ಹುಡುಗರು, ಹಿರಿಯರೊಂದಿಗೆ ವಿವಿಧ ಮಟ್ಟಿನ ವಿವಿಧ ಹೆಜ್ಜೆಯ ತಿರುಣಿ ಕುಣಿತಕ್ಕೆ ಗೆಜ್ಜೆಕಟ್ಟಿ ಕುಣಿಯುವ ಮೂಲಕ ವಿಶೇಷ ಮೆರಗು ನೀಡಿದರು. ಪಟ್ಟಣವಲ್ಲದೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ರಂಗಕುಣಿತವನ್ನು ವೀಕ್ಷಿಸಲು ಅರಳಿಕಟ್ಟೆ ಬಳಿ ಜಮಾಯಿಸಿದ್ದರು. ರಂಗಬೀದಿಯಿಂದ ಆರಂಭವಾದ ರಂಗಕುಣಿತ ರಥಬೀದಿ, ರಾಜ್ಯ ಹೆದ್ದಾರಿ, ಹೊಸಬೀದಿ, ಅರಳಿಕಟ್ಟೆ ಮಾರ್ಗವಾಗಿ ಕಿಕ್ಕೇರಮ್ಮ ಗುಡಿಯವರೆಗೆ ಸಾಗಿತು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಪುಟಾಣಿ ಮಕ್ಕಳು ರಂಗ ಕುಣಿತಕ್ಕೆ ಗೆಜ್ಜೆ ಕಟ್ಟಿ ಕುಣಿಯುವ ಮೂಲಕ ಹಬ್ಬಕ್ಕೆ ರಂಗು ತಂದರು.

ಹೋಬಳಿಯಲ್ಲಿಯೇ ವಿಶೇಷವಾಗಿ ನಡೆಯುವ ರಂಗದ ಹಬ್ಬಕ್ಕಾಗಿ ತಿಂಗಳುಗಟ್ಟಲೆ ಯುವಕರು, ಹಿರಿಯರ ಜೊತೆಗೂಡಿ ಉಪ್ಪರಿಗೆ ಬಸವಣ್ಣನ ಸನ್ನಿಧಿಯಲ್ಲಿ ರಂಗ ತಾಲೀಮು ನಿತ್ಯ ಹಮ್ಮಿಕೊಂಡಿದ್ದರು. ರಂಗಾಸಕ್ತರು ನಿತ್ಯವೂ ರಂಗಕುಣಿತ ಧಾರಿಗಳಿಗಾಗಿ ಅನ್ನ ಪ್ರಸಾದ ಏರ್ಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದರು.

ಯುಗಾದಿ ಸಂಭ್ರಮವನ್ನು ಸವಿದು ಮರುದಿನವಾದ ಶುಕ್ರವಾರ ಉಪ್ಪರಿಗೆ ಬಸವಣ್ಣ ಗುಡಿಯ ಮುಂದೆ ರಂಗ ಕುಣಿತಕ್ಕೆ ಚಾಲನೆ ನೀಡಲಾಯಿತು. ಹಿರಿಯ ರಂಗ ಕುಣಿತ ಕಲಾವಿದ ಕೆ.ಎನ್. ನಾಗೇಗೌಡ(ನಾಗಣ್ಣ) ಮಾರ್ಗದರ್ಶನದಲ್ಲಿ ಯುವಕರೊಂದಿಗೆ ಪುಟಾಣಿ ಮಕ್ಕಳು ಕಾಲಿಗೆ ಗೆಜ್ಜೆ, ಹಣೆಗೆ ತಿಲಕವಿಟ್ಟುಕೊಂಡು ಕೈಯಲ್ಲಿ ಕೇಸರಿ ಟವಲ್ ಹಿಡಿದು ಕುಣಿಯಲು ತುದಿಗಾಲಲ್ಲಿ ನಿಂತಿದ್ದರು.

ಹುಡುಗರು, ಹಿರಿಯರೊಂದಿಗೆ ವಿವಿಧ ಮಟ್ಟಿನ ವಿವಿಧ ಹೆಜ್ಜೆಯ ತಿರುಣಿ ಕುಣಿತಕ್ಕೆ ಗೆಜ್ಜೆಕಟ್ಟಿ ಕುಣಿಯುವ ಮೂಲಕ ವಿಶೇಷ ಮೆರಗು ನೀಡಿದರು. ಪಟ್ಟಣವಲ್ಲದೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ರಂಗಕುಣಿತವನ್ನು ವೀಕ್ಷಿಸಲು ಅರಳಿಕಟ್ಟೆ ಬಳಿ ಜಮಾಯಿಸಿದ್ದರು. ರಂಗಬೀದಿಯಿಂದ ಆರಂಭವಾದ ರಂಗಕುಣಿತ ರಥಬೀದಿ, ರಾಜ್ಯ ಹೆದ್ದಾರಿ, ಹೊಸಬೀದಿ, ಅರಳಿಕಟ್ಟೆ ಮಾರ್ಗವಾಗಿ ಕಿಕ್ಕೇರಮ್ಮ ಗುಡಿಯವರೆಗೆ ಸಾಗಿತು.

ನಂತರ ಕಿಕ್ಕೇರಮ್ಮ ದೇವರ ಗುಡಿ ಮುಂದೆ ಸಾಗಿ ದೇವರ ಪ್ರವೇಶದ್ವಾರದ ಗರುಢಗಂಭದ ಮುಂದೆ ದೇವಿಗೆ ರಂಗದ ಗೆಜ್ಜೆಯನ್ನು ಒಪ್ಪಿಸಿ ರಂಗನ ಕುಣಿತವನ್ನು ಸಮರ್ಪಿಸಿದರು. ತೆಂಗಿನಘಟ್ಟದ ತಮಟೆ ವಾದ್ಯಗಾರರು ರಂಗಕುಣಿತಕ್ಕೆ ಸಾಥ್ ನೀಡಿದರು.

ಅಂತಿಮವಾಗಿ ದೇವಿ ಗುಡಿಗೆ ತೆರಳಿ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆದರು. ದೇವರ ಪ್ರಸಾದ ಸ್ವೀಕರಿಸಿ ರೈತರ ಬದುಕು ಹಸನಾಗಲು, ಸಕಾಲದಲ್ಲಿ ಮಳೆ ಬೀಳಲಿ. ಭೂಮಿ ಹಸನಾಗಿ ಸಮೃದ್ಧ ಬೆಳೆ ಸಿಗಲಿ. ಗ್ರಾಮಾಭಿವೃದ್ದಿಯಾಗಲಿ ಎಂದು ಪ್ರಾರ್ಥಿಸಿದರು.