ಸಾರಾಂಶ
ಜಿಲ್ಲೆಯಲ್ಲಿ ಜನಿಸಿದ ಇಬ್ಬರೂ ಸಾಹಿತಿಗಳು ಇಡೀ ನಾಡಿನ ಹೆಮ್ಮೆಯಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯವಾಗಿವೆ. ಇವರಿಬ್ಬರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಾರಂಭಿಸಿರುವ ಟ್ರಸ್ಟ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರ ಎಲ್ಲಾ ರೀತಿಯ ಅಗತ್ಯ ನೆರವನ್ನು ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಪು.ತಿ.ನರಸಿಂಹಾಚಾರ್ ಹಾಗೂ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಚಟುವಟಿಕೆಗಳಿಗೆ ನೀಡಲಿದ್ದು, ಅದು ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಬೆಂಗಳೂರಿನ ವಿಕಾಸಸೌಧ ಸಭಾಂಗಣದಲ್ಲಿ ಪು.ತಿ.ನ ಹಾಗೂ ಕೆ.ಎಸ್.ನ ಟ್ರಸ್ಟ್‌ಗಳ ಅಧ್ಯಕ್ಷರು, ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನಿಸಿದ ಇಬ್ಬರೂ ಸಾಹಿತಿಗಳು ಇಡೀ ನಾಡಿನ ಹೆಮ್ಮೆಯಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯವಾಗಿವೆ. ಇವರಿಬ್ಬರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಾರಂಭಿಸಿರುವ ಟ್ರಸ್ಟ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದರು.ಮೇಲುಕೋಟೆಯಲ್ಲಿರುವ ಪು.ತಿ.ನ ಅವರ ಮನೆಯನ್ನು ಈಗಾಗಲೇ ನವೀಕರಣಗೊಳಿಸಲಾಗಿದೆ. ಸಮಾಧಿ ಸ್ಥಳ ಅಭಿವೃದ್ಧಿ ಮಾಡಲು ಬಹಳ ದಿನಗಳಿಂದ ಬೇಡಿಕೆಯಿದೆ. ಬಯಲು ರಂಗಮಂದಿರಕ್ಕೆ ಮೇಲ್ಛಾವಣಿ ಹಾಕಿಸುವ ಕಾರ್ಯ ಮತ್ತು ಅವರ ಸಾಹಿತ್ಯಗಳ ಮರುಮುದ್ರಣ ಹಾಗೂ ಜನಪ್ರಿಯಗೊಳಿಸುವ ಪ್ರಯತ್ನಗಳಿಗೆ ಅಗತ್ಯ ನೆರವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಮಾಡಲಾಗುವುದು ಎಂದರು.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಕೆ.ಎಸ್.ನರಸಿಂಹಸ್ವಾಮಿ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದು, ಕೆ.ಎಸ್.ನ ರವರಿಗೆ ಸ್ಪೂರ್ತಿ ನೀಡಿದ ಕೆರೆಯನ್ನು ಸಣ್ಣ ನೀರಾವರಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ನೆರವಿನೊಂದಿಗೆ ವಿಹಾರ ಧಾಮವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಎರಡೂ ಟ್ರಸ್ಟ್‌ಗಳಿಗೆ ಹೊಸ ಸ್ವರೂಪ ನೀಡಲಾಗುವುದೆಂದು ಎಂದು ತಿಳಿಸಿದರು.
ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಕೃಷ್ಣೇಗೌಡ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಭಾಗವಹಿಸಿದ್ದರು.