ಸರ್ಕಾರ ಗ್ರಂಥಾಲಯಗಳಿಗೆ ವಿವಿಧ ಪುಸ್ತಕ ಒದಗಿಸುತ್ತಿದ್ದು, ದೇಶದ ಮಹನೀಯರು, ಕವಿ ಹಾಗೂ ಸಾಹಿತಿಗಳ ಕೃತಿಗಳು ದಿನಪತ್ರಿಕೆಗಳು ಓದುಗರಿಗೆ ಲಭ್ಯವಾಗುತ್ತಿವೆ.
ಹಗರಿಬೊಮ್ಮನಹಳ್ಳಿ: ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನ ಸಂಪಾದನೆಯ ಪ್ರಮುಖ ಕೇಂದ್ರಗಳಾದ ಗಂಥಾಲಯಗಳಿಗೆ ನಿರಂತರವಾಗಿ ಭೇಟಿ ನೀಡಬೇಕು. ಗ್ರಂಥಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಸಲಹೆ ನೀಡಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದ ಅರಿವು ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಗ್ರಂಥಾಲಯಗಳಿಗೆ ವಿವಿಧ ಪುಸ್ತಕ ಒದಗಿಸುತ್ತಿದ್ದು, ದೇಶದ ಮಹನೀಯರು, ಕವಿ ಹಾಗೂ ಸಾಹಿತಿಗಳ ಕೃತಿಗಳು ದಿನಪತ್ರಿಕೆಗಳು ಓದುಗರಿಗೆ ಲಭ್ಯವಾಗುತ್ತಿವೆ. ಆದರೆ ಅತಿಯಾದ ಮೊಬೈಲ್ ಬಳಕೆಯ ಹೆಚ್ಚಳದಿಂದ ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಮೊಬೈಲ್ ಬಿಡಿ ಪುಸ್ತಕ ಹಿಡಿಯಿರಿ ಎಂಬ ಹಿತವಚನ ಹೇಳಿದರು.
ಪಿಡಿಒ ಚಂದ್ರಶೇಖರ್ ಪ್ರಸ್ತಾವಿಕ ಮಾತನಾಡಿ, ಗ್ರಾಮದ ಗ್ರಂಥಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ₹೫೦ ಲಕ್ಷ ಅನುದಾನ ದೊರಕಿದೆ. ಪಂಚಾಯಿತಿ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಗ್ರಂಥಾಲಯ ಮೇಲ್ವಿಚಾರಕ ಪಾಂಡುರಂಗಪ್ಪ ಸೃಜನಶೀಲತೆಯಿಂದ ಗ್ರಾಮದ ಗ್ರಂಥಾಲಯ ರಾಜ್ಯದಲ್ಲಿಯೇ ಉತ್ತಮ ಮಾದರಿಯ ಗ್ರಂಥಾಲಯ ಎಂಬ ಹೆಗ್ಗಳಿಕೆ ಹೊಂದಿದೆ ಎಂದು ಶ್ಲಾಘಿಸಿದರು.ಗ್ರಂಥಾಲಯ ಮೇಲ್ವಿಚಾರಕ ಪಾಂಡುರಂಗಪ್ಪ ಮಾತನಾಡಿ, ೧೨ ದಾನಿಗಳಿಂದ ಸುಮಾರು ₹೯೦ಸಾವಿರ ಮೊತ್ತದ ಗ್ರಂಥಾಲಯ ಬಳಗದ ದತ್ತಿ ನಿಧಿ ಸಂಗ್ರಹವಾಗಿದ್ದು, ಬಡ್ಡಿ ಹಣದಲ್ಲಿ ಪ್ರತಿ ವರ್ಷವೂ ಗ್ರಂಥಾಲಯ ಸಪ್ತಾಹದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿದೆ. ಗ್ರಂಥಾಲಯದ ಅಭಿವೃದ್ಧಿಗೆ ದತ್ತಿ ನಿಧಿ ಸಂಗ್ರಹಿಸುವಲ್ಲಿ ನೆರವು ನೀಡಿದ ದಾನಿಗಳ ಸಹಕಾರ ಸ್ಮರಿಸಿದರು
ನಿವೃತ್ತ ಶಿಕ್ಷಕ ಬಣಕಾರ ಶಿವಾನಂದಪ್ಪ ಮಾತನಾಡಿದರು. ಗ್ರಂಥಾಲಯ ಸಪ್ತಾಹ ನಿಮಿತ್ತ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಆಟೋಟಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.ಇದೇ ವೇಳೆ ಗುತ್ತಿಗೆದಾರ ಬಿ. ದೇವಿಪ್ರಸಾದ್ ಹಾಗೂ ತಾಪಂ ಮಾಜಿ ಸದಸ್ಯ ಪಿ.ಕೊಟ್ರೇಶ್ ತಲಾ ₹೫ ಸಾವಿರ ದತ್ತಿ ನಿಧಿ ನೀಡಿದರು. ಸಮಾರಂಭದಲ್ಲಿ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಕ್ಕಿ ಕೊಟ್ರಬಸಪ್ಪ, ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಎಸ್.ವಿ. ಪಾಟೀಲ್, ತಂಬ್ರಹಳ್ಳಿ ಕೆಒಎಫ್ ಮಾಜಿ ಅಧ್ಯಕ್ಷ ಸುಣಗಾರ ಪರಶುರಾಮ, ಜ್ಯೋತಿ ಬಸವರಾಜ್, ಆಶಾ, ದೈಹಿಕ ಶಿಕ್ಷಕ ಪ್ರಶಾಂತ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೆ. ನಾಗರಾಜ್ ಪ್ರಾರ್ಥಿಸಿದರು. ಶಿಕ್ಷಕರಾದ ಪ್ರದೀಪ್ ಹಾಗೂ ಕೊಟ್ರಗೌಡ ಕಾರ್ಯಕ್ರಮ ನಿರ್ವಹಿಸಿದರು.