾಗಿ ಇವರಿಗೆ ಅಧ್ಯಕ್ಷ ಗಾದೆ ಸರಾಗವಾಗಿ ಒಲಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಏತನ್ಮಧ್ಯೆ, ಕಳೆದ ಬಾರಿ ಅಧ್ಯಕ್ಷರಾಗಿದ್ದ ರೇಖಾ ರಮೇಶ್ ಅವರು ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟರೂ ಅಚ್ಚರಿ ಇಲ್ಲ, ಇದು ವರಿಷ್ಠರ ನಿರ್ಣಯದ ಮೇಲೆ ಅವಲಂಬಿತ ಎಂಬ ಮಾತುಗಳಿವೆ. ಕಾಂಗ್ರೆಸ್ ಉನ್ನತ ಮೂಲಗಳ ಪ್ರಕಾರ ಮುಡಿಗುಂಡ ಶಾಂತರಾಜು ಅವರ ಪತ್ನಿ ಪುಷ್ಪಲತಾ ಅವರಿಗೆ ಸರಾಗವಾಗಿ ಅಧ್ಯಕ್ಷ ಸ್ಥಾನ ದೊರಕಬಹುದು ಎಂಬ ಚರ್ಚೆಯಿದೆ, ಜೊತೆಗೆ ಬೀಮನಗರದ ವಾರ್ಡ್ 2ರ ಉಪಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಕಂಡಿರುವ ಭಾಗ್ಯ ಸೋಮು ಸಹ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ.
ರಮೇಶ್ ಭಾರಿ ಲಾಬಿ ನಡೆಸುವ ಸಾಧ್ಯತೆ: ನಗರಸಭೆ ಮಾಜಿ ಅಧ್ಯಕ್ಷರಾಗಿದ್ದ ಬೀಮನಗರ ರಮೇಶ್ ಅವರು ಈ ಹಿಂದೆ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು, ಈ ಬಾರಿ ಅವರ ಪತ್ನಿ ರೇಖಾ ಅವರು ಸಹ ಅಧ್ಯಕ್ಷರಾಗಿದ್ದರು. ಹಾಗಾಗಿ ಈ ಬಾರಿ ತಮಗೆ ಮತ್ತೊಂದು ಅವಕಾಶ ನೀಡಿ ಎಂದು ವರಿಷ್ಠರಲ್ಲಿ ದುಂಬಾಲು ಬೀಳುವ ಸಾಧ್ಯತೆ ಇದೆ. ಏತನ್ಮಧ್ಯೆ, ಕಾಂಗ್ರೆಸ್ ವರಿಷ್ಠರು ನಾಳೆ ಈ ಸಂಬಂಧ ಆಕಾಂಕ್ಷಿಗಳ ಸಭೆ ನಡೆಸಿ ಅಭಿಪ್ರಾಯವನ್ನು ಪಡೆಯಬಹುದು.ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ:
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೂ ಕೊನೆ ಅವಧಿ ಚುನಾವಣೆ ಹಿನ್ನೆಲೆ ತೀವ್ರ ಪೈಪೋಟಿ ಇದ್ದು ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ್, ಎ.ಪಿ. ಶಂಕರ್, ಸುಮ ಸುಬ್ಬಣ್ಣ, ಸುಮೇರಾಬೇಗಂ ಪ್ರಬಲ ಆಕಾಂಕ್ಷಿಗಳಾಗಿದ್ದು ಸಾಮಾನ್ಯ ವರ್ಗವಾದ ಹಿನ್ನೆಲೆ ಬಹುತೇಕ ಮನೋಹರ್ ಆಯ್ಕೆ ಖಚಿತ ಎಂದು ಹೇಳಲಾಗಿದ್ದು ಕೊನೆ ಕ್ಷಣದಲ್ಲಿ ಆರ್ಯವೈಶ್ಯ ಜನಾಂಗದ ಶಂಕರನಾರಾಯಣ ಗುಪ್ತ ಉಪಾಧ್ಯಕ್ಷ ಸ್ಥಾನಕ್ಕೆ ಒತ್ತಡ ತಂತ್ರ ಅನುಸರಿಸಿದರೂ ಅಚ್ಚರಿ ಇಲ್ಲ. ಇನ್ನು ಅದೇ ರೀತಿಯಲ್ಲಿ ನನಗೂ ಅವಕಾಶ ನೀಡಿ ಎಂದು ಎಪಿ ಶಂಕರ್ ಅವರು ವರಿಷ್ಠರ ಮುಂದೆ ಬೇಡಿಕೆ ಇಡುವ ಸಾಧ್ಯತೆಯೂ ಇದೆ. ಒಂದು ವೇಳೆ ವರಿಷ್ಠರು ಸಾಮಾನ್ಯ ವರ್ಗದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವ ನಿರ್ಣಯ ಕೈಗೊಂಡರೆ ಮುಸ್ಲಿಂ ಸಮಾಜದ ಸುಮೇರಾಬೇಗಂ, ವೀರಶೈವ ಲಿಂಗಾಯಿತ ಜನಾಂಗದ ಸುಮಸುಬ್ಬಣ್ಣ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ವರಿಷ್ಠರ ಮತ್ತು ಕಾಂಗ್ರೆಸ್ ಸದಸ್ಯರ ಲೆಕ್ಕಾಚಾರ ಗಮನಿಸಿದಾಗ ಮೇಲ್ನೋಟಕ್ಕೆ ಅಧ್ಯಕ್ಷರಾಗಿ ಪುಷ್ಪಲತಾ, ಉಪಾಧ್ಯಕ್ಷರಾಗಿ ಮನೋಹರ್ ಆಯ್ಕೆ ಬಹುತೇಕ ಖಚಿತ ಎನ್ನಲು ಅಡ್ಡಿ ಇಲ್ಲ. ಸಂಖ್ಯಾ ಬಲದಲ್ಲೂ ಕೈ ಮೇಲುಗೈ:ಕೊಳ್ಳೇಗಾಲ ನಗರಸಭೆಯ ಸಂಖ್ಯಾ ಬಲದಲ್ಲೂ ಸಹ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು 31 ಸದಸ್ಯರ ಬಲವಿದ್ದು ಕಾಂಗ್ರೆಸ್ 12 ಸ್ಥಾನದಲ್ಲಿ ಪಕ್ಷೇತರರು 4 ಸ್ಥಾನದಲ್ಲಿ, ಬಿಎಸ್ಪಿ 2 ಸ್ಥಾನಗಳಲ್ಲಿ ಮತ್ತು ಬಿಜೆಪಿ 13ರಲ್ಲಿ ಗೆಲುವು ಸಾಧಿಸಿದೆ. ಅಧಿಕಾರದ ಗದ್ದುಗೆ ಹಿಡಿಯಲು 17 ಸಂಖ್ಯಾಬಲದ ಅಗತ್ಯವಿದೆ. ಈಗಾಗಲೇ ಕಳೆದ ಬಾರಿ ಕಾಂಗ್ರೆಸ್‌ನ ರೇಖಾ ರಮೇಶ್, ಉಪಾಧ್ಯಕ್ಷರಾಗಿ ಸುಶೀಲ ಶಾಂತರಾಜು ಆಯ್ಕೆಯಾಗಿದ್ದರು.ಕಾಂಗ್ರೆಸ್‌ನ 12 ಸದಸ್ಯರೊಟ್ಟಿಗೆ ಈಗಾಗಲೇ 4 ವಾರ್ಡ್‌ಗಳಲ್ಲಿ ಪಕ್ಷೇತರರಾಗಿ ಗೆಲವು ಕಂಡಿರುವ 1ನೇ ವಾರ್ಡ್ ಕವಿತಾ ರಾಜೇಶ್, 11ನೇ ವಾರ್ಡ್‌ನ ಮನೋಹರ್, 14ನೇ ವಾರ್ಡ್‌ನ ಎಪಿ ಶಂಕರ್, 18ನೇ ವಾರ್ಡ್‌ನ ಶಂಕರನಾರಾಯಣಗುಪ್ತ ಜೊತೆಗೆ ಬಿಎಸ್ಪಿಯಿಂದ ಗೆಲುವು ಕಂಡಿರುವ ಜಯಮೇರಿ, ಜಯರಾಜ್ ಸಹ ಕಾಂಗ್ರೆಸ್ ಜೊತೆ ಕೈಜೋಡಿಸಿರುವುದರಿಂದ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ 18 ಆಗಲಿದೆ. ಜೊತೆಗೆ ಕಾಂಗ್ರೆಸ್ ಶಾಸಕ ಎ ಆರ್ ಕೃಷ್ಣಮೂರ್ತಿ ಮತ್ತು ಸಂಸದ ಸುನೀಲ್ ಬೋಸ್ ಅವರ ಮತಗಳು ಇಲ್ಲಿ ಗಮನಾರ್ಹ ಎಂದು ಲೆಕ್ಕಕ್ಕೆ ಪರಿಗಣಿಸಿದರೆ ಸಂಖ್ಯೆ 20ಕ್ಕೆ ಏರಲಿದೆ.
13 ಸ್ಥಾನ ಗಳಿಸಿರುವ ಬಿಜೆಪಿ ಕೊಳ್ಳೇಗಾಲ ನಗರಸಭೆಯಲ್ಲಿ ವಿಪಕ್ಷ ಸ್ಥಾನವಾಗಿ ಕೂರಬೇಕಿದೆ. ಅಲ್ಲದೆ ಬಿಜೆಪಿಯಿಂದ ಗೆಲುವು ಕಂಡಿರುವ 3 ಮಂದಿ ಈಗಾಗಲೇ ಕಾಂಗ್ರೆಸ್ ಜೊತೆ ಕಾಣಿಸಿಕೊಂಡಿದ್ದು ಈ ಬೆಳವಣಿಗೆ ಬಿಜೆಪಿಗೆ ಹಿನ್ನಡೆ ಆಗಬಹುದು.