ಹಾವೇರಿ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಪಿಒಪಿ ಗಣೇಶನ ಮೂರ್ತಿ ಮಾರಾಟ ನಡೆಯುತ್ತಿದ್ದು, ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಜಿಲ್ಲಾಡಳಿತ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಮಣ್ಣಿನ ಗಣಪತಿ ಕಲಾವಿದರ ಸಂಘದ ಜಿಲ್ಲಾ ಖಜಾಂಚಿ ಚಂದ್ರಶೇಖರ ಬಡಿಗೇರ ಆಗ್ರಹಿಸಿದರು.

ಹಾವೇರಿ:ಜಿಲ್ಲೆಯಲ್ಲಿ ಎಗ್ಗಿಲ್ಲದೇ ಪಿಒಪಿ ಗಣೇಶನ ಮೂರ್ತಿ ಮಾರಾಟ ನಡೆಯುತ್ತಿದ್ದು, ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಜಿಲ್ಲಾಡಳಿತ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಮಣ್ಣಿನ ಗಣಪತಿ ಕಲಾವಿದರ ಸಂಘದ ಜಿಲ್ಲಾ ಖಜಾಂಚಿ ಚಂದ್ರಶೇಖರ ಬಡಿಗೇರ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ನಿಷೇಧಿಸುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಯಾವುದೇ ಪರಿಣಾಮಕಾರಿ ಕ್ರಮವಾಗಿಲ್ಲ. ಸಂಘದ ವತಿಯಿಂದ ಜಿಲ್ಲಾಧಿಕಾರಿ, ಪರಿಸರ ಇಲಾಖೆ, ನಗರಸಭೆ, ತಾಲೂಕು ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಹಾಗೂ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.

ಮಣ್ಣಿನ ಕಲಾವಿದರಿಗೆ ಅನ್ಯಾಯ: ಜಿಲ್ಲೆಯ ವಿವಿಧೆಡೆ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ನಡೆಯುತ್ತಿದ್ದು, ಅಧಿಕಾರಿಗಳು ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಶಿಗ್ಗಾಂವಿ ತಾಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಪಿಒಪಿ ಮೂರ್ತಿಗಳು ಕಂಡುಬಂದಿವೆ. ಬಂಕಾಪುರ, ದೇವಗಿರಿ, ಹರವಿ, ರಾಣಿಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಿಗೆ ಹೊರ ಜಿಲ್ಲೆಗಳಿಂದ ಪಿಒಪಿ ಮೂರ್ತಿಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಿಷೇಧದ ಆದೇಶ ಪಾಲನೆಯಾಗಲಿ: ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಬಂಧಿಸಿದಂತೆ 2017ರ ಜನವರಿಯಲ್ಲಿ ಹೈಕೋರ್ಟ್ ಆದೇಶ ನೀಡಿದ್ದು, ಪಿಒಪಿ ಮೂರ್ತಿಗಳ ಮಾರಾಟ ಮಾಡದಂತೆ ಸ್ಪಷ್ಟ ಸೂಚನೆ ಇದೆ. ಹೀಗಿದ್ದರೂ ಜಿಲ್ಲೆಯಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಜಿಲ್ಲಾದ್ಯಂತ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವ ಸ್ಥಳಗಳಿಗೆ ಅಧಿಕಾರಿಗಳು ತೆರಳಿ ನಿರ್ದಾಕ್ಷಿಣ್ಯವಾಗಿ ದಾಳಿ ನಡೆಸಿ ಮೂರ್ತಿಗಳನ್ನು ವಶಪಡಿಸಿಕೊಳ್ಳಬೇಕು. ಕೇವಲ ನಾಮಕಾವಸ್ಥೆಗೆ ಒಬ್ಬರು ಅಥವಾ ಇಬ್ಬರು ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡು ಪ್ರಚಾರ ಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲೆಲ್ಲಿ ಮಾರಾಟ ನಡೆಯುತ್ತಿದೆಯೋ ಅಲ್ಲೆಲ್ಲ ಸಮಗ್ರ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಸೀಜ್ ಮಾಡಿದ ಮೂರ್ತಿ ವಾಪಸ್: ದೇವಗಿರಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಸೀಜ್ ಮಾಡಿ ಬಳಿಕ ಪುನಃ ಮಾರಾಟಗಾರರಿಗೆ ವಾಪಸ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಿಒಪಿ ಮೂರ್ತಿಗಳ ಮಾರಾಟ ಸಂಪೂರ್ಣ ನಿಲ್ಲಿಸಿ ಮಣ್ಣಿನ ಗಣೇಶ ಮೂರ್ತಿ ಕಲಾವಿದರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಪಿಒಪಿ ಮೂರ್ತಿಗಳಿಂದ ಆಗುತ್ತಿರುವ ನಷ್ಟಕ್ಕೆ ಸ್ಥಳೀಯ ಮಣ್ಣಿನ ಮೂರ್ತಿ ಕಲಾವಿದರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಮೌನೇಶ ಕಮ್ಮಾರ, ಸಂಘದ ಉಪಾಧ್ಯಕ್ಷ ಸಂಜೀವಕುಮಾರ ಸಾತಮ್ಮನವರ, ಸದಸ್ಯರಾದ ಕಲ್ಲಪ್ಪ ಕಮ್ಮಾರ, ಸತೀಶ ಕಮ್ಮಾರ, ಸುರೇಶ ಕೊಂಗಿ ಹಾಗೂ ವಿಜಯ ಕಮ್ಮಾರ ಇತರರಿದ್ದರು.